Site icon Vistara News

ಇಸ್ರೇಲ್‌ ಪೆಟ್ಟಿಗೆ ಪೆಚ್ಚಾದ ಹಮಾಸ್;‌ ದಾಳಿ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ ಎಂದ ಉಗ್ರರು!

Israel Palestine War

ಜೆರುಸಲೇಂ: ಗಾಜಾಪಟ್ಟಿಯ ಹಮಾಸ್‌ ಉಗ್ರರು ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ಗಳ ದಾಳಿ ಮಾಡುವ ಮೂಲಕ ಸಮರ (Israel Palestine War) ಸಾರಿದ್ದು, ಇದಕ್ಕೆ ಇಸ್ರೇಲ್‌ ಕೂಡ ಪ್ರತಿದಾಳಿ ನಡೆಸುತ್ತಿದೆ. ಇಸ್ರೇಲ್‌ ಸೇನೆ ಹಾಗೂ ಹಮಾಸ್‌ ಉಗ್ರರ ಸಂಘರ್ಷದಲ್ಲಿ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ಇನ್ನು ಗಾಜಾ ನಗರದ ಮೇಲೆ ಇಸ್ರೇಲ್‌ ಮಾಡುತ್ತಿರುವ ಸತತ ದಾಳಿಯಿಂದ ಕಂಗೆಟ್ಟಿರುವ ಹಮಾಸ್‌ ಉಗ್ರರು ಸಂಧಾನ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, “ಇಸ್ರೇಲ್‌ ಬಾಂಬ್‌ ದಾಳಿ ನಿಲ್ಲಿಸಿದರೆ ನಾವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧ” ಎಂಬುದಾಗಿ ಹಮಾಸ್‌ (Hamas Terrorists) ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲ್‌ಗೆ ನುಗ್ಗಿದ್ದ ಹಮಾಸ್‌ ಉಗ್ರರು, ಮಹಿಳೆಯರು, ಮಕ್ಕಳು, ಸೈನಿಕರು ಸೇರಿ ಸಾವಿರಾರು ಜನರನ್ನು ಅಪಹರಿಸಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಇಸ್ರೇಲ್‌ ಮೇಲೆ ದಾಳಿ, ನಾಗರಿಕರಿಗೆ ತೊಂದರೆ ಬಳಿಕ ಗಾಜಾ ನಗರದ ಮೇಲೆ ಇಸ್ರೇಲ್‌ ಸತತ ದಾಳಿ ನಡೆಸುತ್ತಿದೆ. ರಾಕೆಟ್‌ಗಳ ದಾಳಿಯಿಂದಾಗಿ ಇಡೀ ಗಾಜಾ ನಗರ ಮಸಣದಂತಾಗಿದೆ. ಹಾಗಾಗಿಯೇ, ಹಮಾಸ್‌ನ ಹಿರಿಯ ವಕ್ತಾರರು ಮಾಧ್ಯಮಗಳ ಜತೆ ಮಾತನಾಡುವಾಗ, “ಇಸ್ರೇಲ್‌ ಕೂಡಲೇ ಬಾಂಬ್‌ ದಾಳಿ ಮಾಡುವುದನ್ನು ನಿಲ್ಲಿಸಿದರೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು” ಎಂಬುದಾಗಿ ಹೇಳಿದ್ದಾರೆ.

ಗಾಜಾ ಆಸ್ಪತ್ರೆ ಮೇಲಿನ ದಾಳಿಯ ಭೀಕರ ವಿಡಿಯೊ

ಹಮಾಸ್‌ ಉಗ್ರರ ನೆಲೆವೀಡಾಗಿರುವ ಗಾಜಾ ನಗರದ ಮೇಲೆ ಸಂಪೂರ್ಣವಾಗಿ ದಾಳಿ ನಡೆಸಲು ಇಸ್ರೇಲ್‌ ಸೇನೆ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಗಾಜಾ ನಗರ ಬಿಟ್ಟು ಹೊರಡಿ ಎಂದು ನಾಗರಿಕರಿಗೆ ಇಸ್ರೇಲ್‌ ನೀಡಿದ ಗಡುವು ಮುಗಿದಿದ್ದು, ಪೂರ್ಣ ಪ್ರಮಾಣದ ದಾಳಿ ನಡೆಸಲು ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಡಿಯಲ್ಲಿ ಸಜ್ಜಾಗಿವೆ. ಯಾವ ಕ್ಷಣದಲ್ಲಿ ಬೇಕಾದರೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೈನಿಕರು ದಾಳಿ ಆರಂಭಿಸಬಹುದು ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಗಾಜಾ ಆಸ್ಪತ್ರೆ ಮೇಲೆ ನಡೆದ ವಾಯುದಾಳಿಯಲ್ಲಿ 500ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದು, ಹಮಾಸ್‌ ಉಗ್ರರೇ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್‌ ಆರೋಪಿಸಿದೆ. ಅತ್ತ, ಇಸ್ರೇಲ್‌ ದಾಳಿ ಮಾಡಿದೆ ಎಂದು ಹಮಾಸ್‌ ಉಗ್ರರು ದೂರಿದ್ದಾರೆ.

ಇದನ್ನೂ ಓದಿ: Israel Palestine War: ಗಾಜಾ ಆಸ್ಪತ್ರೆ ಮೇಲೆ ದಾಳಿ; ಇಸ್ಲಾಂ ದೇಶಗಳ ಜತೆ ಬೈಡನ್‌ ಸಭೆಯೇ ರದ್ದು!

“ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ರಾಕೆಟ್‌ ದಾಳಿ ಮಾಡುತ್ತಿದ್ದಾರೆ. ಹೀಗೆ ಇಸ್ರೇಲ್‌ನತ್ತ ತೂರಿಬಂದ ರಾಕೆಟ್‌ ತಪ್ಪಾಗಿ ಗಾಜಾ ಆಸ್ಪತ್ರೆ ಮೇಲೆಯೇ ಬಿದ್ದಿದೆ” ಎಂಬುದಾಗಿ ಆಸ್ಪತ್ರೆ ದಾಳಿ ಕುರಿತು ಇಸ್ರೇಲ್‌ ಸ್ಪಷ್ಟನೆ ನೀಡಿದೆ. ಆ ಮೂಲಕ ನಾಗರಿಕರ ಸಾವಿಗೆ ಉಗ್ರರೇ ಕಾರಣ ಎಂಬಂತೆ ಬಿಂಬಿಸಿದೆ. ಗಾಜಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲ್‌-ಹಮಾಸ್‌ ಉಗ್ರರ ಸಮರಕ್ಕೆ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಹಲವು ಇಸ್ಲಾಮಿಕ್‌ ದೇಶಗಳ ಜತೆ ಜೋರ್ಡಾನ್‌ನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ.

Exit mobile version