ನವದೆಹಲಿ: ಗ್ರೀಸ್ (Greece) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಗ್ರೀಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ (Grand Cross of the Order of Honour) ಪ್ರಶಸ್ತಿಯನ್ನು ಗ್ರೀಸ್ ಅಧ್ಯಕ್ಷೆ ಕಟೆರಿನಾ ಎನ್. ಸಕೆಲ್ಲರೊಪೌಲೌ (Greek President Katerina N. Sakellaropoulou) ಅವರು ಶುಕ್ರವಾರ ಪ್ರದಾನ ಮಾಡಿದರು. ಈ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಜನರೆಡೆಗೆ ಗ್ರೀಸ್ ಹೊಂದಿರುವ ಗೌರವವನ್ನು ಈ ಪ್ರಶಸ್ತಿ ಸಂಕೇತಿಸುತ್ತಿದೆ. ಇದಕ್ಕಾಗಿ ಗ್ರೀಸ್ ಅಧ್ಯಕ್ಷೆ ಹಾಗೂ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಅನ್ನು ಗ್ರೀಸ್ನ ಅಧ್ಯಕ್ಷರು ಪ್ರಧಾನ ಮಂತ್ರಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ನೀಡುತ್ತಾರೆ. ಅವರು ತಮ್ಮ ವಿಶಿಷ್ಟ ಸ್ಥಾನದ ಕಾರಣದಿಂದ ಗ್ರೀಸ್ನ ಘನತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದವರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಗ್ರೀಸ್ ಭೇಟಿಯ ಈ ಸಂದರ್ಭದಲ್ಲಿ ಗ್ರೀಕ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸನ್ಮಾನಿಸುತ್ತದೆ. ಮುತ್ಸದ್ಧಿಯಾಗಿರುವ ಮೋದಿ ಅವರು ತಮ್ಮ ದೇಶದ ಅಭಿವೃದ್ಧಿಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತಲುಪುತ್ತಿದ್ದು, ಭಾರತದ ಆರ್ಥಿಕಾಭಿವೃದ್ಧಿಗೆ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಸುಧಾರಾಣ ನೀತಿಗಳ ಮೂಲಕ ಸಮೃದ್ಧಿಯನ್ನು ಸ್ಥಾಪಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಚಟುವಟಿಕೆಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗಳಿಗೆ ಪ್ರಥಮ ಆದ್ಯತೆಯನ್ನು ತಂದಂಥ ವ್ಯಕ್ತಿಯಾಗಿದ್ದಾರೆಂದು ಗ್ರೀಸ್ ತಿಳಿಸಿದೆ.
ಈ ಪ್ರಶಸ್ತಿಯನ್ನು 1975ರಲ್ಲಿ ಆರಂಭಿಸಲಾಯಿತು. ಪ್ರಶಸ್ತಿಯ ಸ್ಟಾರ್ನ ಒಂದು ಬದಿಯಲ್ಲಿ ಗ್ರೀಸ್ ದೇವತೆಯಾಗಿರುವ ಅಥೇನಾಳನ್ನು ಚಿತ್ರಿಸಲಾಗಿದ್ದು, ಮತ್ತೊಂದೆಡೆ ಸೂಕ್ತ ವ್ಯಕ್ತಿಗಳಿಗೆ ಮಾತ್ರವೇ ಗೌರವ ನೀಡಬೇಕು ಎಂದು ಬರೆಯಲಾಗಿದೆ.
ಈ ಸುದ್ದಿಯನ್ನೂ ಓದಿ: Modi Egypt Visit: ಮೋದಿಗೆ ಈಜಿಪ್ಟ್ ಅತ್ಯುನ್ನತ ಪ್ರಶಸ್ತಿ; ಪ್ರಧಾನಿಯಾದ ಬಳಿಕ ಸಿಕ್ಕ ಜಾಗತಿಕ ಪ್ರಶಸ್ತಿಗಳೆಷ್ಟು?
ಗ್ರೀಸ್ಗೆ ಒಂದು ದಿನದ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ ಮೋದಿ ಅವರು ಶುಕ್ರವಾರ ದಕ್ಷಿಣ ಆಫ್ರಿಕಾದಿಂದ ನೇರವಾಗಿ ಅಥೆನ್ಸ್ಗೆ ಆಗಮಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಅವರು 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು ಮತ್ತು ಆ ದೇಶಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಅಂದ ಹಾಗೆ, ಇತ್ತೀಚಿನ 40 ವರ್ಷಗಳಲ್ಲಿ ಗ್ರೀಸ್ಗೆ ಭೇಟಿ ನೀಡುತ್ತಿರುವ ಭಾರತ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.