ಬೀರತ್: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ್ದಕ್ಕೆ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿ (Israel Palestine War) ಮುಂದುವರಿದಿದೆ. ಅದರಲ್ಲೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೊಂದೇ ತೀರುತ್ತೇನೆ ಎಂದು ಗುಟುರು ಹಾಕಿದ್ದ ಹಮಾಸ್ ಉಗ್ರ ಸಂಘಟನೆಯ ಡೆಪ್ಯುಟಿ ಮುಖ್ಯಸ್ಥ ಸಲೇಹ್ (Saleh Arouri) ಅರೌರಿಯು ಹತ್ಯೆಗೀಡಾಗಿದ್ದಾನೆ. ಲೆಬನಾನ್‌ನ ಬೀರತ್ ನಗರದಲ್ಲಿ ಸಂಭವಿಸಿದ ಸ್ಫೊಟದಲ್ಲಿ ಸಲೇಹ್ ಅರೌರಿಯು ಹತನಾಗಿದ್ದಾನೆ ಎಂದು ಹೆಜ್ಬೊಲ್ಲಾ (Hezbollah) ಉಗ್ರ ಸಂಘಟನೆ ತಿಳಿಸಿದೆ.
“ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಅಲೇಹ್ ಅರೌರಿ ಕೂಡ ಒಬ್ಬನಾಗಿದ್ದಾನೆ. ಇದರೊಂದಿಗೆ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಮೂಲಕ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ. ಇದರಿಂದ ಪರಿಸ್ಥಿತಿ ಬಿಗಡಾಯಿಸಿದರೆ ಅದಕ್ಕೆ ಇಸ್ರೇಲ್ ಹೊಣೆಯಾಗುತ್ತದೆ” ಎಂದು ಹೆಜ್ಬೊಲ್ಲಾ ಉಗ್ರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ. ಹಮಾಸ್ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ವೈರಿಗಳ ವಿರುದ್ಧ ಹೋರಾಡುವಲ್ಲಿ ನಮಗೆ ಮತ್ತೊಂದು ಹಿನ್ನಡೆಯಾಗಿದೆ ಎಂದು ಹೇಳಿದೆ.
ಸಲೇಹ್ ಅರೌರಿ ಹಿನ್ನೆಲೆ ಏನು?
57 ವರ್ಷದ ಸಲೇಹ್ ಅರೌರಿಯು ಹಮಾಸ್‌ನ ಪ್ರಮುಖ ಉಗ್ರನಾಗಿದ್ದಾನೆ. ಹಮಾಸ್ ಉಗ್ರ ಸಂಘಟನೆಯ ರಾಜಕೀಯ ವಿಭಾಗದ ಉಪ ಮುಖ್ಯಸ್ಥನಾಗಿದ್ದಾನೆ. ಅಲ್ಲದೆ, ಹಮಾಸ್‌ನ ಮಿಲಿಟರಿ ವಿಭಾಗವಾದ ಖಸಮ್ ಬ್ರಿಗೇಡ್ಸ್‌ನ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. ಈತನು ಹತ್ತಾರು ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡ ಕಾರಣ 2015ರಲ್ಲಿ ಅಮೆರಿಕವು ಜಾಗತಿಕ ಉಗ್ರ ಎಂದು ಘೋಷಿಸಿದೆ. ಇಸ್ರೇಲ್ ಮೇಲೆ ಕೆಂಡ ಕಾರುತ್ತಿದ್ದ ಈತನು ಬೆಂಜಮಿನ್ ನೆತನ್ಯಾಹು ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, “ನಾನು ಹುತಾತ್ಮನಾಗಲು ಬಯಸುತ್ತೇನೆ. ನಾನು ತುಂಬ ವರ್ಷ ಬದುಕಿದ್ದೇನೆ ಎಂಬುದಾಗಿ ಅನಿಸುತ್ತಿದೆ” ಎಂದು ಇತ್ತೀಚೆಗಷ್ಟೇ ಹೇಳಿದ್ದ. ಈಗ ಆತ ಬೀದಿ ಹೆಣವಾಗಿದ್ದಾನೆ.
ಇದನ್ನೂ ಓದಿ: ʼಅವನೇಕೆ ನನ್ನನ್ನು ರೇಪ್ ಮಾಡಲಿಲ್ಲ ಎಂದರೆ…ʼ ಹಾರರ್ ಸ್ಟೋರಿ ಬಿಚ್ಚಿಟ್ಟ ಹಮಾಸ್ ಒತ್ತೆಯಾಳು
ಸರ್ಜಿಕಲ್ ಸ್ಟ್ರೈಕ್ ಎಂದ ಇಸ್ರೇಲ್
ಲೆಬನಾನ್‌ನಲ್ಲಿ ಸಲೇಹ್ ಅರೌರಿಯನ್ನು ಹತ್ಯೆ ಮಾಡಿರುವ ಕುರಿತು ಇಸ್ರೇಲ್ ಯಾವುದೇ ಅಧಿಕೃತ ಹೇಳಿಕೆ ಹೊರಡಿಸಿಲ್ಲ. ಆದರೂ, ಇಸ್ರೇಲ್ ವಕ್ತಾರರು ಇಸ್ರೇಲ್ ದಾಳಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ, “ಇದು ಸಲೇಹ್ ಅರೌರಿಯನ್ನು ಹತ್ಯೆಗೈಯಲು ಮಾಡಿರುವ ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ) ಆಗಿದೆಯೇ ಹೊರತು, ಲೆಬನಾನ್ ಮೇಲೆ ದಾಳಿ ಮಾಡುವ ಉದ್ದೇಶ ಇರಲಿಲ್ಲ” ಎಂದು ಹೇಳಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ಮಾಡಿದ ದಾಳಿಗೆ ಇದುವರೆಗೆ 1,400 ಜನ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದ ಮೇಲೆ ಇಸ್ರೇಲ್ ಸೇನೆ ನಡೆಸಿದ ಪ್ರತಿದಾಳಿಗೆ 21,500 ಮಂದಿ ಹತರಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ