Site icon Vistara News

Hollywoodgate: ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಮೇಲೆ ಬೆಳಕು ಚೆಲ್ಲುವ ʼಹಾಲಿವುಡ್‌ ಗೇಟ್‌ʼ

hollywoodgate

hollywoodgate

ಕಾಬೂಲ್‌: ಈಜಿಪ್ಟ್ ಚಲನಚಿತ್ರ ನಿರ್ದೇಶಕ ಇಬ್ರಾಹಿಂ ನಶಾತ್ ಅವರ ಹೊಸ ಸಾಕ್ಷ್ಯಚಿತ್ರ ʼಹಾಲಿವುಡ್‌ ಗೇಟ್‌ʼ (Hollywoodgate) ಅಮೆರಿಕನ್ ಪಡೆಗಳು ಬಿಟ್ಟುಹೋದ ಮಿಲಿಟರಿ ಮೂಲ ಸೌಕರ್ಯವನ್ನು ಬಳಸಿಕೊಂಡು ತಾಲಿಬಾನ್ ಹೇಗೆ ಅಫಘಾನಿಸ್ತಾನದಲ್ಲಿ ತನ್ನ ಅಧಿಕಾರದ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು ಎನ್ನುವುದನ್ನು ವಿವರಿಸುತ್ತದೆ. ʼಹಾಲಿವುಡ್‌ ಗೇಟ್‌ʼ ಸಾಕ್ಷ್ಯ ಚಿತ್ರದ ಬಗ್ಗೆ ಇಬ್ರಾಹಿಂ ನಶಾತ್ (Ibrahim Nash’a) ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ಸುದ್ದಿ ಬಂದಾಗ ಇಬ್ರಾಹಿಂ ನಶಾತ್ ಅವರು ಸಿರಿಯನ್ ಚಲನಚಿತ್ರ ನಿರ್ಮಾಪಕ ತಲಾಲ್ ಡೆರ್ಕಿ ಅವರ ಹೊಸ ಸಾಕ್ಷ್ಯಚಿತ್ರ ʼಅಂಡರ್ ದಿ ಸ್ಕೈ ಆಫ್ ಡಮಾಸ್ಕಸ್ʼ ಅನ್ನು ಪೂರ್ಣಗೊಳಿಸಲು ಎಡಿಟಿಂಗ್ ರೂಮ್‌ನಲ್ಲಿ ಕುಳಿತಿದ್ದರು. “ಈ ವಿಚಾರ ತಿಳಿದಾಗ ನಾವು ಕೆಲಸ ಮಾಡುವುದನ್ನು ನಿಲ್ಲಿಸಿ ದೂರದರ್ಶನದಲ್ಲಿ ಬರುವ ಸುದ್ದಿಗಳನ್ನು ನೋಡಲು ಪ್ರಾರಂಭಿಸಿದೆವು” ಎಂದು ಬರ್ಲಿನ್ ಮೂಲದ ಈಜಿಪ್ಟ್ ಸಾಕ್ಷ್ಯಚಿತ್ರ ನಿರ್ದೇಶಕ ನಶಾತ್ ನೆನಪಿಸಿಕೊಳ್ಳುತ್ತಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೆನಿಸ್ ಚಲನಚಿತ್ರೋತ್ಸವದಲ್ಲಿ ʼಹಾಲಿವುಡ್‌ ಗೇಟ್‌ʼ ಪ್ರಥಮ ಪ್ರದರ್ಶನಗೊಂಡು ವ್ಯಾಪಕ ಮೆಚ್ಚುಗೆ ಗಳಿಸಿತ್ತು. ಡೆರ್ಕಿ, ಬೋರಿಸ್ ಮತ್ತು ಅಮೇರಿಕನ್ ನಟ-ನಿರ್ಮಾಪಕ ಒಡೆಸ್ಸಾ ರೇ ಈ ಡಾಕ್ಯಮೆಂಟರಿಯನ್ನು ನಿರ್ಮಿಸಿದ್ದಾರೆ. ತಾಲಿಬಾನ್ 2021ರಲ್ಲಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರದ ದಿನಗಳಲ್ಲಿ ನಶಾತ್ ಚಿತ್ರೀಕರಣ ನಡೆಸಿದ್ದರು. 91 ನಿಮಿಷಗಳ ಈ ಡಾಕ್ಯುಮೆಂಟರಿ ಇಂಗ್ಲಿಷ್‌, ಫಾರ್ಸಿ ಮತ್ತು ಪಾಸ್ತು ಭಾಷೆಗಳಲ್ಲಿ ತಯಾರಾಗಿದೆ.

ಪೆಂಟಗನ್‌ ಪ್ರಕಾರ ಅಮೆರಿಕದ ಮಿಲಿಟರಿ 2021ರ ಮಧ್ಯದಲ್ಲಿ ಸುಮಾರು 7.12 ಬಿಲಿಯನ್‌ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಅಫಘಾನಿಸ್ತಾನದಲ್ಲೇ ಬಿಟ್ಟು ತೆರಳಿತ್ತು. ಅಮೆರಿಕದ ಮಿಲಿಟರಿ ಬೇಸ್‌ನಲ್ಲಿದ್ದ ಈ ಆಯುಧಗಳ ಖಜಾನೆಯನ್ನು ಗಮನಿಸಿದ ತಾಲಿಬಾನ್‌ ಇದನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.

ನಾಶಾತ್ ಸ್ವತಃ ಕ್ಯಾಮೆರಾವನ್ನು ಹಿಡಿದುಕೊಂಡು ಹಲವು ವಾರಗಳ ಕಾಲ ʼಹಾಲಿವುಡ್ ಗೇಟ್ʼ ಅನ್ನು ಚಿತ್ರೀಕರಿಸಿದ್ದರು. ಈ ಸಾಕ್ಷ್ಯಚಿತ್ರವು ತಾಲಿಬಾನ್ ವಾಯುಪಡೆಯ ಹೊಸ ಮುಖ್ಯಸ್ಥ ಮೌಲಾವಿ ಮನ್ಸೂರ್ ಮತ್ತು ಯುವ ಲೆಫ್ಟಿನೆಂಟ್ ಎಂ.ಜಾವಿದ್ ಮುಖ್ತಾರ್ ಅವರ ಚಲನವಲನಗಳನ್ನು ಸೆರೆಹಿಡಿದಿದೆ. “ಅಮೆರಿಕದ ಮಿಲಿಟರಿ ಬೇಸ್‌ ಆಗಿದ್ದ ಸ್ಥಳದಲ್ಲಿ ಹೆಚ್ಚಿನ ಭಾಗವನ್ನು ಚಿತ್ರೀಕರಿಸಿದ್ದೇವೆʼʼ ಎಂದು ನಾಶಾತ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಫಘಾನಿಸ್ತಾನದ ಹೊಸ ಆಡಳಿತದ ಬಗ್ಗೆಯೂ ಅವರು ಅವಲೋಕನ ಮಾಡುತ್ತಾರೆ. ವಾಯುಪಡೆಯ ಹೊಸ ಮುಖ್ಯಸ್ಥ ಮನ್ಸೂರ್ ಅವರನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 18 ಅಮಾಯಕರು ಬಲಿಯಾಗಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Lakshmika Sajeevan : 24 ವರ್ಷದ ಮಲಯಾಳಂ ನಟಿ ಹೃದಯಾಘಾತದಿಂದ ನಿಧನ

Exit mobile version