ಲಂಡನ್: ಹ್ಯಾರಿ ಪ್ಯಾಟರ್ (Harry Potter), ಸಿಂಗಿಂಗ್ ಡಿಟೇಕ್ಟಿವ್ (Singing Detective) ಚಿತ್ರಗಳ ಖ್ಯಾತ ನಟ, ಸರ್ ಮೈಕೆಲ್ ಗ್ಯಾಂಬೊನ್ (Sir Michael Gambon) ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬವು ತಿಳಿಸಿದೆ. ಅವರಿಗೆ 82 ವಯಸ್ಸಾಗಿತ್ತು. ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದರು. ‘ಹ್ಯಾರಿ ಪಾಟರ್’ ಸರಣಿಯ 6 ಚಿತ್ರಗಳಲ್ಲಿ ಪ್ರೊಫೆಸರ್ ಅಲ್ಬುಸ್ ಡಂಬಲ್ಡೋರ್ (Professor Albus Dumbledore) ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಫಂಟಾಸ್ಟಿಕ್ ಮಿ. ಫಾಕ್ಸ್ ಹಾಗೂ ಸಿಂಗಿಂಗ್ ಡಿಟೇಕ್ಟಿವ್ ಚಿತ್ರಗಳು ಕೂಡ ಅವರಿಗೆ ಹೆಸರು ತಂದು ಕೊಟ್ಟಿದ್ದವು. ಸರ್ ಗ್ಯಾಂಬೊನ್ ಅವರಿಗೆ ಪತ್ನಿ ಹಾಗೂ ಪುತ್ರರಿದ್ದಾರೆ.
ಸರ್ ಮೈಕೆಲ್ ಜಾನ್ ಗ್ಯಾಂಬೊನ್ ಅವರು 1940 ಅಕ್ಟೋಬರ್ 19ರಂದು ಜನಿಸಿದರು. ಐರಿಸ್-ಇಂಗ್ಲಿಷ್ ನಟರಾಗಿರುವ ಗ್ಯಾಂಬೊನ್ ಅವರು ಲೌರೆನ್ಸ್ ಒಲಿವರ್ ಥಿಯೇಟರ್ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. ಸುಮಾರು 60 ವರ್ಷಗಳ ನಟನಾ ವೃತ್ತಿಯಲ್ಲಿ ಅವರು ಮೂರು ಬಾರಿ ಆಲಿವಿಯರ್ ಅವಾರ್ಡ್ಸ್, ಎರಡು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್ಸ್, ನಾಲ್ಕು ಬಾಫ್ತಾ ಅವಾರ್ಡ್ಸ್ ಪಡೆದುಕೊಂಡಿದ್ದಾರೆ. 1999ರಲ್ಲಿ ಬ್ರಿಟನ್ ರಾಣಿ ಕ್ವೀನ್ ಎಲಿಜಬೆಥ್ ಅವರು ಗ್ಯಾಂಬೊನ್ ಅವರಿಗೆ ಸರ್ ಪದವಿಯನ್ನು ಪ್ರದಾನ ಮಾಡಿದರು. ನಾಟಕ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ನೀಡಲಾಗಿತ್ತು.
ವಿಲಿಯಂ ಷೇಕ್ಸ್‌ಪಿಯರ್‌ನ ಒಥೆಲ್ಲೋ, ಹ್ಯಾಮ್ಲೆಟ್, ಮ್ಯಾಕ್‌ಬೆತ್ ಮತ್ತು ಕೊರಿಯೊಲನಸ್‌ನ ಅನೇಕ ನಾಟಕಗಳಲ್ಲಿ ಗ್ಯಾಂಬೊನ್ ಕಾಣಿಸಿಕೊಂಡರು. ಎ ಕೋರಸ್ ಆಫ್ ಡಿಸಪ್ರೂವಲ್ (1985), ಎ ವ್ಯೂ ಫ್ರಮ್ ದಿ ಬ್ರಿಡ್ಜ್ (1987), ಮತ್ತು ಮ್ಯಾನ್ ಆಫ್ ದಿ ಮೊಮೆಂಟ್ (1990) ಗಾಗಿ ಮೂರು ಬಾರಿ ಆಲಿವಿಯರ್ ಪ್ರಶಸ್ತಿ ಗೆದ್ದು, ಗ್ಯಾಂಬೊನ್ ಅವರು ಒಟ್ಟು 12 ಬಾರಿ ನಾಮ ನಿರ್ದೇಶನಗೊಂಡಿದ್ದರು.
ಈ ಸುದ್ದಿಯನ್ನೂ ಓದಿ: Actor G Marimuthu: ಇಹಲೋಕ ತ್ಯಜಿಸಿದ ತಮಿಳಿನ ಖ್ಯಾತ ನಟ ನಿರ್ದೇಶಕ ಮಾರಿಮುತ್ತು
ನಾಟಕರಂಗದಲ್ಲಿ ಪ್ರಖ್ಯಾತರಾಗಿದ್ದ ಗ್ಯಾಂಬೊನ್ ಅವರು 1965 ಒಥೆಲ್ಲೋ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ, ಕೂಕ್, ದಿ ಥೀಫ್, ಹೀಸ್ ವೈಫ್ ಆ್ಯಂಡ್ ಹರ್ ಲವರ್, ವಿಂಗ್ಸ್ ಆಫ್ ದಿ ಡೋವ್, ಇನ್‌ಸೈಡರ್, ಗಾಸಫೋರ್ಡ್ ಪಾರ್ಕ್, ಅಮೇಜಿಂಗ್ ಗ್ರೇಸ್, ದಿ ಕಿಂಗ್ಸ್ ಸ್ಪೀಚ್, ಕ್ವಾರೆಟ್, ವಿಕ್ಟೋರಿಯಾ ಆ್ಯಂಡ್ ಅಬ್ದುಲ್, ದಿ ಲೈಫ್ ಆಕ್ವಾಟಿಕ್, ಫಂಟಾಸ್ಟಿಕ್ ಮಿ. ಫಾಕ್ಸ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಹ್ಯಾರಿ ಪಾಟರ್ ಸರಣಿಯ ಚಿತ್ರಗಳು ಅವರಿಗೆ ಹೆಚ್ಚು ಪ್ರಖ್ಯಾತಿಯನ್ನು ತಂದುಕೊಟ್ಟವು. ಹ್ಯಾರಿ ಪಾಟರ್‌ನ ಅಲ್ಬುಸ್ ಡಂಬಲ್ಡೋರ್ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡುತ್ತಿದ್ದರು.