Site icon Vistara News

ಪಾಕಿಸ್ತಾನದಲ್ಲಿ ಪ್ರವಾಹದಿಂದ ನಿರಾಶ್ರಿತರಾದ ಮುಸ್ಲಿಮರಿಗೆ ಹಿಂದು ದೇವಸ್ಥಾನದಲ್ಲಿ ಆಶ್ರಯ; ಆಹಾರ ವಿತರಣೆ

Hindu temple give Shelter to flood victims Muslims in Pakistan

ಬಲೂಚಿಸ್ತಾನ: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಜನರನ್ನು ಕಂಗಾಲು ಮಾಡಿದೆ. ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಯಾರಾದರೂ ನೆರವು ನೀಡಲಿ, ಹೊಟ್ಟೆಗೊಂದಿಷ್ಟು ಆಹಾರ, ಉಳಿಯಲು ಒಂದು ಜಾಗ ಕೊಟ್ಟರೆ ಸಾಕು ಎಂಬ ಸ್ಥಿತಿ ತಲುಪಿದ್ದಾರೆ. ಪಾಕ್​ನಲ್ಲಿ ನಾರಿ, ಬೋಲನ್​, ಲೆಹ್ರಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಈ ನದಿಗಳ ಸುತ್ತಲೂ ಮನೆ ಕಟ್ಟುಕೊಂಡು ವಾಸವಾಗಿದ್ದವರೆಲ್ಲ ಈಗ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಮನೆ ಕಳೆದುಕೊಂಡು ರಸ್ತೆಗೆ ಬಂದಿದ್ದಾರೆ. ಇದೇ ಪರಿಸ್ಥಿತಿ ಬಲೂಚಿಸ್ತಾನದ ಕಚ್ಚಿ ಎಂಬ ಜಿಲ್ಲೆಯ ಪುಟ್ಟ ಹಳ್ಳಿ ಜಲಾಲ್​ಖಾನ್​​ನಲ್ಲೂ ಎದುರಾಗಿದೆ.

ಜಲಾಲ್​ ಖಾನ್​​ನಲ್ಲಿ ಹಿಂದು ಸಮುದಾಯದವರು ಇದ್ದರೂ, ಪ್ರವಾಹ ಪರಿಸ್ಥಿತಿಯಿಂದ ಅತಿ ಹೆಚ್ಚು ಸಂಕಷ್ಟಕ್ಕೀಡಾಗಿ ನಿರಾಶ್ರಿತರಾದವರು ಮುಸ್ಲಿಂ ಸಮುದಾಯದವರು. ಆದರೆ ಒಂದು ವಿಶೇಷವೆಂದರೆ ಹೀಗೆ ಮನೆ ಕಳೆದುಕೊಂಡು, ಹೊಟ್ಟೆಗೂ ಇಲ್ಲದೆ ಪರದಾಡುತ್ತಿದ್ದ ಮುಸ್ಲಿಂ ಸಮುದಾಯದ 200-300 ಜನರಿಗೆ ಅಲ್ಲಿನ ಹಿಂದು ದೇವಸ್ಥಾನ ಬಾಬಾ ಮಾಧೋದಾಸ ಮಂದಿರದಲ್ಲಿ ಆಶ್ರಯ ಕೊಡಲಾಗಿದೆ. ಊಟವನ್ನೂ ನೀಡಲಾಗಿದೆ.

ಬಾಬಾ ಮಾಧೋದಾಸರು 16ನೇ ಶತಮಾನದ ಹಿಂದು ಸಂತ. ಭಾರತ ವಿಭಜನೆಯಾಗಿ, ಪಾಕಿಸ್ತಾನ ದೇಶ ಹುಟ್ಟುವುದಕ್ಕೂ ಮೊದಲಿನಿಂದಲೂ ಇವರನ್ನು ಹಿಂದು-ಮುಸ್ಲಿಮರು ಪೂಜಿಸುತ್ತಿದ್ದರು. ಈಗಲೂ ಅಲ್ಲಿನ ಕೆಲ ಮುಸ್ಲಿಮರು ಮಾಧೋದಾಸರ ಬಗ್ಗೆ ಪೂಜನೀಯ ಭಾವವನ್ನೇ ಹೊಂದಿದ್ದಾರೆ. ‘ಸಂತ ಮಾಧೋದಾಸರ ಬಗ್ಗೆ ನನ್ನ ಹಿರಿಯರು ನನಗೆ ಹೇಳಿದ್ದಾರೆ. ಅವರು ಯಾವಾಗಲೂ ಒಂಟೆಯ ಮೇಲೆ ಬರುತ್ತಿದ್ದರಂತೆ, ಜಾತಿ-ಧರ್ಮಕ್ಕಿಂತಲೂ ಮಾನವೀಯತೆ ಮಿಗಿಲು ಎಂದು ಸದಾ ಹೇಳುತ್ತಿದ್ದರಂತೆ’ ಎನ್ನುತ್ತಾರೆ ಈ ಮಂದಿರಕ್ಕೆ ಸದಾ ಭೇಟಿ ಕೊಡುವ ಮುಸ್ಲಿಂ ಸಮುದಾಯದ ಇಲ್ತಾಫ್ ಬುಜ್ದಾರ್.

ಜಲಾಲ್​ ಖಾನ್​ನಲ್ಲಿದ್ದ ಅನೇಕ ಹಿಂದುಗಳು ಉದ್ಯೋಗ ಅರಸಿ ಈಗಾಗಲೇ ಬೇರೆಕಡೆಗಳಿಗೆ ವಲಸೆ ಹೋಗಿದ್ದಾರೆ. ಇಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಹಿಂದುಗಳಿದ್ದು, ಈ ಮಂದಿರದಲ್ಲಿ ಪೂಜೆ ಮಾಡುತ್ತಿದ್ದಾರೆ. ಮಂದಿರ ಎತ್ತರದ ಪ್ರದೇಶದಲ್ಲಿ ಇದ್ದಿದ್ದರಿಂದ ಪ್ರವಾಹದ ಅಪಾಯವಿಲ್ಲ. ಸಂಪೂರ್ಣ ಕಾಂಕ್ರೀಟ್​​ನಿಂದ ಕಟ್ಟಲ್ಪಟ್ಟ ದೇಗುಲದಲ್ಲಿ ಸುಮಾರು 100 ಕೋಣೆಗಳಿವೆ. ಅದನ್ನೆಲ್ಲ ಈಗ ಆಶ್ರಯ ನೀಡಲು ಬಳಸಿಕೊಳ್ಳಲಾಗಿದೆ. ಅಂದಹಾಗೇ, ಈ ಮಂದಿರದ ಉಸ್ತುವಾರಿಯನ್ನು ಸದ್ಯ ಭಾಗ್​ ನಾರಿ ತೆಹ್ಸೀಲ್​​ನಲ್ಲಿ ಅಂಗಡಿಯನ್ನು ಹೊಂದಿರುವ ರತನ್​ ಕುಮಾರ್​ (55) ಎಂಬುವರು ಹೊತ್ತಿದ್ದಾರೆ. ಇಲ್ಲಿ ಪ್ರತಿವರ್ಷ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿರುವ ಹಿಂದೂಗಳೂ ಬಂದು, ಪೂಜಿಸಿ ಹೋಗುತ್ತಾರೆ. ಈ ದೇವಸ್ಥಾನದಲ್ಲಿ ಸಾಕುಪ್ರಾಣಿಗಳಿಗೂ ಆಶ್ರಯ ಕೊಡಲಾಗಿದೆ.

ಪಾಕಿಸ್ತಾನದ ಹಲವು ಭಾಗಗಳಲ್ಲಿ, ಇದೇ ಬಲೂಚಿಸ್ತಾನದಲ್ಲೂ ಹಲವು ಹಿಂದು ದೇವಾಲಯಗಳ ಮೇಲೆ ಮುಸ್ಲಿಮರು ದಾಳಿ ಮಾಡಿದ್ದು ಇದೆ. ದೇಗುಲವನ್ನು ಧ್ವಂಸಗೊಳಿಸಿ, ದೇವರ ವಿಗ್ರಹವನ್ನು ನಾಶ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮತ್ತು ಅವರ ಪೂಜಾ ಸ್ಥಳಗಳ ಮೇಲೆ ದಾಳಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದೆಲ್ಲದರ ಮಧ್ಯೆ ಈಗೊಂದು ಹಿಂದು ದೇವಾಲಯದಲ್ಲೇ ಅವರ ಕಷ್ಟಕ್ಕೆ ಆಸರೆ ಸಿಕ್ಕಿದೆ.

ಇದನ್ನೂ ಓದಿ: Pakistan Floods | ಮಳೆ, ಪ್ರವಾಹಕ್ಕೆ 343 ಮಕ್ಕಳು ಸೇರಿ 937 ಬಲಿ, ನೆರವಿಗೆ ಅಂಗಲಾಚಿದ ಪಾಕಿಸ್ತಾನ

Exit mobile version