ನವ ದೆಹಲಿ: ಅಮೆರಿಕದಲ್ಲಿ ಉನ್ನತ ಶಿಕ್ಷಣ (Higher Education) ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಲೇ ಇದ್ದು, ಸದ್ಯ ಅಲ್ಲಿ ಶಿಕ್ಷಣ ಪಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಶೇ.21ರಷ್ಟು ಭಾರತೀಯ ವಿದ್ಯಾರ್ಥಿಗಳು ಎಂದು ಸಮೀಕ್ಷೆಯೊಂದು ಹೇಳಿದೆ.
ಸತತವಾಗಿ ಕಳೆದ ಎರಡು ವರ್ಷಗಳಿಂದ ದಾಖಲೆ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ಹೋಗುತ್ತಿದ್ದಾರೆ. 2021-22ರ ಶೈಕ್ಷಣಿಕ ಸಾಲಿನಲ್ಲಿ ಸರಿಸುಮಾರು 2 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಯ ಅಮೆರಿಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ “ಓಪನ್ ಡೋರ್ಸ್ ರಿಪೋರ್ಟ್ʼʼ ನ ಸಮೀಕ್ಷಾ ವರದಿ ತಿಳಿಸಿದೆ.
2021-22ರ ಶೈಕ್ಷಣಿಕ ಸಾಲಿನಲ್ಲಿ ಅಮೆರಿಕಕ್ಕೆ ಹೋದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 1,99,182. ಅದರ ಹಿಂದಿನ ಸಾಲಿನಲ್ಲಿ ಅಂದರೆ 2020-21 ನೇ ಸಾಲಿನಲ್ಲಿ 1,67,582 ವಿದ್ಯಾರ್ಥಿಗಳು ಹೋಗಿದ್ದರು. ಇದಕ್ಕೆ ಹೋಲಿಸಿದಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.19ರಷ್ಟು ಹೆಚ್ಚಾಗಿದೆ. ಇದರಿಂದ ಅಮೆರಿಕದಲ್ಲಿ ಕಲಿಕೆ ಈಗಲೂ ಭಾರತೀಯ ವಿದ್ಯಾರ್ಥಿಗಳಿಗೆ ಕನಸಿನ ವಿಷಯ ಎಂಬುದು ಸಾಬೀತಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ.
ಅಮೆರಿಕದ ವಿದೇಶಾಂಗ ಇಲಾಖೆಯು ನವ ದೆಹಲಿ, ಚೆನ್ನೈ, ಕೊಲ್ಕತಾ, ಬೆಂಗಳೂರು, ಅಹಮದಾಬಾದ್, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಅಮೆರಿಕದ ಶಿಕ್ಷಣ ಸಂಸ್ಥೆ ಮತ್ತು ಕೋರ್ಸ್‌ಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅಮೆರಿಕವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಭವಿಷ್ಯವನ್ನು ಎದುರಿಸಲು ಅಗತ್ಯವಾಗಿರುವ ತಂತ್ರಜ್ಞಾನ, ಕೌಶಲಗಳನ್ನು (ಉದಾ: ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ ಇತ್ಯಾದಿ) ಕಲಿಯಲು ಅಮೆರಿಕವನ್ನು ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಮೆರಿಕದ ಶಿಕ್ಷಣದ ಬಗ್ಗೆ ಒಲವು ವ್ಯಕ್ತಪಡಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಅಭಿನಂದಿಸುವುದಾಗಿ ಅಮೆರಿಕದ ವಿದೇಶಾಂಗ ಸಚಿವಾಲಯವು ಹೇಳಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಶಿಕ್ಷಣ ಎನ್ನುವುದು ಲಾಭ ದೋಚುವ ವ್ಯಾಪಾರವಲ್ಲ