ಬೀಜಿಂಗ್: ಚೀನಾದಲ್ಲಿ ಕೊರೊನಾ ಸೋಂಕು (Covid 19 In China) ಉತ್ತುಂಗಕ್ಕೇರಿದೆ. ನಿತ್ಯ ಕೋಟ್ಯಂತರ ಜನರಿಗೆ ಸೋಂಕು ಹರಡುತ್ತಿದೆ. ಲಕ್ಷಾಂತರ ಜನ ಬೀದಿ ಹೆಣವಾಗುತ್ತಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಸೋಂಕಿನ ಕುರಿತು ದಿನನಿತ್ಯ ಮಾಹಿತಿ ನೀಡದಿರಲು ಚೀನಾ ತೀರ್ಮಾನಿಸಿದೆ. ಹಾಗಾಗಿ, ಚೀನಾದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ, ಚೀನಾದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿರುವ ಕನ್ನಡಿಗ ಸಾಹಿಲ್ ಅವರು ಕಮ್ಯುನಿಸ್ಟ್ ರಾಷ್ಟ್ರದಲ್ಲಿರುವ ಸೋಂಕಿನ ತೀವ್ರತೆ ಕುರಿತು ‘ವಿಸ್ತಾರ ನ್ಯೂಸ್’ಗೆ ನಿಖರ ಮಾಹಿತಿ ನೀಡಿದ್ದಾರೆ.
ತುಮಕೂರಿನ ಸಾಹಿಲ್ ಅವರು ದಕ್ಷಿಣ ಚೀನಾದ ನಾಂಚಾಂಗ್ ನಗರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅವರು ವಿಸ್ತಾರ ನ್ಯೂಸ್ ಜತೆ ಮಾತನಾಡಿದ್ದು, “ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು. ಇದರಿಂದ ಜನರ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿರುವುದು ಹಾಗೂ ಅಧಿಕ ಸಂಖ್ಯೆಯ ಜನ ಮೃತಪಡುತ್ತಿರುವುದು” ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಹೆಚ್ಚಾಗಲು ಕಾರಣವೇನು?
“ಚೀನಾದಲ್ಲಿ ಇದಕ್ಕೂ ಮೊದಲು ಜೀರೋ ಕೋವಿಡ್ ಪಾಲಿಸಿ ಇತ್ತು. ಯಾವುದೇ ಒಂದು ಕಟ್ಟಡದಲ್ಲಿ, ಒಬ್ಬರಿಗೆ ಸೋಂಕು ತಗುಲಿದರೂ ಇಡೀ ಕಟ್ಟಡ ಸೀಲ್‌ಡೌನ್ ಮಾಡುತ್ತಿದ್ದರು. ಇದರಿಂದಾಗಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ, ಕ್ಸಿನ್‌ಜಾಂಗ್ ನಗರದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, 16 ಜನ ಮೃತಪಟ್ಟರು. ಇದಾದ ಬಳಿ, ದೇಶದ ಹಲವೆಡೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದವು. ಜೀರೋ ಕೋವಿಡ್ ನೀತಿ ರದ್ದುಗೊಳಿಸಬೇಕು ಎಂಬ ಆಕ್ರೋಶ ವ್ಯಕ್ತವಾಯಿತು. ಇದರಿಂದಾಗಿ ಸರ್ಕಾರ ನೀತಿಯನ್ನು ರದ್ದುಗೊಳಿಸಿತು. ಹಾಗಾಗಿ, ಕೊರೊನಾ ಹಾವಳಿ ಜಾಸ್ತಿಯಾಗಿದೆ” ಎಂದು ಸಾಹಿಲ್ ತಿಳಿಸಿದ್ದಾರೆ.
“ಜೀರೋ ಕೋವಿಡ್ ನೀತಿಯು ರದ್ದಾದ ಕಾರಣ ಈಗ ಕ್ವಾರಂಟೈನ್, ಲಾಕ್‌ಡೌನ್ ಸೇರಿ ಎಲ್ಲ ನಿಯಮಗಳನ್ನು ರದ್ದುಗೊಳಿಸಲಾಗಿದೆ. ಈಗ ಕೊರೊನಾ ದೃಢಪಟ್ಟರೂ ಯಾರು ಕೂಡ ಅವರನ್ನು ಕ್ವಾರಂಟೈನ್‌ನಲ್ಲಿರಿಸುವುದಿಲ್ಲ. ಹಾಗಾಗಿ, ಮನೆಯಿಂದ ಹೊರಗೆ ಕಾಲಿಟ್ಟರೂ ಸೋಂಕು ತಗುಲುತ್ತಿದೆ. ಇದು ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ” ಎಂದು ವಿವರಿಸಿದ್ದಾರೆ.
ಹಿರಿಯ ನಾಗರಿಕರ ಸಾವು ಅಧಿಕ
“ಚೀನಾದಲ್ಲಿ ಕೊರೊನಾ ನಿರ್ವಹಣೆ, ವೈದ್ಯಕೀಯ ಮೂಲ ಸೌಕರ್ಯ ಉತ್ತಮವಾಗಿದ್ದರೂ, ಸೋಂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹಿರಿಯ ನಾಗರಿಕರು ಮೃತಪಡುತ್ತಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರೂ ಕೊರೊನಾ ನಿರೋಧಕ ಲಸಿಕೆಯ ಮೂರು ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ, 60 ವರ್ಷ ದಾಟಿದ ಹಿರಿಯ ನಾಗಿರಕರು ಮೂರನೇ ಡೋಸ್ ಪಡೆದಿಲ್ಲ. ಹಾಗಾಗಿಯೇ, ಹೆಚ್ಚಿನ ಪ್ರಮಾಣದಲ್ಲಿ ವೃದ್ಧರು ಸೋಂಕಿಗೆ ಬಲಿಯಾಗುತ್ತಿದ್ದಾರೆ” ಎಂದು ಸಾಹಿಲ್ ಹೇಳಿದ್ದಾರೆ.
ಸೋಂಕು ನಿಗ್ರಹದ ಕುರಿತು ಹಲವು ಸಲಹೆ ನೀಡಿದ ಸಾಹಿಲ್, “ಕರ್ನಾಟಕದಲ್ಲಿ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಸೇರಿ ಎಲ್ಲ ಒಳಾಂಗಣ ಪ್ರದೇಶದಲ್ಲಿ ಜನ ಮಾಸ್ಕ್ ಧರಿಸಬೇಕು ಎಂಬ ನಿಯಮ ಜಾರಿಗೆ ತಂದಿರುವುದು ಉತ್ತಮವಾಗಿದೆ. ಹಾಗೆಯೇ, ವಿಮಾನ ನಿಲ್ದಾಣಗಳಿಗೆ ಬರುವ ವಿದೇಶಿ ಪ್ರಯಾಣಿಕರನ್ನು ಆರ್‌ಟಿ-ಪಿಸಿಆರ್ ತಪಾಸಣೆಗೆ ಒಳಪಡಿಸಬೇಕು” ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಬರಲಿದೆ ಮತ್ತೊಂದು ಅಲೆ
“ಚೀನಾದಲ್ಲಿ ಫೆಬ್ರವರಿಯಲ್ಲಿ ಮತ್ತೊಂದು ಅಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಜನವರಿ ಮಧ್ಯಭಾಗದಲ್ಲಿ ಸೋಂಕು ಉತ್ತುಂಗಕ್ಕೆ ಹೋಗಿ, ಕೊನೆಯ ಭಾಗದಲ್ಲಿ ಇಳಿಕೆಯಾಗಲಿದೆ. ಆದರೆ, ಫೆಬ್ರವರಿ ಮೊದಲ ವಾರದಲ್ಲಿ ಮತ್ತೊಂದು ಅಲೆ ಬಾಧಿಸಲಿದೆ. ಸೋಂಕಿನಿಂದಾಗಿ ಚೀನಾದಲ್ಲಿ ಸಣ್ಣ ಪ್ರಮಾಣದ ಆರ್ಥಿಕ ಬಿಕ್ಕಟ್ಟೂ ಉಂಟಾಗಿದೆ” ಎಂದು ಸಾಹಿಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | China Covid Information | ಕೊರೊನಾ ಸೋಂಕಿತರ ಮಾಹಿತಿ ವಿಚಾರದಲ್ಲಿ ಚೀನಾ ಕಳ್ಳಾಟ, ವರದಿ ನೀಡದಿರಲು ತೀರ್ಮಾನ