ಬಾಕು: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಹೆಲಿಕಾಪ್ಟರ್ ಪತನವಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದರೆ, ಇನ್ನೂ ಕೆಲವು ಮಾಧ್ಯಮಗಳು ಹಾರ್ಡ್ ಲ್ಯಾಂಡಿಂಗ್ ಆಗಿದೆ ಎಂದು ವರದಿ ಮಾಡಿವೆ. ಹಾಗಾಗಿ, ಹೆಲಿಕಾಪ್ಟರ್ ಪತನವಾಗಿದೆಯೋ, ತುರ್ತು ಲ್ಯಾಂಡ್ ಆಗಿದೆಯೋ ಎಂಬ ಮಾಹಿತಿ ನಿಖರವಾಗಿ ಲಭ್ಯವಾಗಿಲ್ಲ. ಆದಾಗ್ಯೂ, ಭದ್ರತಾ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್ ಪ್ರಕಾರ, ಹೆಲಿಕಾಪ್ಟರ್ ಹಾರ್ಡ್ ಲ್ಯಾಂಡಿಂಗ್ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ. ಆದಾಗ್ಯೂ, ಇರಾನ್ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
A massive search operation has begun in East Azerbaijan to look for survivors from the crashed helicopter of Iranian President Ebrahim Raisi.
— Treeni (@TheTreeni) May 19, 2024
The weather conditions in the area are reportedly very poor, with dense fog reducing visibility. pic.twitter.com/hBRLHvKSFF
ಇರಾನ್ ಬೆಂಗಾವಲು ಪಡೆ ಇದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಅದರಲ್ಲಿ, ಇಬ್ರಾಹಿಂ ರೈಸಿ ಅವರು ಇದ್ದರೋ, ಇಲ್ಲವೋ ಎಂಬುದರ ಮಾಹಿತಿ ನಿಖರವಾಗಿಲ್ಲ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳುತ್ತಿದೆ ಎಂಬುದಾಗಿ ಸಚಿವರೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಬಿಬಿಸಿ ವರದಿ ತಿಳಿಸಿದೆ. ಅಜರ್‌ಬೈಜಾನ್ ಸಮೀಪದ ಜೋಲ್ಫಾ ಎಂಬ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ವರದಿಗಳು ಮಾಹಿತಿ ನೀಡಿವೆ. ಪತನಗೊಂಡಿರುವ ಹೆಲಿಕಾಪ್ಟರ್ ಪತ್ತೆಹಚ್ಚಲು ಸಿಬ್ಬಂದಿಯು ಹರಸಾಹಸ ಪಡುತ್ತಿದೆ ಎಂದು ಕೂಡ ತಿಳಿದುಬಂದಿದೆ.
ಅರಸ್ ನದಿಗೆ ಇರಾನ್ ಹಾಗೂ ಅಜರ್‌ಬೈಜಾನ್ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಪತನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ತುರ್ತು ಭೂಸ್ಪರ್ಶ ಮಾಡಿದ ಕಾರಣದಿಂದಾಗಿ ಯಾರಿಗೂ ಅಪಾಯವಾಗಿಲ್ಲ ಎಂದು ಮತ್ತೊಂದಿಷ್ಟು ಮೂಲಗಳು ತಿಳಿಸಿವೆ.
ಇದನ್ನೂ ಓದಿ: US sanction: ಇರಾನ್ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ