Site icon Vistara News

Israel Palestine War : ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನೇ ಕದ್ದು ಮುಕ್ಕುತ್ತಿರುವ ಹಮಾಸ್​ ಉಗ್ರರು

Hamas War

ನವ ದೆಹಲಿ: ಹಮಾಸ್ ಭಯೋತ್ಪಾದಕರು ನಾಗರಿಕರನ್ನು ಥಳಿಸುತ್ತಿದ್ದಾರೆ (Israel Palestine War) ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ದೊರಕಿದ ಪರಿಹಾರ ಸಾಮಗ್ರಿಗಳನ್ನು ಕದಿಯುತ್ತಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಭಾನುವಾರ ಆರೋಪಿಸಿದೆ. ಗಾಜಾ ನಿವಾಸಿಗಳನ್ನು ಮುಂದಿಟ್ಟುಕೊಟ್ಟುಕೊಂಡು ಹಮಾಸ್ ತನ್ನ ಭಯೋತ್ಪಾದಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದೆ ಎಂಬುದಾಗಿಯೂ ಐಡಿಎಫ್ ಹೇಳಿದೆ.

ಐಡಿಎಫ್ ಎಕ್ಸ್ ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕೆಲವು ವ್ಯಕ್ತಿಗಳು ನಾಗರಿಕರನ್ನು ಥಳಿಸುವುದು ದಾಖಲಾಗಿದೆ. ಆ ವೀಡಿಯೊದಲ್ಲಿ, ಕೆಲವು ವ್ಯಕ್ತಿಗಳು ವಾಹನದಲ್ಲಿ ಕೆಲವು ವಸ್ತುಗಳನ್ನು ತುಂಬಿಸಿಟ್ಟುಕೊಂಡಿರುವುದು ಕೂಡ ಕಂಡುಬಂದಿದೆ. ಇದು ಯುದ್ಧ ಸಂತ್ರಸ್ತರಿಗೆ ಕಳುಹಿಸಿ ಮಾನವೀಯ ಪರಿಹಾರ ಸಾಮಗ್ರಿಗಳು ಎಂದು ಐಡಿಎಫ್​ ಹೇಳಿದೆ.

ಹಮಾಸ್ ಸದಸ್ಯರು ನಾಗರಿಕರನ್ನು ಥಳಿಸುತ್ತಾರೆ. ಇಸ್ರೇಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡಿರುವ ಮಾನವೀಯ ನೆರವಿನ ವಸ್ತುಗಳನ್ನು ಕದಿಯುತ್ತಾರೆ. ಗಾಜಾದ ಜನರ ಅಗತ್ಯಗಳ ಮೇಲೆ ಹಮಾಸ್ ತನ್ನ ಭಯೋತ್ಪಾದಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದೆ ಎಂದು ಹೇಳಿದೆ. ಅವರನ್ನು ಇನ್ನಷ್ಟು ಸಮಸ್ಯೆಗೆ ತಳ್ಳುತ್ತಿದೆ ಎಂದು ಹೇಳಿದೆ.

ಅಲ್-ಮಾವಾಸಿಯನ್ನು ಗಾಜಾದಲ್ಲಿನ ಮಾನವೀಯ ವಲಯ ಎಂದು ಘೋಷಿಸಲಾಗಿದೆ. ಜನರನ್ನು ಯುದ್ಧಭೂಮಿಯಿಂದ ದೂರವಿರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಐಡಿಎಫ್ ಹೇಳಿದೆ. ಆದಾಗ್ಯೂ, ಹಮಾಸ್ ಉಗ್ರರು ಗಾಜಾ ಉರಿಯುತ್ತಿರುವಂತೆ ನೋಡಿಕೊಳ್ಳುತ್ತಿದೆ. ಎಂದು ಅದು ಹೇಳಿದೆ.

ವಿಡಿಯೊದಲ್ಲಿ ಏನಿದೆ?

ಎಕ್ಸ್​ ಪೋಸ್ಟ್​ನಲ್ಲಿ ಐಡಿಎಫ್, “ಅಲ್-ಮಾವಾಸಿ ಗಾಜಾದಲ್ಲಿನ ಮಾನವೀಯ ವಲಯವಾಗಿದೆ. ನಾಗರಿಕರನ್ನು ಯುದ್ಧಭೂಮಿಯಿಂದ ದೂರವಿರಿಸುವ ಉದ್ದೇಶವನ್ನು ಹೊಂದಿದೆ. ಆದರೆ ಹಮಾಸ್ ಗಾಜಾದ ಜನರನ್ನು ಬೆಂಕಿಯ ಕೆನ್ನಾಲಿಗೆಗೆ ತಳ್ಳುತ್ತಿದೆ. ಅವರು ನಿಗದಿ ಮಾಡಿರುವ ಮಾನವೀಯ ವಲಯದಿಂದಲೇ ಡಜನ್​ಗಟ್ಟಲೇ ರಾಕೆಟ್​ಗಳನ್ನು ಉಡಾಯಿಸುತ್ತಿದ್ದಾರೆ ಈ ಮೂಲಕ ಗಾಝಾನ್ನರನ್ನು ಅಪಾಯಕ್ಕೆ ತಳ್ಳಲಾಗುತ್ತಿದೆ ಎಂದು ಬರೆದುಕೊಂಡಿದೆ.

ಐಡಿಎಫ್ ಪಡೆಗಳ ಮೇಲೆ ಗುಂಡು ಹಾರಿಸಲು ಹಮಾಸ್ ಭಯೋತ್ಪಾದಕರು ಬೀಟ್ ಹನೌನ್​ನಲ್ಲಿರುವ ಶಾಲೆ ಮತ್ತು ಮಸೀದಿಯನ್ನು ಬಳಸುತ್ತಿದ್ದಾರೆ ಎಂದು ಐಡಿಎಫ್ ಶನಿವಾರ ಹೇಳಿದೆ. “ಹಮಾಸ್ ಭಯೋತ್ಪಾದಕರು ಐಡಿಎಫ್ ಪಡೆಗಳ ಮೇಲೆ ಗುಂಡು ಹಾರಿಸಲು ನಾಗರಿಕ ಮೂಲಸೌಕರ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಾವು ಮತ್ತೊಮ್ಮೆ ಕಂಡಿದ್ದೇವೆ. ಈ ಬಾರಿ ಬೀಟ್ ಹನೌನ್ ನಲ್ಲಿ @UNRWA ಶಾಲೆ ಮತ್ತು ಮಸೀದಿಯಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದೆ.

ಹಮಾಸ್​ ಉಗ್ರರು ಶರಣು

ಶನಿವಾರ ಗಾಝಾ ಪಟ್ಟಿಯಲ್ಲಿ ಅನೇಕ ಹಮಾಸ್ ಸದಸ್ಯರು ಸೈನಿಕರಿಗೆ ಶರಣಾಗಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇಸ್ರೇಲ್​ನ ನೆಲದ ದಾಳಿಯ ಮಧ್ಯೆ ಹಮಾಸ್ ಸದಸ್ಯರು ಭಯೋತ್ಪಾದಕ ಗುಂಪಿನ ಕಾರ್ಯಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಶೆಜೈಯಾ ಮತ್ತು ಜಬಾಲಿಯಾದಲ್ಲಿ ಶರಣಾದ ಭಯೋತ್ಪಾದಕರು ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಒಪ್ಪಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

“ಹಮಾಸ್ ನಾಯಕತ್ವವು ನೆಲದ ಮೇಲೆ ನಿಂತು ಹೋರಾಡುತ್ತಿರುವವರ ಸಂಪರ್ಕದಲ್ಲಿಲ್ಲ ಎಂದು ಶರಣಾಗಿರುವ ಭಯೋತ್ಪಾದಕರು ದೂರಿದ್ದಾರೆ” ಎಂದು ಅವರು ಹೇಳಿದರು.

ಭೂಗತ ಹಮಾಸ್ ನಾಯಕತ್ವವು ಗಾಝಾದಲ್ಲಿನ ನೆಲದ ಮೇಲಿರುವ ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಈ ಬೆಳವಣಿಗೆಯು ಹಮಾಸ್ ಕಾರ್ಯಕರ್ತರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. “ವಿಚಾರಣೆಯಿಂದ ಹೊರಹೊಮ್ಮುವ ಗುಪ್ತಚರ ಮಾಹಿತಿಯು ಅನುಕೂಲಕರವಾಗಿದೆ. ಕಾರ್ಯಾಚರಣೆಯ ಚಟುವಟಿಕೆಯಲ್ಲಿ ನಮಗೆ ಸಹಾಯ ಮಾಡುತ್ತದೆ” ಎಂದು ಹಗರಿ ಹೇಳಿಕೊಂಡಿದ್ದಾರೆ.

ಶುಜೈಯಾದಲ್ಲಿನ ಮಸೀದಿಯ ತರಗತಿಯಲ್ಲಿ ಹಮಾಸ್ ಸುರಂಗದ ಶಾಫ್ಟ್ (ದ್ವಾರ) ಪತ್ತೆಯಾಗಿದೆ ಎಂದು ಐಡಿಎಫ್ ಶನಿವಾರ ತಿಳಿಸಿದೆ. “ಶುಜೈಯಾ ಹೃದಯಭಾಗದಲ್ಲಿರುವ ಮಸೀದಿಯ ತರಗತಿಯೊಳಗೆ ಹಮಾಸ್ ಸುರಂಗದ ಶಾಫ್ಟ್ ಪತ್ತೆಯಾಗಿದೆ. ಹಮಾಸ್ ಶಾಲೆಗಳ ದುರುಪಯೋಗ ಮಾಡಿಕೊಂಡಿದೆ. ಮಕ್ಕಳ ಸುರಕ್ಷಿತ ತಾಣಗಳನ್ನು ಭಯೋತ್ಪಾದಕರ ಅಡಗುತಾಣಗಳಾಗಿ ಪರಿವರ್ತಿಸಿದೆ” ಎಂದು ಐಡಿಎಫ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

Exit mobile version