Site icon Vistara News

Johnny Depp Vs Amber Heard: ಹೆಂಡತಿ ಬರೆದ ಲೇಖನದಿಂದ ಅಪಮಾನ, ಜಾನಿಡೆಪ್‌ಗೆ ₹116 ಕೋಟಿ ಪರಿಹಾರ ಧನ

ಜಾನಿ ಡೆಪ್‌

ವರ್ಜೀನಿಯಾ: ಖ್ಯಾತ ಹಾಲಿವುಡ್‌ ನಟ ಜಾನಿ ಡೆಪ್‌ (Jonney depp) ಅವರು ಮತ್ತು ಅವರ ಮಾಜಿ ಪತ್ನಿ ಆ್ಯಂಬರ್‌ ಹರ್ಡ್‌ (Amber Heard) ನಡುವಿನ ಬಹು ಚರ್ಚಿತ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ (Johnny Depp Vs Amber Heard) ಡೆಪ್‌ ಅವರಿಗೆ ಗೆಲುವಾಗಿದೆ.

ತಾನೂ ಕೌಟುಂಬಿಕ ದೌರ್ಜನ್ಯ ಅನುಭವಿಸಿದ್ದಾಗಿ ಆ್ಯಂಬರ್‌ ಹರ್ಡ್‌ ಅವರು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ 2018ರಲ್ಲಿ ಬರೆದ ಲೇಖನದಿಂದ ಹುಟ್ಟಿದ ವಿವಾದ  ಇದೀಗ ನಾಲ್ಕು ವರ್ಷಗಳ ಬಳಿಕ ಇತ್ಯರ್ಥ ಕಂಡಿದೆ. ವರ್ಜೀನಿಯಾದ ಫೈರ್‌ಫಾಕ್ಸ್‌ನಲ್ಲಿರುವ ನ್ಯಾಯಾಲಯ ಜಾನಿ ಡೆಪ್‌ ಅವರಿಗೆ 15 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು 116 ಕೋಟಿ ರೂ.) ಪರಿಹಾರ ಧನ ನೀಡುವಂತೆ ಸೂಚಿಸಿದೆ. ಇದೇ ವೇಳೆ, ಪತ್ರಿಕೆಯಲ್ಲಿ ಬರೆದಿರುವ ವಿಚಾರಗಳೆಲ್ಲ ಸುಳ್ಳು ಎಂದು ಪ್ರತಿವಾದ ಮಾಡಿದ್ದನ್ನು ಪ್ರಶ್ನಿಸಿ ಆ್ಯಂಬರ್‌ ಹರ್ಡ್‌ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಹರ್ಡ್‌ ಅವರಿಗೂ ಗೆಲುವಾಗಿದೆ. ಡೆಪ್‌ ಅವರು 2 ಮಿಲಿಯನ್‌ ಅಮೆರಿಕನ್‌ (15 ಕೋಟಿ ರೂ.) ಡಾಲರ್‌ ಪರಿಹಾರ ನೀಡಬೇಕು ಎಂದು ಕೋರ್ಟ್‌ ಆದೇಶಿಸಿದೆ. ಆದರೆ, ಡೆಪ್‌ ಅವರಿಗೆ ಕೊಡಬೇಕಾಗಿರುವ ಪರಿಹಾರ ಮೊತ್ತಕ್ಕೆ ಹೋಲಿಸಿದರೆ ಇದು ತುಂಬ ಸಣ್ಣದು.

ಪೈರೇಟ್ಸ್‌ ಆಫ್‌ ಕೆರೆಬಿಯನ್‌ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ, ಆಸ್ಕರ್‌ ಪ್ರಶಸ್ತಿಯನ್ನೂ ಪಡೆದ ನಟ ಡೆಪ್‌ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಾಧೀಶರು ಆರು ವರ್ಷಗಳ ಬಳಿಕ ನನಗೆ ಮರು ಹುಟ್ಟು ನೀಡಿದ್ದಾರೆ ಎಂದು ಹೇಳಿದ್ದಾರೆ. ʻಮಾಧ್ಯಮದ ಮೂಲಕ ನನ್ನ ವಿರುದ್ಧ ಕ್ರಿಮಿನಲ್‌ ಆಪಾದನೆಗಳನ್ನು ಮಾಡಲಾಗಿತ್ತು. ತೀವತರವಾದ ನೋವು ತಂದ ಈ ಆರೋಪಗಳನ್ನು ನಾನು ಪ್ರಶ್ನೆ ಮಾಡಲೇಬೇಕಾಗಿತ್ತು. ಯಾಕೆಂದರೆ, ಇದು ನನ್ನ ಮೇಲೆ, ನನ್ನ ಮಕ್ಕಳ ಮೇಲೆ, ನನ್ನ ಬದುಕಿನ ಮೇಲೆ ದೊಡ್ಡ ಪರಿಣಾಮವನ್ನು ಬೀರಿತ್ತು. ಇದೀಗ ಪ್ರಕರಣದಲ್ಲಿ ಗೆಲುವು ಸಿಕ್ಕಿದ್ದು ನನಗೆ ನಿರಾಳತೆ ನೀಡಿದೆ,ʼʼ ಎಂದಿದ್ದಾರೆ.

ಇತ್ತ ಆ್ಯಂಬರ್‌ ಹರ್ಡ್‌ ಅವರು ತೀರ್ಪಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. ʻʻಶಬ್ದಗಳಲ್ಲಿ ವಿವರಿಸಲಾಗದಷ್ಟು ನಿರಾಸೆಯನ್ನು ಅನುಭವಿಸಿದ್ದೇನೆ. ನಾನು ನೀಡಿದ ಪರ್ವತದಷ್ಟು ದಾಖಲೆಗಳು ನನ್ನ ಗಂಡನ ಅಧಿಕಾರದ ದುರುಪಯೋಗ, ಪ್ರಭಾವದ ಮುಂದೆ ನಿಲ್ಲಲಿಲ್ಲ,ʼʼ ಎಂದಿದ್ದಾರೆ.

 “ಈ ತೀರ್ಪು ಬೇರೆ ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂಬುದು ನೆನೆದು ಇನ್ನೂ ನಿರಾಶೆಯಾಗಿದೆ. ಇದು ಹಿನ್ನಡೆಯೇ. ಮಹಿಳೆ ವಿರುದ್ಧದ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಎದುರಾಗಿದೆ” ಎಂದಿದ್ದಾರೆ  36 ವರ್ಷದ ಆಂಬರ್‌ ಹರ್ಡ್.

ಪ್ರೀತಿಯಿಂದ ಆರಂಭವಾದ ಬದುಕು
ಜಾನಿ ಡೆಪ್ ಮತ್ತು ಆ್ಯಂಬರ್‌ ಹರ್ಡ್ ಅದೆಷ್ಟೋ ವರ್ಷ ಕಾಲ ಪ್ರೀತಿಸಿದ ಬಳಿಕ 2015ರಲ್ಲಿ ಮದುವೆಯಾಗಿದ್ದರು. ಆದರೆ, ಒಂದುವರೆ ವರ್ಷದಲ್ಲಿ ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ಜಾನಿ ಡೆಪ್‌ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು ಹರ್ಡ್‌. 2017ರಲ್ಲಿ ಅವರಿಬ್ಬರೂ ವಿಚ್ಛೇದನ ಪಡೆದರು.

ಇಷ್ಟು ಆತ್ಮೀಯವಾಗಿತ್ತು ಬದುಕು

ಮತ್ತೆ ಎದ್ದು ಬಂದ ವಿವಾದ
ವಿಚ್ಛೇದನದ ಎಲ್ಲ ಪ್ರಕ್ರಿಯೆಗಳು ಮುಗಿದು ಇಬ್ಬರೂ ಬೇರೆಯಾಗಿದ್ದರು. ಆದರೆ, 2018ರಲ್ಲಿ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಆ್ಯಂಬರ್‌ ಹರ್ಡ್‌ ಬರೆದ ಒಂದು ಲೇಖನ ಭಾರಿ ವಿವಾದಕ್ಕೆ ಕಾರಣವಾಯಿತು. ಅದರಲ್ಲಿ ಹರ್ಡ್‌ ಅವರು, ತಾನು ಕೌಟುಂಬಿಕ ದೌರ್ಜನ್ಯಕ್ಕೊಳಗಾದವರನ್ನು ಪ್ರತಿನಿಧಿಸುವ ವ್ಯಕ್ತಿ ಎಂಬಂತೆ ಬಿಂಬಿಸಿದ್ದರು. ಆದರೆ, ಜಾನಿ ಡೆಪ್ ಹೆಸರನ್ನು ಅವರು ಆ ಲೇಖನದಲ್ಲಿ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಆದರೆ, ಅದು ಜಾನಿ ಡೆಪ್ ವಿರುದ್ಧ ಆ್ಯಂಬರ್‌ ಹರ್ಡ್ ಮಾಡಿದ ಆರೋಪ ಎಂದು ಯಾರಿಗಾದರೂ ಅರ್ಥವಾಗುವಂತಿತ್ತು. ಈ ಲೇಖನದಿಂದ ರೊಚ್ಚಿಗೆದ್ದ ಜಾನಿ ಡೆಪ್ ತನ್ನ ಮಾಜಿ ಪತ್ನಿ ವಿರುದ್ಧ 50 ಮಿಲಿಯನ್ ಯುಎಸ್ ಡಾಲರ್ (ಸುಮಾರು 388 ಕೋಟಿ ರೂ) ಮಾನನಷ್ಟ ಮೊಕದ್ದಮೆ ಹಾಕಿದರು. ಇದಕ್ಕೆ ಬದಲಾಗಿ ಆಂಬರ್ ಹರ್ಡ್ ಕೂಡ 100 ಮಿಲಿಯನ್ ಡಾಲರ್ (ಸುಮಾರು 775 ಕೋಟಿ ರೂ) ಮಾನನಷ್ಟ ಕೇಸ್ ಹೂಡಿದರು. ತಾನು ಮಾಡಿದ ಆರೋಪ ಸುಳ್ಳು ಎಂದು ಜಾನಿ ಡೆಪ್ ವಕೀಲರು ಹೇಳಿದ್ದರಿಂದ ತನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೇಳಿ ಆಕೆ ಈ ಮಾನನಷ್ಟಕ್ಕೆ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಲೈವ್‌ ವಿಚಾರಣೆ
ಆ್ಯಂಬರ್‌ ಹರ್ಡ್‌ ಅವರು ಲೇಖನದಲ್ಲಿ ಜಾನಿ ಡೆಪ್‌ ಅವರ ಹೆಸರನ್ನು ಉಲ್ಲೇಖಿಸಲಿಲ್ಲವಾದರೂ ನಂತರ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ತಾನು ಮದುವೆಗೆ ಮೊದಲು ಮತ್ತು ನಂತರ ಅನುಭವಿಸಿದ ಎಲ್ಲ ಸಂಕಟಗಳನ್ನು, ಆಗಿರುವ ಗಾಯಗಳನ್ನು ತೋರಿಸಿದ್ದರು. ಇದೆಲ್ಲವೂ ಫೇರ್‌ ಫಾಕ್ಸ್‌ ನ್ಯಾಯಾಲಯದಲ್ಲಿ ನಡೆದ ಆರು ವಾರಗಳ ವಿಚಾರಣೆ ಲೈವ್‌ ಆಗಿ ಜನರ ಮುಂದೆ ಬಂದಿತ್ತು. ಆದರೆ, ನಿಜವಾಗಿ ಹಿಂಸೆ ನೀಡಿದ್ದು ಅವಳೇ, ಈಗ ನನ್ನ ಮೇಲೆ ಆರೋಪ ಮಾಡುತಿದ್ದಾಳೆ ಎಂದು ಡೆಪ್‌ ವಾದಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರಿಗೂ ಮಾನನಷ್ಟ ಆಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತಾದರೂ ಅಂತಿಮವಾಗಿ ಜಾನಿ ಡೆಪ್‌ಗೆ ಹೆಚ್ಚು ಪರಿಹಾರವನ್ನು ನೀಡಿದೆ.

ಯಾರು ಈ ಜಾನಿ ಡೆಪ್‌?
59 ವರ್ಷದ ಜಾನ್‌ ಕ್ರಿಸ್ಟೋಫರ್‌ ಡೆಪ್‌ 2 ಅವರು ಅಮೆರಿಕ ಮೂಲದವರು. ಅವರು ನಟ ಮಾತ್ರವಲ್ಲ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರೂ ಹೌದು. ನೈಟ್‌ ಮೇರ್‌ ಆನ್‌ ಎಲ್ಮ್‌ ಸ್ಟ್ರೀಟ್‌ ಎಂಬ ಹಾರರ್‌ ಸಿನಿಮಾದೊಂದಿಗೆ 1984ರಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು 2012ರ ಹೊತ್ತಿಗೆ ಜಗತ್ತಿನ ಅತಿ ದೊಡ್ಡ ಸಿನಿಮಾ ತಾರೆಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದರು. ಆಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಗಿನ್ನೆಸ್‌ ದಾಖಲೆ ಗುರುತಿಸಿತ್ತು. ಒಟ್ಟಾರೆ 36 ಸಿನಿಮಾಗಳಲ್ಲಿ  ಅವರು ನಟಿಸಿದ್ದಾರೆ. ಆ್ಯಂಬರ್‌ ಹರ್ಡ್‌ ಕೂಡಾ ಉತ್ತಮ ನಟಿಯಾಗಿದ್ದು, ಇವರಿಬ್ಬರೂ ಹಲವು ಸಿನಿಮಾಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು.

Exit mobile version