Site icon Vistara News

Ismail Haniyeh: ಒಸಾಮಾ ರೀತಿಯೇ ಹಮಾಸ್‌ನ ಇಸ್ಮಾಯಿಲ್‌ ಹನಿಯೇಹ್‌ನನ್ನು ಕೊಂದ ಇಸ್ರೇಲ್;‌ ಆಪರೇಷನ್‌ನ ಡಿಟೇಲ್ಸ್‌ ಇಲ್ಲಿದೆ

Ismail Haniyeh Killing

Ismail Haniyeh

ಜೆರುಸಲೇಂ: ಅಲ್‌ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥ, ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ದಾಳಿಯ ರೂವಾರಿ ಒಸಾಮಾ ಬಿನ್‌ಲಾಡೆನ್‌ನನ್ನು 2011ರಲ್ಲಿ ಅಮೆರಿಕ ಹತ್ಯೆ ಮಾಡಿದಂತೆಯೇ ಹಮಾಸ್‌ ಉಗ್ರ ಸಂಘಟನೆಯ (Hamas Leader) ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ನನ್ನು ಇಸ್ರೇಲ್‌ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಅಮೆರಿಕದ ಸೈನಿಕರು ನುಗ್ಗಿ ಒಸಾಮಾ ಬಿನ್‌ಲಾಡೆನ್‌ನನ್ನು ಹತ್ಯೆಗೈದರೆ, ವಾಯು ದಾಳಿ ಮೂಲಕ ಇಸ್ಮಾಯಿಲ್‌ ಹನಿಯೆಹ್‌ನನ್ನು (Ismail Haniyeh) ಇಸ್ರೇಲ್‌ (Israel Air Strike) ಸೇನೆಯು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಹೌದು, ದೇಶಕ್ಕೆ ಅಪಾಯಕಾರಿಯಾಗುವ ವೈರಿಗಳನ್ನು ಯಾವುದೇ ದೇಶದಲ್ಲಿದ್ದರೂ ಹುಡುಕಿ ಹುಡುಕಿ ಕೊಲ್ಲುವ ಇಸ್ರೇಲ್‌ ಸೇನೆಯೇ ಇಸ್ಮಾಯಿಲ್‌ ಹನಿಯೆಹ್‌ನನ್ನು ಕೊಂದಿದೆ. ಇರಾನ್‌ನ ಟೆಹ್ರಾನ್‌ನಲ್ಲಿರುವ ಇಸ್ಮಾಯಿಲ್‌ ಹನಿಯೆಹ್‌ ನಿವಾಸದ ಮೇಲೆಯೇ ವಾಯುದಾಳಿ ನಡೆಸಿದ ಇಸ್ರೇಲ್‌ ಸೈನಿಕರು, ಕ್ಷಿಪಣಿ ದಾಳಿ ಮೂಲಕ ಹಮಾಸ್‌ ಉಗ್ರ ಸಂಘಟನೆಯ ಮುಖಂಡನನ್ನು ಹತ್ಯೆ ಮಾಡಿದೆ. 2011ರಲ್ಲಿ ಅಮೆರಿಕವೂ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿ ಅಡಗಿರುವ ಕುರಿತು ಮಾಹಿತಿ ಸಂಗ್ರಹಿಸಿ, ಆತನಿದ್ದ ಜಾಗದ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಇರಾನ್‌ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್‌ ಪೆಜೆಸ್ಕಿಯಾನ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್‌ ಹನಿಯೆಹ್‌ ಕೂಡ ಭಾಗವಹಿಸಿದ್ದ. ಇದಾದ ನಂತರ ಆತನು ತನ್ನ ನಿವಾಸದತ್ತ ತೆರಳಿದ. ಇಸ್ಮಾಯಿಲ್‌ ಹನಿಯೆಹ್‌ ಇರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್‌ ವಾಯುಪಡೆಯ ಸಿಬ್ಬಂದಿಯು ವಾಯುದಾಳಿಯ ಮೂಲಕ ಇಸ್ಮಾಯಿಲ್‌ ಹನಿಯೆಹ್‌ ಸೇರಿ ಆತನ ಅಂಗರಕ್ಷಕನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗುಪ್ತಚರ ಇಲಾಖೆ ನಿಖರ ಮಾಹಿತಿ, ಅತ್ಯಾಧುನಿಕ ಕ್ಷಿಪಣಿ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಬಳಸಿ ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ.

ಇಸ್ಮಾಯಿಲ್ ಹನಿಯೆಹ್ ಹಿನ್ನೆಲೆ ಏನು?

ಮಧ್ಯಪ್ರಾಚ್ಯ ರಾಜಕೀಯ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಇಸ್ಮಾಯಿಲ್ ಹನಿಯೆಹ್ ಗಾಜಾದ ಶತಿ ನಿರಾಶ್ರಿತರ ಶಿಬಿರದಲ್ಲಿ 1963ರಲ್ಲಿ ಜನಿಸಿದ್ದ. ವಿಶ್ವಸಂಸ್ಥೆಯ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಈತ 1987ರಲ್ಲಿ ಅರೇಬಿಕ್ ಸಾಹಿತ್ಯದಲ್ಲಿ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದಿದ್ದ. ವಿಶ್ವವಿದ್ಯಾನಿಲಯದಲ್ಲಿದ್ದಾಗ ಹಮಾಸ್‌ ಉಗ್ರಗಾಮಿ ಸಂಘಟನೆ ಜತೆ ಸೇರಿಕೊಂಡಿದ್ದ.

ಮೊದಲ ಬಾರಿಗೆ ಇಸ್ಮಾಯಿಲ್ ಹನಿಯೆಹ್ ಇಂತಿಫಾಡಾದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ. ಇದಕ್ಕಾಗಿ ಇಸ್ರೇಲಿ ಮಿಲಿಟರಿ ನ್ಯಾಯಾಲಯದಿಂದ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಹನಿಯೆಹ್‌ನನ್ನು ಹಿರಿಯ ಹಮಾಸ್ ನಾಯಕರಾದ ಅಬ್ದೆಲ್-ಅಜೀಜ್ ಅಲ್-ರಾಂಟಿಸ್ಸಿ, ಮಹಮೂದ್ ಜಹರ್, ಅಜೀಜ್ ದುವೈಕ್ ಮತ್ತು ಇತರ 400 ಕಾರ್ಯಕರ್ತರೊಂದಿಗೆ ಲೆಬನಾನ್‌ಗೆ ಗಡಿಪಾರು ಮಾಡಿದರು.

1997ರಲ್ಲಿ ಇಸ್ರೇಲ್ ಹಮಾಸ್ ಸಂಸ್ಥಾಪಕ ಅಹ್ಮದ್ ಯಾಸಿನ್ ಅವರನ್ನು ಬಿಡುಗಡೆ ಮಾಡಿದ ಅನಂತರ ಈತನನ್ನು ಹಮಾಸ್ ಕಚೇರಿಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. 2005ರ ಡಿಸೆಂಬರ್‌ನಲ್ಲಿ ಹನಿಯೆಹ್ ಹಮಾಸ್ ಮುಖ್ಯಸ್ಥನಾಗಿ ಆಯ್ಕೆಯಾದ. 2006ರ ಶಾಸಕಾಂಗ ಚುನಾವಣೆಯಲ್ಲಿ ಹಮಾಸ್‌ನ ಗೆಲುವಿನ ಅನಂತರ ಹನಿಯೆಹ್ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಸರ್ಕಾರದ ಪ್ರಧಾನ ಮಂತ್ರಿಯಾದ.

ಫತಾಹ್- ಹಮಾಸ್ ಘರ್ಷಣೆಯ ನಡುವೆಯೇ 2006ರಲ್ಲಿ ಪ್ರಧಾನಿಯಾಗಿದ್ದ ಹನಿಯೆಹ್ ವಿದೇಶದಲ್ಲಿ ತನ್ನ ಮೊದಲ ಅಧಿಕೃತ ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ರಫಾ ಬಾರ್ಡರ್ ಕ್ರಾಸಿಂಗ್‌ನಲ್ಲಿ ಈಜಿಪ್ಟ್‌ನಿಂದ ಗಾಜಾಕ್ಕೆ ಪ್ರವೇಶವನ್ನು ನಿರಾಕರಿಸಲ್ಪಟ್ಟ. ಅನಂತರ ಈತ ಗಡಿ ದಾಟಲು ಪ್ರಯತ್ನಿಸಿದಾಗ, ಗುಂಡಿನ ಚಕಮಕಿ ನಡೆದು ಒಬ್ಬ ಅಂಗರಕ್ಷಕ ಮೃತಪಟ್ಟು, ಹನಿಯೆಹ್ ಹಿರಿಯ ಮಗ ಗಾಯಗೊಂಡಿದ್ದ.

2007ರಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅಧಿಕಾರಕ್ಕೆ ಬಂದಾಗ ಹನಿಯೆಹ್‌ನನ್ನು ಹುದ್ದೆಯಿಂದ ವಜಾಗೊಳಿಸಿದರು. ಇದು ಫತಾಹ್ ಮತ್ತು ಹಮಾಸ್ ಬಣಗಳ ನಡುವಿನ ರಾಜಕೀಯ ಸಂಘರ್ಷವನ್ನು ಹೆಚ್ಚಿಸಿತ್ತು. 2016ರ ಚುನಾವಣೆಯಲ್ಲಿ ಈತ ಹಮಾಸ್‌ನ ಮುಖ್ಯ ನಾಯಕ ಖಲೀದ್ ಮಶಾಲ್‌ನ ಉತ್ತರಾಧಿಕಾರಿಯಾಗಿದ್ದ. ಈತ ಇಸ್ರೇಲ್‌ ಭಾರೀ ತಲೆ ನೋವಾಗಿದ್ದ. ಹಾಗಾಗಿ ಇಸ್ರೇಲ್‌ ತಂತ್ರಜ್ಞಾನಗಳನ್ನೆಲ್ಲ ಬಳಸಿ ಪ್ಲ್ಯಾನ್‌ ಮಾಡಿ ಈತನ ಕತೆ ಮುಗಿಸಿದೆ.

ಇದನ್ನೂ ಓದಿ: Ismail Haniyeh: ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹಿನ್ನೆಲೆ ಏನು? ಈತನನ್ನು ಇಸ್ರೇಲ್‌ ಮುಗಿಸಿದ್ದೇಕೆ?

Exit mobile version