Site icon Vistara News

Recession In Germany: ವಿಶ್ವದ 4ನೇ ಬೃಹತ್‌ ವಿತ್ತ ರಾಷ್ಟ್ರ ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ; ಭಾರತಕ್ಕೂ ಹೊಡೆತ?

Germany People

Germany Enters Recession: GDP Shrinks By 0.3 In World’s 4th Largest Economy

ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂಬ ತಜ್ಞರ ಅಭಿಪ್ರಾಯವು ನಿಜವಾಗುವ ಸಮಯ ಸನ್ನಿಹಿತವಾಗಿದೆ. ಜಗತ್ತಿನಲ್ಲಿಯೇ ನಾಲ್ಕನೇ ಬೃಹತ್‌ ಆರ್ಥಿಕತೆ ಹೊಂದಿರುವ ರಾಷ್ಟ್ರವಾದ, ಯುರೋಪಿನಲ್ಲಿಯೇ ಬೃಹತ್‌ ಆರ್ಥಿಕತೆ ಹೊಂದಿರುವ ರಾಷ್ಟ್ರ ಎನಿಸಿದ ಜರ್ಮನಿಯೇ (Recession In Germany) ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದೆ. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜರ್ಮನಿ ಜಿಡಿಪಿಯು ಶೇ.0.3ರಷ್ಟು ಕುಸಿದಿದೆ. ಇದರಿಂದಾಗಿ ದೇಶವು ಅಧಿಕೃತವಾಗಿ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿದಂತಾಗಿದೆ.

2022ರ ನಾಲ್ಕನೇ ತ್ರೈಮಾಸಿಕದಲ್ಲಿ ಜರ್ಮನಿಯ ಜಿಡಿಪಿಯು ಶೇ.0.5ರಷ್ಟು ಕುಸಿದಿತ್ತು. ಇದಾದ ಬಳಿಕ ಜರ್ಮನಿಯ ಆರ್ಥಿಕತೆಯು ಚೇತರಿಕೆ ಹೊಂದುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿತ್ತು. ಆದರೆ, 2023ರ ಮೊದಲ ತ್ರೈಮಾಸಿಕದಲ್ಲಿ ಶೇ.0.3ರಷ್ಟು ಕುಸಿದಿದೆ. “ಜರ್ಮನಿಯ ಆರ್ಥಿಕತೆ ಬೆಳವಣಿಗೆಯು ಅಚ್ಚರಿಯ ರೀತಿಯಲ್ಲಿ ನಕಾರಾತ್ಮಕವಾಗಿದೆ” ಎಂದು ಜರ್ಮನಿ ಹಣಕಾಸು ಸಚಿವ ಕ್ರಿಶ್ಟಿಯನ್‌ ಲಿಂಡ್ನೆರ್‌ ಅವರೇ ಹೇಳಿದ್ದಾರೆ.

ಯಾವ ದೇಶಕ್ಕೆ ಹಿಂಜರಿತದ ಸಾಧ್ಯತೆ ಎಷ್ಟಿದೆ?

ಕೊರೊನಾ ಹೊಡೆತದಿಂದ ಜಗತ್ತಿನ ಹತ್ತಾರು ದೇಶಗಳು ತಾತ್ಕಾಲಿಕವಾಗಿ ಚೇತರಿಸಿಕೊಂಡಿದ್ದರೂ ಪ್ರಸಕ್ತ ವರ್ಷದಲ್ಲಿ ಆರ್ಥಿಕ ಹಿಂಜರಿತ ನಿಶ್ಚಿತ ಎಂದೇ ಹೇಳಲಾಗುತ್ತಿತ್ತು. ಅದರಂತೆ, ಜರ್ಮನಿಯಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಡಾಲರ್‌ ಎದುರು ಯುರೋ ಮೌಲ್ಯವು ಶೇ.0.02ರಷ್ಟು ಕುಸಿದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲೂ ಜರ್ಮನಿಯು ಸಂಕಷ್ಟ ಎದುರಿಸಲಿದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Money secrets : ಉಳಿತಾಯದ ಅಭ್ಯಾಸ ಭಾರತೀಯರನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಿದೆ: ಹರಿಪ್ರಕಾಶ್‌ ಕೋಣೆಮನೆ

ಭಾರತಕ್ಕೂ ಇದೆಯೇ ಆತಂಕ?

ಕೊರೊನಾ ನಂತರ ಜಗತ್ತಿಗೇ ಆರ್ಥಿಕ ಹಿಂಜರಿತ ಭೀತಿ ಕಾಡುತ್ತಿದ್ದರೂ ಜಾಗತಿಕ ವರದಿಗಳು, ಲೆಕ್ಕಾಚಾರಗಳು ಭಾರತದ ಪರ ಇರುವುದರಿಂದ ದೇಶದಲ್ಲಿ ಆರ್ಥಿಕ ಹಿಂಜರಿತದ ಭೀತಿ ಇಲ್ಲ ಎಂದೇ ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೇ (IMF) ಭಾರತದ ಆರ್ಥಿಕತೆ ಸಕಾರಾತ್ಮಕವಾಗಿದೆ ಎಂದು ತಿಳಿಸಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಭಾರತದ ಜಿಡಿಪಿ ಬೆಳವಣಿಗೆ ಶೇ.7ಕ್ಕೆ ಏರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಸದ್ಯಕ್ಕೆ ಯಾವುದೇ ಆತಂಕ ಇಲ್ಲ ಎನ್ನಲಾಗುತ್ತಿದೆ. ಅಲ್ಲದೆ, ಜರ್ಮನಿಯು ಆರ್ಥಿಕ ಹಿಂಜರಿತದಿಂದ ಬಳಲಿ, ಆರ್‌ಬಿಐ ಲೆಕ್ಕಾಚಾರದಂತೆ ಭಾರತದ ಆರ್ಥಿಕತೆ ಬಲಿಷ್ಠವಾದರೆ ಮುಂದಿನ ದಿನಗಳಲ್ಲಿ ಭಾರತವು ವಿಶ್ವದ ನಾಲ್ಕನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಸದ್ಯ, ಭಾರತವು ಜಗತ್ತಿನಲ್ಲಿಯೇ ಬೃಹತ್‌ ಆರ್ಥಿಕತೆ ಹೊಂದಿರುವ ಐದನೇ ರಾಷ್ಟ್ರವಾಗಿದೆ.

Exit mobile version