ಜೆರುಸಲೇಂ: ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆಯ ನಡುವಿನ ಸಮರವು (Israel Palestine War) 18ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ, ಇಸ್ರೇಲ್‌ನಲ್ಲಿ ಮನೆ ಮನೆಗೆ ನುಗ್ಗಿ ಹಮಾಸ್ ಉಗ್ರರು (Hamas Terrorists) ಹತ್ಯೆ ಮಾಡುತ್ತಿದ್ದಾರೆ. ಇಸ್ರೇಲ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು, ಅವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಗರ್ಭಿಣಿಯೊಬ್ಬರ ಹೊಟ್ಟೆ ಸೀಳಿದ ಹಮಾಸ್ ಉಗ್ರರು, ಭ್ರೂಣವನ್ನು ಹೊರತೆಗೆದು, ಅದರ ರುಂಡವನ್ನು ಕತ್ತರಿಸುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಯು (IDF) ಹಮಾಸ್ ಉಗ್ರರ ರಕ್ಕಸ ಕೃತ್ಯದ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. “ಹಮಾಸ್ ಉಗ್ರರು ಗರ್ಭಿಣಿಯೊಬ್ಬರ ಹೊಟ್ಟೆ ಸೀಳಿ, ಮಗುವನ್ನು ಹೊರೆತೆಗೆದಿದ್ದಾರೆ. ಬಳಿಕ ಆ ಮಗುವಿನ ರುಂಡ ಕತ್ತರಿಸಿದ್ದಾರೆ. ಎಕ್ಸ್ ಸಾಮಾಜಿಕ ಜಾಲತಾಣದ ಕಮ್ಯುನಿಟಿ ಗೈಡ್‌ಲೈನ್ಸ್‌ನಿಂದಾಗಿ ಆ ದೃಶ್ಯವನ್ನು ಪೋಸ್ಟ್ ಮಾಡಿಲ್ಲ” ಎಂದು ಇಸ್ರೇಲ್ ರಕ್ಷಣಾ ಪಡೆಯು ಟ್ವೀಟ್ ಮಾಡಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸ್ ಪೋಸ್ಟ್
— Israel Defense Forces (@IDF) October 23, 2023
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 6,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯಿಂದ ಇದುವರೆಗೆ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್ ಸತತ ದಾಳಿಗೆ 5,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಜಾ ನಗರದಲ್ಲಂತೂ ಸಾವಿರಾರು ಜನ ಗಾಯಗೊಂಡಿದ್ದು, ಲಕ್ಷಾಂತರ ನಾಗರಿಕರು ನಿರಾಶ್ರಿತರಾಗಿದ್ದಾರೆ.
ಗಾಜಾ ಗಡಿಯಲ್ಲಿ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಇಸ್ರೇಲ್ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್ ಸೈನಿಕರು ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಬಹುದು. ಇದರ ಭೀತಿಯಿಂದಾಗಿಯೇ ಹಮಾಸ್ ಉಗ್ರರು ಇಸ್ರೇಲ್‌ನ ಇಬ್ಬರು ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ. ಇಷ್ಟಾದರೂ ಕೆಲವು ಉಗ್ರರು ರಕ್ಕಸ ಕೃತ್ಯಗಳ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇನ್ನು ಮತ್ತೊಂದೆಡೆ, ಬೆಂಜಮಿನ್ ನೆತನ್ಯಾಹು ಅವರು ಐಡಿಎಫ್ ಮುಖ್ಯಸ್ಥರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ, “ಹಮಾಸ್ ಉಗ್ರರರನ್ನು ನಾವು ನಿರ್ನಾಮ ಮಾಡದೆ ಬಿಡುವುದಿಲ್ಲ” ಎಂದು ಐಡಿಎಫ್ ಮುಖ್ಯಸ್ಥ ಹೇಳಿದ್ದಾರೆ.