ಬಾಗ್ದಾದ್: ಆಧುನಿಕ ಉಡುಗೆ ಧರಿಸಿದ್ದಾಳೆ ಎಂಬ ಕಾರಣಕ್ಕೆ ಯುವಕರ ಗುಂಪೊಂದು 17 ವರ್ಷದ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ (Girl attacked) ಇರಾಕ್‌ನಲ್ಲಿ ನಡೆದಿದೆ. ಡಿಸೆಂಬರ್ 30ರಂದು ಇರಾಕ್‌ನಲ್ಲಿ ನಡೆದ ಮೋಟಾರು ಸೈಕಲ್ ರೇಸ್ ವೇಳೆ ಈ ಘಟನೆ ನಡೆದಿದ್ದು, ಅದರ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿದೆ.
ಇದನ್ನೂ ಓದಿ: Crime Rate : 2022ರಲ್ಲಿ ರಾಜಧಾನಿಯಲ್ಲಿ 172 ಕೊಲೆ, 153 ಅತ್ಯಾಚಾರ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಯುವತಿಯು ರೇಸ್‌ನಲ್ಲಿ ಭಾಗವಹಿಸಿದ್ದ ರೈಡರ್‌ಗಳಿಗೆ ತೊಂದರೆಯುಂಟು ಮಾಡಿದ್ದಾಳೆ ಎಂದೂ ಯುವಕರು ದೂರಿರುವುದಾಗಿ ವರದಿಯಾಗಿದೆ. ಸ್ಕರ್ಟ್ ಮತ್ತು ಟಾಪ್ ತೊಟ್ಟ ಯುವತಿ ಜನರಿಂದ ತಪ್ಪಿಸಿಕೊಂಡು ದೂರ ನಡೆಯುತ್ತಿರುವ ವಿಡಿಯೊ ಹೊರಬಿದ್ದಿದೆ. ಅದರಲ್ಲಿ ಯುವಕರ ದಂಡು ಆಕೆಯನ್ನು ಹಿಂಬಾಲಿಸಿ, ಕಾಲಿನಲ್ಲಿ ಒದ್ದು ಹಲ್ಲೆ ಮಾಡಿರುವುದನ್ನೂ ಕಾಣಬಹುದು. ಈ ದೃಶ್ಯವನ್ನು ಅಲ್ಲಿದ್ದ ಸಾಕಷ್ಟು ಮಂದಿ ವಿಡಿಯೊ ಕೂಡ ಮಾಡಿಕೊಂಡಿದ್ದಾರೆ.
ಯುವತಿ ರೇಸ್ ನೋಡುವುದಕ್ಕೆ ತನ್ನ ಸ್ನೇಹಿತನೊಂದಿಗೆ ಬಂದಿದ್ದಳು. ಯುವಕರ ದಂಡು ಆಕೆಯ ಮೇಲೆ ಹಲ್ಲೆ ನಡೆಸಲು ಆರಂಭಿಸಿದಾಗ ಸ್ನೇಹಿತ ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾನೆ. ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಲ್ಲಿಂದ ಪರಾರಿಯಾಗುವುದಕ್ಕೂ ಪ್ರಯತ್ನಿಸಿದ್ದಾನೆ. ಆದರೆ ಅದಕ್ಕೆ ಅವಕಾಶ ಮಾಡಿಕೊಡದ ಯುವಕರು ಆತನಿಗೂ ಥಳಿಸಿದ್ದಾರೆ.
ಯುವತಿಗೆ ಸಾಕಷ್ಟು ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Viral Video | ಮನುಷ್ಯನಂತೆಯೇ ಇತ್ತು ಆದರೆ ಮನುಷ್ಯನಲ್ಲ, ವಿಚಿತ್ರ ಅನುಭವ ಹಂಚಿಕೊಂಡ ದಂಪತಿ, ಇಲ್ಲಿದೆ ವಿಡಿಯೊ