Site icon Vistara News

Helicopter crashed: ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ; ನಾಲ್ವರ ದುರ್ಮರಣ

Helicopter crashed

ಕಠ್ಮಂಡು: ನೇಪಾಳ(Nepal)ದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಏರ್ ಡೈನಾಸ್ಟಿ ಹೆಲಿಕಾಪ್ಟರ್ ಪತನ(Helicopter crashed)ಗೊಂಡಿದೆ. ಘಟನೆಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಚಲಾಯಿಸಿದ್ದು, ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್‌ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿತ್ತು ಎನ್ನಲಾಗಿದೆ.

ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿದೆ ಎನ್ನಲಾಗಿದೆ. ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Tribhuvan International Airport) ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವು ಬುಧವಾರ ಮಧ್ಯಾಹ್ನ 1:54 ಕ್ಕೆ ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟಿತ್ತು ಎಂದು ಹೇಳಿದೆ. ಸೂರ್ಯ ಚೌರ್ ತಲುಪಿದ ನಂತರ 1:57 ರ ಸುಮಾರಿಗೆ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು.

ಎರಡು ವಾರಗಳ ಹಿಂದೆಯೂ ಇದೇ ರೀತಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. 19 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡಿರುವ ಘಟನೆ ವರದಿಯಾಗಿತ್ತು. ರಾಷ್ಟ್ರ ರಾಜಧಾನಿ ಕಾಠ್ಮಂಡುವಿನಲ್ಲಿರುವ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಶೌರ್ಯ ವಿಮಾನಯಾನ ಸಂಸ್ಥೆ ವಿಮಾನ ಪತನ(Plane Crash)ಗೊಂಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಟೇಕ್‌ ಆಫ್‌ ಆಗುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಮಾನದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವಿಮಾನ ಪತನಗೊಂಡಿತ್ತು. ಶೌರ್ಯ ಏರ್‌ಲೈನ್ಸ್‌ ವಿಮಾನ ಹಿಮಾಲಯ ಪ್ರಸಿದ್ಧ ಪ್ರವಾಸಿ ತಾಣವಾಗಿ ರುವ ಪೋಖರಾಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Plane Crash: ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ; ವಿಡಿಯೋ ಇದೆ

Exit mobile version