ಜೆರುಸಲೇಂ: ಮುಸ್ಲಿಮರ ಅತ್ಯಂತ ಪವಿತ್ರ ಹಜ್ ಯಾತ್ರೆ (Hajj Pilgrims)ಗೆ ಬಿಸಿಲಿನ ತಾಪ ತಟ್ಟಿದೆ. ಲಕ್ಷಾಂತರ ಭಕ್ತರು ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾದ ಮೆಕ್ಕಾ (Mecca)ಗೆ ತೆರಳಿದ್ದು, ಇಲ್ಲಿನ ಗರಿಷ್ಠ ತಾಪಮಾನದ ಹೊಡೆತಕ್ಕೆ ಸಿಲುಕಿ ಸುಮಾರು 550 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಮೆಕ್ಕಾದಲ್ಲಿ ಗರಿಷ್ಠ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಮೃತರ ಪೈಕಿ ಈಜಿಪ್ಟ್‌ನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಜಿಪ್ಟ್‌ನ ಕನಿಷ್ಠ 323 ಮಂದಿ ಸಾವನ್ನಪ್ಪಿದ್ದಾರೆ. ಜೋರ್ಡಾನ್‌ನ ಕನಿಷ್ಠ 60 ಯಾತ್ರಿಕರು ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರಲ್ಲಿ ಹೆಚ್ಚಿನವರು ಶಾಖ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗಿದ್ದಾರೆ ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ. ಬಿಸಿಲಿನಲ್ಲಿ ಯಾತ್ರಾರ್ಥಿಗಳ ಮೃತದೇಹಗಳು ರಸ್ತೆ ಬದಿ ಎಲ್ಲೆಂದರಲ್ಲಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಈ ಕಾರಣಕ್ಕೆ ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.
ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, 60 ಮಂದಿ ಜೋರ್ಡಾನ್‌ನವರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಇನ್ನು ತನ್ನ ದೇಶದ ಐವರು ಯಾತ್ರಿಕರ ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ಸೆನೆಗಲ್ ಮೂರು ಸಾವುಗಳನ್ನು ವರದಿ ಮಾಡಿದೆ. ಹಜ್ ಸಮಯದಲ್ಲಿ 136 ಇಂಡೋನೇಷ್ಯಾದ ಯಾತ್ರಿಕರು ಸಾವನ್ನಪ್ಪಿದ್ದಾರೆ, ಇದರಲ್ಲಿ ಕನಿಷ್ಠ ಮೂವರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌದಿ ಅರೇಬಿಯಾದ ಅಧಿಕಾರಿಗಳು ಶಾಖದ ಒತ್ತಡದಿಂದ ಬಳಲುತ್ತಿರುವ 2,000ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ವರ್ಷ ಇಲ್ಲಿ ವಿವಿಧ ದೇಶಗಳಲ್ಲಿ ಕನಿಷ್ಠ 240 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಇಂಡೋನೇಷಿಯಾದವರು.
ಕೋಲ್ಡ್ ನೀರಿನ ಮೊರೆ ಹೋದ ಭಕ್ತರು
ಯಾತ್ರಾರ್ಥಿಗಳು ಬಿಸಿಲಿನ ಹೊಡೆತದಿಂದ ಪಾರಾಗಲು ತಮ್ಮ ತಲೆಯ ನೀರು ಸುರಿಯುತ್ತಿರುವ ದೃಶ್ಯ ಸಾಮಾನ್ಯ ಎಂಬಂತಾಗಿದೆ. ಸ್ವಯಂಸೇವಕರು ಅಲ್ಲಲ್ಲಿ ತಂಪು ಪಾನೀಯ ಮತ್ತು ಐಸ್‌ಕ್ರೀಮ್ ವಿತರಿಸುವುದು ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೌದಿ ಅಧಿಕಾರಿಗಳು ಯಾತ್ರಾರ್ಥಿಗಳಿಗೆ ಛತ್ರಿಗಳನ್ನು ಬಳಸಲು, ಸಾಕಷ್ಟು ನೀರು ಕುಡಿಯಲು ಮತ್ತು ದಿನದ ಅತ್ಯಂತ ಬಿಸಿಯಾದ ಸಮಯದಲ್ಲಿ ಸೂರ್ಯನಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಲಹೆ ನೀಡಿದ್ದಾರೆ.
ಈ ವರ್ಷ ಸುಮಾರು 18,00,000 ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಆ ಪೈಕಿ 16,00,000 ವಿದೇಶಿಗರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಹಜ್ ವೀಸಾ ದುಬಾರಿಯಾದ ಕಾರಣ ಪ್ರತಿವರ್ಷ ಸಾವಿರಾರು ಯಾತ್ರಿಕರು ಅಕ್ರಮವಾಗಿಯೂ ಇಲ್ಲಿಗೆ ಆಗಮಿಸುತ್ತಾರೆ.
ಇದನ್ನೂ ಓದಿ: Hajj 2023: ಇತಿಹಾಸ ಬರೆದ ಭಾರತದ ಮುಸ್ಲಿಂ ಮಹಿಳೆಯರು; ಪುರುಷರ ನೆರವಿಲ್ಲದೆ ಹಜ್ ಯಾತ್ರೆ ಮಾಡಿ ವಾಪಸ್