ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರ (Israel Palestine War) ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಅದರಲ್ಲೂ. ಹಮಾಸ್ ಉಗ್ರರ ದಾಳಿಗೆ ಪ್ರತಿಧಾಳಿ ನಡೆಸುತ್ತಿರುವ ಇಸ್ರೇಲ್ ಸೇನೆಯು ಗಾಜಾ ನಗರವನ್ನು (Gaza City) ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಮುಂದಾಗಿದೆ. ಗಾಜಾ ನಗರದಲ್ಲಿ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರ ಬೆನ್ನಲ್ಲೇ, ಇಸ್ರೇಲ್ ಶಾಲಾ ಶಿಕ್ಷಕನೊಬ್ಬ (School Teacher), “ಇಸ್ರೇಲ್ ಸೈನಿಕರು ಅತ್ಯಾಚಾರಿಗಳು” ಎಂದು ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇಸ್ರೇಲ್‌ನ ಪೆಟಾಹ್ ಟಿಕ್ವಾ ಎಂಬ ನಗರದ ಶಾಲೆಯಲ್ಲಿ ಇತಿಹಾಸ ಬೋಧಿಸುತ್ತಿರುವ ಶಿಕ್ಷಕನೊಬ್ಬನು ಇತ್ತೀಚೆಗೆ ಇಸ್ರೇಲ್ ವಿರುದ್ಧ ಹಾಗೂ ಹಮಾಸ್ ಪರವಾಗಿ ಹಲವರಿಗೆ ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸಿದ್ದಾನೆ. ಹಾಗಾಗಿ ಆತನನ್ನು ನವೆಂಬರ್ 10ರಂದು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. “ಇಸ್ರೇಲ್ ಸೈನಿಕರು ಪ್ಯಾಲೆಸ್ತೀನ್ ನಾಗರಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ ಹಾಗೂ ಎಸಗುತ್ತಿದ್ದಾರೆ. ಹಾಗಾಗಿ, ಇಸ್ರೇಲ್ ವಿರುದ್ಧ ಹೋರಾಡಲು ಹಮಾಸ್ ಉಗ್ರರು ಮುಕ್ತರಾಗಿದ್ದಾರೆ” ಎಂಬುದಾಗಿ ಶಿಕ್ಷಕನು ಮೆಸೇಜ್ ಕಳುಹಿಸಿದ್ದ ಎಂದು ತಿಳಿದುಬಂದಿದೆ.
“ಪ್ಯಾಲೆಸ್ತೀನ್ ಮಹಿಳೆಯರ ಮೇಲೆ ಇಸ್ರೇಲ್ ಯೋಧರು ಅತ್ಯಾಚಾರ ಮಾಡುತ್ತಿಲ್ಲವೇ? ಹೌದು, ಅವರು 1948ರಿಂದಲೂ ಅತ್ಯಾಚಾರ ಕೃತ್ಯಗಳಲ್ಲಿ ತೊಡಗಿದ್ದಾರೆ. ಆಕ್ರಮಣಕ್ಕೀಡಾದ ದೇಶದವರು ಹೋರಾಡಲು ಎಲ್ಲ ರೀತಿಯಲ್ಲೂ ಮುಕ್ತರಾಗಿದ್ದಾರೆ. ಪ್ಯಾಲೆಸ್ತೀನ್ ಮಕ್ಕಳನ್ನು, ಮಹಿಳೆಯರನ್ನು ಇಸ್ರೇಲ್ ಸೈನಿಕರು ಕೊಂದಿದ್ದಾರೆ. ಹಾಗಾಗಿ, ಇಸ್ರೇಲ್ ಯೋಧರ ವಿರುದ್ಧ ಹೋರಾಡಲು ಹಮಾಸ್ ಉಗ್ರರು ಸ್ವತಂತ್ರರಾಗಿದ್ದಾರೆ. ಆದರೆ, ಪ್ಯಾಲೆಸ್ತೀನ್ ಮಹಿಳೆಯರ ಮೇಲೆ ಇಸ್ರೇಲ್ ಸೈನಿಕರು ಅತ್ಯಾಚಾರ ಎಸಗಿದ್ದನ್ನು ಯಾವ ಇತಿಹಾಸದ ಪುಸ್ತಕದಲ್ಲೂ ದಾಖಲಾಗುವುದಿಲ್ಲ” ಎಂದು ಇತಿಹಾಸ ಶಿಕ್ಷಕನು ಬೇರೆ ಶಿಕ್ಷಕರಿಗೆ ಮೆಸೇಜ್ ಕಳುಹಿಸಿದ್ದ ಎಂದು ತಿಳಿದುಬಂದಿದೆ. ಹಾಗಾಗಿ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿತ್ತು. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿಕ್ಷಕನ ಹೆಸರನ್ನು ಇಸ್ರೇಲ್ ಪೊಲೀಸರು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: Israel- Palestine War: ಇಸ್ರೇಲ್ ಬಾಂಬ್ ದಾಳಿ: ಗಾಜಾದ ಆಸ್ಪತ್ರೆಗಳು ಕ್ಲೋಸ್; ಇಸ್ರೇಲ್ ವಿರುದ್ಧ UN ನಿರ್ಣಯ
12 ಸಾವಿರ ದಾಟಿದ ಸಾವಿನ ಸಂಖ್ಯೆ
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.