ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italy PM Giorgia Meloni) ತಮ್ಮ ಸಂಗಾತಿ ಆ್ಯಂಡ್ರಿಯಾ ಗಿಯಾಂಬ್ರುನೊ (Andrea Giambruno) ಜತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಶುಕ್ರವಾರ ಘೋಷಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಮೂಲಕ ಸುಮಾರು 10 ವರ್ಷಗಳ ಸಂಬಂಧ ಕೊನೆಗೊಂಡಿದೆ. ಸದ್ಯ ಮೆಲೋನಿ ಬ್ರೇಕಪ್ ಮಾಡಿಕೊಳ್ಳಲಿರುವ ಕಾರಣದ ಬಗ್ಗೆ ಚರ್ಚೆ ಆರಂಭಗೊಂಡಿದೆ.
ಗ್ರೂಪ್ ಸೆಕ್ಸ್ ಬಗ್ಗೆ ಮಾತನಾಡಿದ್ದ ಗಿಯಾಂಬ್ರುನೊ
ಪತ್ರಕರ್ತ ಗಿಯಾಂಬ್ರುನೊ ಜತೆ ಮೆಲೋನಿ ಸುಮಾರು 10 ವರ್ಷ ಸಂಬಂಧ ಹೊಂದಿದ್ದರು. ಗಿಯಾಂಬ್ರುನೊ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದು ಮೆಲೋನಿ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಇತ್ತೀಚೆಗೆ ಗಿಯಾಂಬ್ರುನೊ ಅವರ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಅವರು ಅಸಭ್ಯ ಭಾಷೆಯನ್ನು ಬಳಸುತ್ತಿರುವುದು ಮತ್ತು ಮಹಿಳಾ ಸಹೋದ್ಯೋಗಿಗಳ ಜತೆ ಕೆಟ್ಟ ಮಾತುಗಳನ್ನಾಡುತ್ತಿರುವುದು ಕಂಡುಬಂದಿತ್ತು. ʼʼನಿಮ್ಮನ್ನು ಯಾಕೆ ಮೊದಲೇ ನಾನು ಭೇಟಿಯಾಗಲಿಲ್ಲ?ʼʼ ಎಂದು ಗಿಯಾಂಬ್ರುನೊ ಮಹಿಳಾ ಸಿಬ್ಬಂದಿ ಬಳಿ ಪ್ರಶ್ನಿಸುತ್ತಾರೆ.
ಗುರುವಾರ ಪ್ರಸಾರವಾದ ಎರಡನೇ ಆಡಿಯೊ ರೆಕಾರ್ಡಿಂಗ್‌ನಲ್ಲಿ, ಗಿಯಾಂಬ್ರುನೊ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಗುಂಪು ಲೈಂಗಿಕತೆಯಲ್ಲಿ ಭಾಗವಹಿಸಿದರೆ ಅವರೊಂದಿಗೆ ಕೆಲಸ ಮಾಡಬಹುದು ಎಂದು ಮಹಿಳಾ ಸಹೋದ್ಯೋಗಿಗಳ ಬಳಿ ಹೇಳಿತ್ತಿರುವುದೂ ಸ್ಪಷ್ಟವಾಗಿದೆ. ಈ ಎಲ್ಲ ಕಾರಣಗಳಿಂದ ಮೆಲೋನಿ ದೂರವಾಗಿದ್ದಾರೆ ಎನ್ನಲಾಗಿದೆ.
46 ವರ್ಷದ ಪ್ರಧಾನಿ ತಮ್ಮ ಅಧಿಕಾರದ ಮೊದಲ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಬ್ರೇಕಪ್ ಘೋಷಿಸಿದ್ದಾರೆ. ಈ ಇಬ್ಬರಿಗೆ 7 ವರ್ಷದ ಓರ್ವ ಪುತ್ರಿ ಇದ್ದಾಳೆ. 42ರ ಹರೆಯದ ಗಿಯಾಂಬ್ರುನೊ ಅನ್ನು ಮೆಲೋನಿ 2014ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಟಿವಿ ಸ್ಟುಡಿಯೋದಲ್ಲಿ ಇವರಿಬ್ಬರ ಪರಿಚಯವಾಗಿತ್ತು. ತನ್ನ ಖಾಸಗಿ ಜೀವನದಲ್ಲಿನ ತೊಂದರೆಗಳಿಂದ ವಿಚಲಿತವಾಗುವುದಿಲ್ಲ ಎಂದು ಮೆಲೋನಿ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಗಿಯಾಂಬ್ರುನೊ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಬಗ್ಗೆ ಹಗುರವಾಗಿ ಮಾತನಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆ ಕಾರ್ಯಕ್ರಮ ಪ್ರಸಾರವಾದ ನಂತರ ಮಾತನಾಡಿದ್ದ ಮೆಲೋನಿ, ಗಿಯಾಂಬ್ರುನೊ ನೀಡಿದ ಹೇಳಿಕೆಯಿಂದಾಗಿ ತನ್ನ ವ್ಯಕ್ತಿತ್ವವನ್ನು ಅಳೆಯಬಾರದು ಮತ್ತು ಭವಿಷ್ಯದಲ್ಲಿ ಆತನ ನಡವಳಿಕೆಯ ಬಗ್ಗೆ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿದ್ದರು.
ಮೆಲೋನಿ ಬರೆದುಕೊಂಡಿದ್ದೇನು?
“ನಮ್ಮ ಮಾರ್ಗಗಳು ಸ್ವಲ್ಪ ಸಮಯದಿಂದ ಭಿನ್ನವಾಗಿವೆ. ಮತ್ತು ಅದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ. ಸುಮಾರು 10 ವರ್ಷಗಳ ನಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ. ನಮ್ಮ ಸ್ನೇಹವನ್ನು ನಾನು ರಕ್ಷಿಸುತ್ತೇನೆ. ನಮ್ಮನ್ನು ಪ್ರೀತಿಸುವ ಏಳು ವರ್ಷದ ಮಗಳನ್ನು ನಾನು ಕಾಪಾಡುತ್ತೇನೆ. ಇಲ್ಲಿಯ ತನಕ ಉತ್ತಮ ಸಂಗಾತಿಯಾಗಿದ್ದಕ್ಕೆ ಗಿಯಾಂಬ್ರುನೊಗೆ ಧನ್ಯವಾದ ಹೇಳುತ್ತೇನೆʼʼ ಎಂದು ಮೆಲೋನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮೆಲೋನಿ 22 ಅಕ್ಟೋಬರ್ 2022ರಂದು ಇಟಲಿಯ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಅವರದ್ದು. 2006ರಿಂದ ಚೇಂಬರ್ ಆಫ್ ಡೆಪ್ಯೂಟೀಸ್ ಸದಸ್ಯರಾಗಿರುವ ಅವರು 2020ರಿಂದ ಯುರೋಪಿಯನ್ ಕನ್ಸರ್ವೇಟಿವ್ಸ್ ಮತ್ತು ರಿಫಾರ್ಮಿಸ್ಟ್ ಪಾರ್ಟಿ( European Conservatives and Reformists Party) ಅಧ್ಯಕ್ಷೆಯಾಗಿದ್ದಾರೆ.
ಇದನ್ನೂ ಓದಿ: Giorgia Meloni: ಮೋದಿ ಜತೆಗಿನ ವಿಡಿಯೊ ಟ್ರೋಲ್ ಬೆನ್ನಲ್ಲೇ ಇಟಲಿ ಪ್ರಧಾನಿ ಮೆಲೋನಿ ಬ್ರೇಕಪ್!