Site icon Vistara News

Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

Hindus in Bangla

ಭಾರತದ ಸ್ವಾತಂತ್ರ್ಯ ಅನಂತರವೂ ದೇಶದ ಗಡಿಯ ಭಾಗದಲ್ಲಿ ಬಾಂಗ್ಲಾದೇಶದ (bangladesh) ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳು ಪ್ರಭಾವವನ್ನು ಬೀರುತ್ತಲೇ ಇದೆ. ಇದು ಬಾಂಗ್ಲಾಕ್ಕೆ ಹತ್ತಿರದ ನೆರೆಯ ರಾಜ್ಯವಾದ ಪಶ್ಚಿಮ ಬಂಗಾಳದ (west bengal) ಜನರ ಮೇಲೆ ಅದರಲ್ಲೂ ಮುಖ್ಯವಾಗಿ ಬಾಂಗ್ಲಾದಿಂದ ವಲಸೆ ಬಂದಿರುವ (Immigrant) ಹಿಂದೂಗಳ (Hindus in Bangla) ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡುತ್ತಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ಬಾಂಗ್ಲಾದಿಂದ ಭಾರತಕ್ಕೆ ಬಂದರು. ಅವರು ಪಶ್ಚಿಮ ಬಂಗಾಳ, ತ್ರಿಪುರಾ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಆಶ್ರಯ ಪಡೆದರು. ಅನೇಕರು ತಮ್ಮ ಜೀವನವನ್ನು ಪುನರ್ ನಿರ್ಮಿಸುವ ಭರವಸೆಯಲ್ಲಿ ಬಂದರು. ಆದರೆ “ನಿರಾಶ್ರಿತರು” ಎಂಬ ಶಾಶ್ವತ ಹಣೆಪಟ್ಟಿಯನ್ನು ಪಡೆದರು.

ದಶಕಗಳ ಅನಂತರ ಬಾಂಗ್ಲಾದಲ್ಲಿ ಉಂಟಾಗುತ್ತಿರುವ ರಾಜಕೀಯ, ಸಾಮಾಜಿಕ ಸಂಘರ್ಷದ ಪರಿಣಾಮಗಳು ಬಾಂಗ್ಲಾದಿಂದ ವಲಸೆ ಬಂದಿರುವ ಜನರು ಇರುವ ರಾಜ್ಯಗಳಲ್ಲಿ ಪರಿಣಾಮ ಬೀರುತ್ತಿದೆ. ಇಲ್ಲಿರುವ ಅನೇಕ ಅಲ್ಪಸಂಖ್ಯಾತ ಸಮುದಾಯಗಳು ನೆರೆಯ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸುತ್ತಾರೆ. ಇದು ಬಂಗಾಳಿ ಹಿಂದೂಗಳ ಆತಂಕಕ್ಕೆ ಕಾರಣವಾಗುತ್ತದೆ. ಹಿಂದಿನ ದೌರ್ಜನ್ಯಗಳಿಗೆ ಸಾಕ್ಷಿಯಾದ ಹಲವಾರು ಬಂಗಾಳಿ ಹಿಂದೂಗಳು ಈ ಕುರಿತು ತಮ್ಮ ಅನುಭವಗಳನ್ನು oneindia ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ.


ಮನೆಗಳನ್ನು ಸುಟ್ಟು ಹಾಕಿದ್ದರು

1971ರಲ್ಲಿ ಭಾರತಕ್ಕೆ ಬಂದ ಸುಶೀಲ್ ಗಂಗೋಪಾಧ್ಯಾಯ ಅವರು ಮೂಲತಃ ಬಾಂಗ್ಲಾದೇಶದ ನೊವಾಖಾಲಿ ಜಿಲ್ಲೆಯವರು. ಅಲ್ಲಿ ಅವರು ದೊಡ್ಡ ಕುಟುಂಬ ಮತ್ತು ವಿಶಾಲವಾದ ಭೂಮಿಯನ್ನು ಹೊಂದಿದ್ದರು ಆದರೆ ವಿಮೋಚನಾ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೈನ್ಯ ಮತ್ತು ರಜಾಕಾರರು ದಾಳಿ ಮಾಡಿ ಇವರ ಮನೆಗಳನ್ನು ಸುಟ್ಟು ಹಾಕಿದರು. ಅನೇಕರು ಕ್ರೂರವಾಗಿ ಕೊಲ್ಲಲ್ಪಟ್ಟರು ಎಂದು ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯದ ಬಳಿಕ ಬಹುಸಂಖ್ಯಾತ ಸಮುದಾಯದ ದಬ್ಬಾಳಿಕೆಯು ಅವರನ್ನು ಭಾರತದಲ್ಲಿ ಶಾಶ್ವತ ಆಶ್ರಯ ಪಡೆಯಲು ಪ್ರೇರೇಪಿಸಿತ್ತು.


ಪ್ರಸ್ತುತ ಬಾಂಗ್ಲಾದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆ ಹೃದಯ ವಿದ್ರಾವಕವಾಗಿದೆ. ಗರ್ಭಿಣಿಯ ಹೊಟ್ಟೆಗೆ ಒದೆಯುವ ದೃಶ್ಯಗಳನ್ನು ನಾನು ನೋಡಿದ್ದೇನೆ. ಇಂತಹ ಕ್ರೂರತೆಯನ್ನು ಊಹಿಸಲೂ ಸಾಧ್ಯವಿಲ್ಲ. ಒಬ್ಬ ಭಾರತೀಯನಾಗಿ ನಾನು ಅವರನ್ನು ರಕ್ಷಿಸಬೇಕೆಂದು ಒತ್ತಾಯಿಸುತ್ತೇನೆ. ನಮ್ಮ ಸ್ಥಳೀಯ ಸಹೋದರರು ಅಲ್ಲಿ ಹಿಂದೂಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಮುಂದುವರೆಸಿದರೆ ನಾವು ಬಾಂಗ್ಲಾದೇಶದಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿಯನ್ನು ನಡೆಸಬೇಕಾಗಬಹುದು ಎನ್ನುತ್ತಾರೆ.


1971ರ ಅವರ ನೆನಪುಗಳು ಇನ್ನೂ ಜೀವಂತವಾಗಿವೆ. ಆಗ ನನಗೆ ಕೇವಲ 10 ಅಥವಾ 12 ವರ್ಷ. ರಜಾಕಾರರು ನಮ್ಮನ್ನು ಹಿಂಸಿಸಿದರು, ಪುರುಷರ ದೇಹಗಳನ್ನು ನದಿಗಳಿಗೆ ಎಸೆದು ತಾಯಿಯಂದಿರ ಮೇಲೆ ಅತ್ಯಾಚಾರ ನಡೆಸಿದರು. ಪಾಕಿಸ್ತಾನಿ ಸೇನೆಯಿಂದ ಅನೇಕ ಮಹಿಳೆಯರು ಗರ್ಭ ಧರಿಸುವಂತಾಯಿತು. ವರ್ಷಗಳ ಅನಂತರವೂ ಆ ಗಾಯಗಳು ಇನ್ನೂ ಉಳಿದಿವೆ ಎನ್ನುತ್ತಾರೆ ಅವರು.


ಭಾರತಕ್ಕೆ ಓಡಿ ಬಂದ ತುಂಬು ಗರ್ಭಿಣಿ

ಬಾಂಗ್ಲಾದೇಶದ ಬಂಗಾವ್‌ನ ಅನಿಮಾ ದಾಸ್‌ ಅವರ ಕಥೆ ಎಂತಹ ಕಲ್ಲು ಹೃದಯವನ್ನೂ ಕರಗಿಸಬಲ್ಲದು. ಆ ದುಃಖದ ದಿನಗಳನ್ನು ನೆನಪಿಸಿಕೊಳ್ಳುವ ಅವರು, ಆಗ ನನ್ನ ಮಗ ಚಿಕ್ಕವ, ನನ್ನ ಮಗಳು ಹೊಟ್ಟೆಯಲ್ಲಿದ್ದಳು. ದೇಶಾದ್ಯಂತ ಸಂಘರ್ಷ ಉಂಟಾಗಿತ್ತು. ಮನೆಗಳು ಸುಟ್ಟುಹೋದವು, ಭಯದಿಂದ ಮಾವ ನಮ್ಮನ್ನು ಭಾರತಕ್ಕೆ ಕಳುಹಿಸಿದರು. ಪುರುಷರ ವಿರುದ್ಧ ಹಿಂಸಾಚಾರವನ್ನು ನೆನಪಿಸಿಕೊಂಡರೆ ಈಗಲೂ ಹೃದಯ ಕಂಪಿಸುತ್ತೆ ಎನ್ನುತ್ತಾರೆ.


ಬಳಿಕ ಹಲವು ಬಾರಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿ ಮತ್ತೆ ವಾಸಿಸುವ ಆಲೋಚನೆ ಮಾಡಲಾರೆ ಎನ್ನುತ್ತಾರೆ ಅವರು.


ಹಿಂದೂಗಳ ಮೇಲೆ ನಿರಂತರ ಶೋಷಣೆ

ಬಾಂಗ್ಲಾದೇಶದಿಂದ ವಲಸೆ ಬಂದ ಹರದನ್ ಬಿಸ್ವಾಸ್ ಅವರು ಮಾತನಾಡಿ, ನಿರಂತರ ಶೋಷಣೆಯು ಹಿಂದೂ ಸಮುದಾಯವನ್ನು ಅಲ್ಲಿ ಭಯದಲ್ಲೇ ಇರಿಸಿದೆ. ಅನೇಕರು ತಮ್ಮ ತಾಯ್ನಾಡಿಗೆ ಓಡಿಹೋಗಲು ಮತ್ತು ಭಾರತದಲ್ಲಿ ಆಶ್ರಯ ಪಡೆಯುವಂತೆ ಪ್ರೇರೇಪಿಸುತ್ತಿದೆ. ಹಿಂದೂಗಳು ಬಾಂಗ್ಲಾದೇಶದಲ್ಲಿ ಐತಿಹಾಸಿಕವಾಗಿ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ. ಸ್ವಾತಂತ್ರ್ಯದ ಸಮಯದಿಂದಲೂ ನಿರಂತರ ಅಪಾಯಗಳನ್ನು ಎದುರಿಸುತ್ತಲೇ ಇದ್ದಾರೆ ಎನ್ನುತ್ತಾರೆ ಅವರು.

ಅಜ್ಜನನ್ನು ಕಣ್ಣೆದುರೇ ಕೊಂದರು

1956ರಲ್ಲಿ ಭಾರತಕ್ಕೆ ಆಗಮಿಸಿದ್ದ ಪರೇಶ್ ದಾಸ್ ಅವರು ಮಾತನಾಡಿ, ನನ್ನ ಅಜ್ಜನನ್ನು ಕಣ್ಣೆದುರೇ ಕೊಂದರು. ಸೋದರಸಂಬಂಧಿಗಳ ಮೇಲೆ ಹಲ್ಲೆ ನಡೆಸಿದರು. ನಾವು ಭಯದಿಂದ ದೇಶ ಬಿಟ್ಟು ಬಂದೆವು. ಈಗ ಭಾರತದಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದರೂ, ನೊವಾಖಾಲಿಯಲ್ಲಿರುವ ನಮ್ಮ ಸಂಬಂಧಿಕರು ಇನ್ನೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ, ನನ್ನ ಚಿಕ್ಕಪ್ಪನನ್ನು ಜಮೀನು ವಿವಾದದಲ್ಲಿ ಕೊಲ್ಲಲಾಯಿತು. ಆಸ್ತಿಗಿಂತ ಅವರ ಜೀವನಕ್ಕೆ ಆದ್ಯತೆ ನೀಡುವಂತೆ ನಾನು ಅವರಿಗೆ ಹೇಳಿದ್ದೆ ಎಂದು ಅಳಲು ತೋಡಿಕೊಂಡರು.

ಹಿಂದೂ ಆಗಿರುವುದೇ ಅಲ್ಲಿ ಅಪರಾಧ

ರಶೋಮೊಯ್ ಬಿಸ್ವಾಸ್ ಅವರು 1971ರ ಅನಂತರದ ಕಿರುಕುಳಗಳನ್ನು ವಿವರಿಸುತ್ತಾ, ಹಿಂದೂ ಆಗಿರುವುದೇ ಅಲ್ಲಿ ಅಪರಾಧವಾಗಿತ್ತು. ಸ್ವಾತಂತ್ರ್ಯದ ಅನಂತರವೂ ಇದು ಕಡಿಮೆ ಆಗಲಿಲ್ಲ. ಪಾಕಿಸ್ತಾನಿ ಸೇನೆ ಮತ್ತು ಜಮಾತ್ ಪಡೆಗಳು ಹಿಂದುಗಳನ್ನೇ ಗುರಿಯಾಗಿಸಿಕೊಂಡು ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದವು.


ಇದನ್ನೂ ಓದಿ: Bangladesh Unrest: ಪ್ರತಿಭಟನೆಗೆ ಮಣಿದು ರಾಜೀನಾಮೆಗೆ ಮುಂದಾದ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಒಬೈದುಲ್ ಹಸನ್


ನನ್ನ ಕುಟುಂಬ ಅಲ್ಲಿ ಆಹಾರವಿಲ್ಲದೆ ಅನೇಕ ರಾತ್ರಿಗಳನ್ನು ಕಳೆದಿದೆ. ನಾವು ಈಗ ಭಾರತದಲ್ಲಿ ಶಾಂತಿಯಿಂದ ಬದುಕುತ್ತಿರುವಾಗ ನಮ್ಮ ಅನೇಕ ಸಂಬಂಧಿಕರು ಬಾಂಗ್ಲಾದೇಶದಲ್ಲಿ ಉಳಿದಿದ್ದಾರೆ. ಭಾರತ ಸರ್ಕಾರವು ಮಧ್ಯಪ್ರವೇಶಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಆಗ ಮಾತ್ರ ಅಲ್ಲಿ ಹಿಂದೂಗಳು ಭಯವಿಲ್ಲದೆ ಬದುಕಬಹುದು ಎನ್ನುತ್ತಾರೆ ಅವರು.

Exit mobile version