Site icon Vistara News

Indian Tricolour: ಲಂಡನ್‌ ಹೈಕಮಿಷನ್‌ ಮೇಲೆ ಬೃಹತ್‌ ತಿರಂಗಾ ಹಾರಿಸಿ ಖಲಿಸ್ತಾನಿಗಳಿಗೆ ಭಾರತ ತಿರುಗೇಟು

Giant Tricolour adorns Indian High Commission in UK after Khalistani supporters pull down Indian flag

Giant Tricolour adorns Indian High Commission in UK after Khalistani supporters pull down Indian flag

ಲಂಡನ್‌: ಖಲಿಸ್ತಾನಿಗಳ ಪರ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ಪಂಜಾಬ್‌ನಲ್ಲಿ ತೀವ್ರ ಶೋಧ ನಡೆಸುತ್ತಿರುವುದನ್ನು ಖಂಡಿಸಿ ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ದಾಳಿ ಮಾಡಿದ ಖಲಿಸ್ತಾನಿಗಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಹೈಕಮಿಷನ್‌ ಮೇಲೆ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು (Indian Tricolour) ಖಲಿಸ್ತಾನಿಗಳು ಕೆಳಗಿಸಿದ್ದಕ್ಕೆ ಪ್ರತಿಯಾಗಿ, ಭಾರತವು ಬೃಹತ್‌ ತಿರಂಗಾವನ್ನು ಅಳವಡಿಸುವ ಮೂಲಕ ತಿರುಗೇಟು ನೀಡಿದೆ.

ಖಲಿಸ್ತಾನಿ ಹೋರಾಟಗಾರರು ಭಾರತದ ತಿರಂಗಾವನ್ನು ಕೆಳಗಿಳಿಸಿದ ಬಳಿಕ, ಬೃಹತ್‌ ತಿರಂಗಾ ಅಳವಡಿಸಿರುವ ಕುರಿತು ಬಿಜೆಪಿ ನಾಯಕ ಜೈವೀರ್‌ ಶೆರ್ಗಿಲ್‌ ಅವರು ಮಾಹಿತಿ ನೀಡಿದ್ದಾರೆ. ಹಾಗೆಯೇ, ಬೃಹತ್‌ ತಿರಂಗಾದ ಫೋಟೊವನ್ನೂ ಶೇರ್‌ ಮಾಡಿದ್ದಾರೆ. “ನಮ್ಮ ದೇಶದ ಧ್ವಜ ಇನ್ನೂ ಮೇಲೆಯೇ ಇರಲಿದೆ. ಲಂಡನ್‌ನಲ್ಲಿರುವ ಹೈಕಮಿಷನ್‌ ಕಚೇರಿ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಬ್ರಿಟನ್‌ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಬೃಹತ್‌ ತಿರಂಗಾ ಫೋಟೊ

ಹಾಗೆಯೇ, ಪಂಜಾಬಿಗಳ ಕುರಿತು ಟ್ವೀಟ್‌ ಮಾಡಿರುವ ಅವರು, “ಭಾರತದ ರಕ್ಷಣೆಗೆ ಪಂಜಾಬ್‌ ಹಾಗೂ ಪಂಜಾಬಿಗಳು ನೀಡಿದ ಕೊಡುಗೆ ಅಪಾರವಾಗಿದೆ. ಹಾಗಾಗಿ, ಬ್ರಿಟನ್‌ನಲ್ಲಿ ಕುಳಿತು ಅಕ್ಷಮ್ಯ ಎಸಗಿದವರು ಎಂದಿಗೂ ಪಂಜಾಬ್‌ಅನ್ನು ಪ್ರತಿನಿಧಿಸುವುದಿಲ್ಲ” ಎಂದು ಹೇಳಿದ್ದಾರೆ. ಆ ಮೂಲಕ ಬ್ರಿಟನ್‌ನಲ್ಲಿ ಕುಕೃತ್ಯ ಎಸಗಿದ ಖಲಿಸ್ತಾನಿ ಹೋರಾಟಗಾರರ ನಡೆಯನ್ನು ಖಂಡಿಸಿದ್ದಾರೆ.

ತಿರಂಗಾ ಕೆಳಗಿಳಿಸಿದ ವಿಡಿಯೊ

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ನುಗ್ಗಿದ ಖಲಿಸ್ತಾನಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಹಾಗೆಯೇ, ಉಗ್ರರಲ್ಲಿ ಒಬ್ಬ ಹೈಕಮಿಷನ್‌ ಕಚೇರಿ ಮೇಲೇರಿ, ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾನೆ. ಅಮೃತ್‌ಪಾಲ್‌ ಸಿಂಗ್‌ಗಾಗಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸೇಡಿನ ಕ್ರಮವಾಗಿ ಖಲಿಸ್ತಾನದ ಉಗ್ರರು ಇಂತಹ ಕೃತ್ಯ ಎಸಗಿದ್ದಾರೆ. ಹೈಕಮಿಷನ್‌ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿರುವ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ.

“ಭಾರತದ ಹೈಕಮಿಷನ್‌ ಕಚೇರಿ ಮೇಲಿನ ದಾಳಿಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಹಾಗೆಯೇ, ದೆಹಲಿಯಲ್ಲಿರುವ ಬ್ರಿಟನ್‌ ರಾಯಭಾರಿಗೆ ಸಮನ್ಸ್‌ ಜಾರಿಗೊಳಿಸಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ. ಹಾಗೆಯೇ, ದಾಳಿ ಮಾಡಿದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿಯೂ ಆಗ್ರಹಿಸಿದೆ.

ಇದನ್ನೂ ಓದಿ: ಅಮೃತ್‌ಪಾಲ್‌ ಬಂಧನಕ್ಕೆ ಶೋಧ; ಬ್ರಿಟನ್‌ನಲ್ಲಿ ಭಾರತದ ಹೈಕಮಿಷನ್‌ ಮೇಲೆ ಖಲಿಸ್ತಾನಿಗಳ ದಾಳಿ, ತಿರಂಗಾ ತೆರವು

Exit mobile version