ಕರಾಚಿ: ಪಾಕಿಸ್ತಾದಲ್ಲೊಂದು ಮರ್ಯಾದಾ ಹತ್ಯೆ (Honour killing) ನಡೆದಿದೆ. ಹೊಸದಾಗಿ ಮದುವೆಯಾದ ಯುವತಿಯನ್ನು ಆಕೆಯ ತಂದೆ, ಕರಾಚಿಯ ಸಿಟಿ ಕೋರ್ಟ್ ಗೇಟ್ನಲ್ಲಿಯೇ ಗುಂಡಿಟ್ಟು ಕೊಂದಿದ್ದಾರೆ. ಆಕೆ 19 ವರ್ಷದ ಹುಡುಗಿ. ವೈದ್ಯನೊಬ್ಬನನ್ನು ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡೇ ಮದುವೆಯಾಗಿದ್ದಳು. ತಾವೆಲ್ಲ ವಿರೋಧಿಸಿದರೂ ಮಗಳು ಅವನನ್ನೇ ಮದುವೆಯಾದಳು ಎಂದು ಆಕ್ರೋಶಗೊಂಡ ಅಪ್ಪ ಅಮೀರ್ ಜಾನ್ ಮೆಹ್ಸೂದ್ ‘ಮರ್ಯಾದೆ’ ಹೆಸರಲ್ಲಿ ಪುತ್ರಿಗೇ ಗುಂಡಿಟ್ಟು, ಈಗ ಅರೆಸ್ಟ್ ಆಗಿದ್ದಾನೆ.
ಪಾಕಿಸ್ತಾನದಲ್ಲಿ ಈ ಮರ್ಯಾದಾ ಹತ್ಯೆ ಹೊಸದಲ್ಲ. ಮುಸ್ಲಿಮರಲ್ಲೂ ಕೆಳಜಾತಿ ಮದುವೆಗೆ ಅಪಾರ ವಿರೋಧವಿದೆ. ಮನೆಯವರ ವಿರೋಧದ ಮಧ್ಯೆ ಮದುವೆಯಾದರೆ, ಮನೆಮಗಳಿಗೇ ಗುಂಡಿಟ್ಟು ಕೊಲ್ಲುತ್ತಾರೆ. ಹಾಗೇ, ಈ ಅಮೀರ್ ಜಾನ್ ಮೆಹ್ಸೂದ್ ಕೂಡ ಅದೇ ಹಾದಿಯನ್ನೇ ತುಳಿದಿದ್ದಾನೆ.
ಇದನ್ನೂ ಓದಿ: Gokulraj Murder | ಮರ್ಯಾದಾ ಹತ್ಯೆ, ಸಂತ್ರಸ್ತ ಜೀವಂತವಾಗಿ ಕಂಡಿದ್ದ ಸ್ಥಳಕ್ಕೇ ಭೇಟಿ ನೀಡಲು ಜಡ್ಜ್‌ಗಳ ತೀರ್ಮಾನ, ಇದು ಅಪರೂಪ
ಮಗಳು ವೈದ್ಯನನ್ನು ಮದುವೆಯಾಗಿದ್ದನ್ನು ವಿರೋಧಿಸಿ ಅಮೀರ್ ಕೋರ್ಟ್ ಮೆಟ್ಟಿಲೇರಿದ್ದ. ಆತನೇ ಮಗಳ ತಲೆಕೆಡಿಸಿದ್ದಾನೆ ಎಂದೂ ದೂರು ಕೊಟ್ಟಿದ್ದ. ಅದಕ್ಕೆ ಪ್ರತಿಯಾಗಿ ಯುವತಿ, ‘ನಾನು ಇಷ್ಟಪಟ್ಟೇ ವೈದ್ಯನನ್ನು ವರಿಸಿದ್ದೇನೆ’ ಎಂದು ಹೇಳಿಕೆ ಕೊಡಲು ಕರಾಚಿ ನಗರ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದಳು. ಆಗ ಅಲ್ಲೇ ಇದ್ದ ಅಮೀರ್ ಗುಂಡು ಹೊಡೆದಿದ್ದಾನೆ. ಯುವತಿಯನ್ನು ಕಾಪಾಡಲು ಹೋದ ಪೊಲೀಸ್ ಕಾನ್ಸ್ಟೆಬಲ್ಗಳಾದ ಇಮ್ರಾನ್ ಜಾಮನ್ ಮತ್ತು ಇನ್ನೊಬ್ಬ ವ್ಯಕ್ತಿ ವಾಜೀದ್ ಕಲೀಂ ಕೂಡ ಗಾಯಗೊಂಡಿದ್ದಾರೆ ಎಂದು ಪಿರಾಬಾದ್ ಸ್ಟೇಶನ್ ಅಧಿಕಾರಿ ಮುಖ್ತಿಯಾರ್ ಅಹ್ಮದ್ ಪನ್ವಾರ್ ತಿಳಿಸಿದ್ದಾರೆ.