ಟೆಕ್ಸಾಸ್‌ನ ಕ್ಲೀವ್ಲ್ಯಾಂಡ್ ಎಂಬಲ್ಲಿ, ಮನೆಯೊಂದಕ್ಕೆ ನುಗ್ಗಿ ಐವರನ್ನು ಕೊಂದಿದ್ದವನಿಗಾಗಿ (Texas Shooting) ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಈತ ಶೂಟರ್ ಆಗಿದ್ದ. ಇಡೀ ದಿನ ತಮ್ಮ ಮನೆಯ ಆವರಣದಲ್ಲಿ ನಿಂತು ಫೈರಿಂಗ್ ಮಾಡುತ್ತಿದ್ದ. ಇದರಿಂದ ಕಿರಿಕಿರಿಗೊಂಡ ನೆರೆಮನೆಯವರು ಅವನ ಬಳಿ ಬಂದು, ದಯವಿಟ್ಟು ಹೊರಗೆ ಬಂದು ಇಷ್ಟು ಗುಂಡು ಹಾರಿಸಬೇಡ. ರಾತ್ರಿ ಕೂಡ ನೀನು ಅಭ್ಯಾಸ ಮುಂದುವರಿಸುವುದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ. ನಮ್ಮದು ಮಕ್ಕಳಿರುವ ಮನೆ. ಗುಂಡಿನ ಶಬ್ದಕ್ಕೆ ಅವರೂ ನಿದ್ದೆ ಮಾಡುವುದಿಲ್ಲ ಎಂದಿದ್ದರು. ಅಷ್ಟಕ್ಕೇ ಕ್ರೋಧಗೊಂಡಿದ್ದ ಅವನು, ಕಂಠ ಪೂರ್ತಿ ಕುಡಿದು ಅವರ ಮನೆಗೆ ನುಗ್ಗಿ, 8ವರ್ಷದ ಮಗು ಸೇರಿ ಒಟ್ಟು ಐವರನ್ನು ಕೊಂದು ಹಾಕಿದ್ದಾನೆ.
ನಾಪತ್ತೆಯಾಗಿರುವ ಶೂಟರ್ ಕೈಯಲ್ಲಿ ರೈಫಲ್ಸ್, ಬಂದೂಕುಗಳು ಇವೆ. ಅವನು ಅಪಾಯಕಾರಿಯಾಗಿದ್ದಾನೆ. ಅವನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ‘ನಮಗೆ ಶುಕ್ರವಾರ ರಾತ್ರಿ 11.30ರ ಹೊತ್ತಿಗೆ ಘಟನೆ ಬಗ್ಗೆ ಕರೆ ಬಂತು. ಅಲ್ಲಿ ಹೋಗಿ ನೋಡುವಷ್ಟರಲ್ಲಿ 40ವರ್ಷದ ವ್ಯಕ್ತಿಯೊಬ್ಬರ ಶವ ಮುಂಬಾಗಿಲ ಬಳಿಯೇ ಪತ್ತೆಯಾಯ್ತು. 8 ವರ್ಷದ ಮಗು, ಇಬ್ಬರು ಮಹಿಳೆಯ ಮೃತದೇಹ ಬೆಡ್ರೂಮ್ನಲ್ಲಿತ್ತು. ಇನ್ನಿಬ್ಬರು ಮಕ್ಕಳು ಬದುಕುಳಿದಿದ್ದಾರೆ ಎಂದು ಸ್ಯಾನ್ ಜಸಿಂಟೋ ಕೌಂಟಿಯ ಪೊಲೀಸ್ ಅಧಿಕಾರಿ ಗ್ರೆಗ್ ಕೇಪರ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಡೇರಿ ಫಾರ್ಮ್ನಲ್ಲಿ ಸ್ಫೋಟವಾಗಿ 18ಸಾವಿರಕ್ಕೂ ಹೆಚ್ಚು ಹಸುಗಳು ಸಾವು; ಟೆಕ್ಸಾಸ್ನಲ್ಲಿ ಬಹುದೊಡ್ಡ ದುರಂತ
ಕಳೆದ ವರ್ಷ ಮೇ ತಿಂಗಳಲ್ಲಿ ಅಮೆರಿಕದ ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ 19 ಮಂದಿ ಶಾಲಾ ಮಕ್ಕಳು ಮತ್ತು ಒಬ್ಬ ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಟೆಕ್ಸಾಸ್‌ನ ರೋಬ್ ಎಲಿಮೆಂಟರಿ ಶಾಲೆಯಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿತ್ತು. 500 ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗೆ ನುಗ್ಗಿದ್ದ ಆತ ಗುಂಡು ಹಾರಿಸಿದ್ದ. ಬಳಿಕ ಅವನನ್ನೂ ಕೊಲ್ಲಲಾಗಿತ್ತು.