ಶ್ರೀಲಂಕಾ: ಲಂಡನ್‌ನಿಂದ ಕೊಲಂಬೋಕ್ಕೆ ಮರಳುತ್ತಿದ್ದ ಶ್ರೀಲಂಕನ್ ಏರ್‌ಲೈನ್ಸ್‌ನ ವಿಮಾನವೊಂದು ವಾಯುಮಾರ್ಗದಲ್ಲಿ ನಡೆಯಬಹುದಾಗಿದ್ದ ಬಹುದೊಡ್ಡಮಟ್ಟದ ಅಪಘಾತದಿಂದ (Planes Crashing) ಪಾರಾಗಿದೆ ಮತ್ತು ಇನ್ನೊಂದು ವಿಮಾನವನ್ನು ಅಪಾಯದಿಂದ ಪಾರು ಮಾಡಿದೆ. ಎರಡು ವಿಮಾನಗಳು ಡಿಕ್ಕಿಯಾಗಿ ಸಂಭವಿಸಬಹುದಾಗಿದ್ದ ಸಾವು-ನೋವನ್ನು ತಪ್ಪಿಸಿದ್ದಕ್ಕಾಗಿ ಅದರ ಪೈಲಟ್‌ಗಳನ್ನು ಶ್ರೀಲಂಕನ್ ಏರ್‌ಲೈನ್ಸ್ ಶ್ಲಾಘಿಸಿದೆ. ಜೂ.13ರಂದು ಘಟನೆ ನಡೆದಿದ್ದು, 275 ಪ್ರಯಾಣಿಕರು ಇದ್ದ ಶ್ರೀಲಂಕಾದ UL 504 ವಿಮಾನ ಟರ್ಕಿಶ್ ಏರ್‌ಸ್ಪೇಸ್ ಪ್ರವೇಶ ಮಾಡುತ್ತಿದ್ದಂತೆ ಅಪಾಯದ ಮುನ್ಸೂಚನೆಯೊಂದು ಪೈಲಟ್‌ಗಳಿಗೆ ಸಿಕ್ಕಿತ್ತು. ಆದರೆ ತಮ್ಮ ಜಾಗರೂಕತೆ ಮತ್ತು ಸ್ಪಷ್ಟ ಸಂವಹನ ಕೌಶಲದಿಂದ, ಪರಿಸ್ಥಿತಿಯ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ನಿಗಾ ವಹಿಸಿ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತಗೊಳಿಸಿದ್ದಾರೆ.
ಲಂಡನ್‌ನ ಹೀಥ್ರು ಏರ್‌ಪೋರ್ಟ್‌ನಿಂದ ಟರ್ಕಿ ಮಾರ್ಗದ ಮೂಲಕ ಕೊಲಂಬೊಕ್ಕೆ ಹೊರಟಿದ್ದ UL 504 ವಿಮಾನ ಸುಮಾರು 33 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಇನ್ನೇನು 35 ಸಾವಿರ ಅಡಿ ಎತ್ತರಕ್ಕೆ ಏರಬೇಕು ಎನ್ನುವಷ್ಟರಲ್ಲಿ, ಇದೇ ಟರ್ಕಿ ವಾಯುಪ್ರದೇಶದಲ್ಲಿ ತಮ್ಮ ವಿಮಾನ ಇದ್ದಲ್ಲಿಂದ ಕೇವಲ 15 ಮೈಲುಗಳಷ್ಟು ದೂರದಲ್ಲಿ ಮತ್ತು ಅದೇ 35 ಸಾವಿರ ಅಡಿ ಎತ್ತರದಲ್ಲಿ, ಬ್ರಿಟಿಷ್ ಏರ್‌ವೇಸ್‌ಗೆ ಸೇರಿದ ವಿಮಾನವೊಂದು ಅತ್ಯಂತ ವೇಗವಾಗಿ ಪ್ರಯಾಣಿಸುತ್ತಿರುವುದನ್ನು ಈ ಪೈಲಟ್‌ಗಳು ಪತ್ತೆಹಚ್ಚಿದರು. ತಕ್ಷಣ ಅಂಕಾರಾದ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದರು. ಅಷ್ಟರಲ್ಲಾಗಲೇ ಅಂಕಾರಾ ಏರ್ ಟ್ರಾಫಿಕ್, ಶ್ರೀಲಂಕಾ ವಿಮಾನದ ಪೈಲಟ್‌ಗಳಿಗೆ ʼವಾಯುಮಾರ್ಗ ಕ್ಲಿಯರ್ ಇದೆ. ನೀವು ಇನ್ನಷ್ಟು ಎತ್ತರಕ್ಕೆ ಏರಬಹುದುʼ ಎಂದು ಎರಡು ಬಾರಿ ಸೂಚನೆ ಕೊಟ್ಟಿತ್ತು. ಹಾಗಿದ್ದಾಗ್ಯೂ ಕ್ಯಾಪ್ಟನ್, ಈ ವಿಮಾನವನ್ನು ಎತ್ತರಕ್ಕೆ ಕೊಂಡೊಯ್ಯಲಿಲ್ಲ. ಮತ್ತೊಮ್ಮೆ ಪರಿಶೀಲಿಸುವಂತೆ ಅಂಕಾರಾ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳಿಗೆ ಹೇಳಿದ್ದಾರೆ. ಪುನಃ ಪರಿಶೀಲಿಸಿದಾಗ, ಬ್ರಿಟಿಷ್ ಏರ್‌ವೇಸ್ ಅದಾಗಲೇ 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿರುವುದು ಗೊತ್ತಾಯಿತು. ಆಗ ಶ್ರೀಲಂಕನ್ ಏರ್‌ಲೈನ್ಸ್ ವಿಮಾನ ಇನ್ನೆರಡು ಸಾವಿರ ಅಡಿ ಎತ್ತರಕ್ಕೆ ಏರುವುದನ್ನು ತಡೆಯಲಾಯಿತು.
ಒಂದೊಮ್ಮೆ ಅಂಕಾರಾ ಏರ್ ಟ್ರಾಫಿಕ್ ಸೂಚನೆಯಂತೆ UL 504 ವಿಮಾನದ ಕ್ಯಾಪ್ಟನ್, ಫ್ಲೈಟ್‌ನ್ನು 33 ಸಾವಿರ ಅಡಿ ಎತ್ತರದಿಂದ 35 ಸಾವಿರ ಅಡಿ ಎತ್ತರಕ್ಕೆ ಕೊಂಡೊಯ್ದಿದ್ದರೆ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಇದು ಡಿಕ್ಕಿಯಾಗುತ್ತಿತ್ತು. ಮತ್ತು ಆ ವಿಮಾನದಲ್ಲಿದ್ದ ಸುಮಾರು 250 ಪ್ರಯಾಣಿಕರು ಸೇರಿ 500ಕ್ಕೂ ಹೆಚ್ಚು ಮಂದಿಯ ಜೀವ ಹೋಗುತ್ತಿತ್ತು ಎಂದು ಡೇಲಿಮೇಲ್ ವರದಿ ಮಾಡಿದೆ. ಕೊಲಂಬೋದ ಬಂಡಾರ ನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಲ್ 504 ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಈ ವಿಚಾರ ಗೊತ್ತಾಯಿತು. ಪೈಲಟ್‌ನ ಸಮಯಪ್ರಜ್ಞೆಗೆ ಭರ್ಜರಿ ಶ್ಲಾಘನೆ ವ್ಯಕ್ತವಾಯಿತು.
ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನಿಂದ ಹೊರಟ ಕೆಲವೇ ಹೊತ್ತಲ್ಲಿ ವಾಪಸ್ ಬಂದು ಲ್ಯಾಂಡ್ ಆದ 2 ವಿಮಾನಗಳು