ವಾಷಿಂಗ್ಟನ್: 2024ರಲ್ಲಿ ನಡೆಯಲಿರುವ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ (Donald Trump) ಈಗಾಗಲೇ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿರುವ ಅವರು ಹಲವೆಡೆ ಪ್ರಚಾರ, ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ. ಸೋಮವಾರ ಅಯೋವಾದ ಡೇವನ್ಪೋರ್ಟ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಡೊನಾಲ್ಡ್ ಟ್ರಂಪ್ ‘ಮೂರನೇ ಮಹಾಯುದ್ಧವನ್ನು ತಡೆಯಬಲ್ಲ ಶಕ್ತಿ ಇರುವುದು ನನಗೆ ಮಾತ್ರ’ ಎಂದು ಹೇಳಿದರು.
ಚುನಾವಣಾ ಪ್ರಚಾರದ ವೇಳೆ, ಈಗಿನ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ವಾಕ್ ಪ್ರಹಾರ ನಡೆಸಿದ ಡೊನಾಲ್ಡ್ ಟ್ರಂಪ್ ‘ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆಯುವುದು ಗ್ಯಾರೆಂಟಿ. ಆದರೆ ಅದನ್ನು ತಪ್ಪಿಸುವ ಸಾಮರ್ಥ್ಯ ಇರುವುದು ನನಗೆ ಮಾತ್ರ. ನಾನು ಅಮೆರಿಕವನ್ನು ಎಲ್ಲ ರೀತಿಯಿಂದಲೂ ರಕ್ಷಿಸಬಲ್ಲೆ’ ಎಂದು ಹೇಳಿದರು. ಡೊನಾಲ್ಡ್ ಟ್ರಂಪ್ ಹೀಗೆ ಹೇಳುತ್ತಿದ್ದಂತೆ ನೆರೆದಿದ್ದ ಜನರು ದೊಡ್ಡದಾಗಿ, ಉತ್ಸಾಹದಿಂದ ಘೋಷಣೆ ಕೂಗಿದರು.
‘ಜೋ ಬೈಡೆನ್ ಆಡಳಿತ ಸಮರ್ಪಕವಾಗಿಲ್ಲ. ಇವರಿಂದಾಗಿ ರಷ್ಯಾ ದೇಶ ಚೀನಾದ ತೆಕ್ಕೆಗೆ ಜಾರುತ್ತಿದೆ. ಈ ಸರ್ಕಾರ ಅಮೆರಿಕವನ್ನು ಪರಮಾಣು ಯುದ್ಧದತ್ತ ಕೊಂಡೊಯ್ಯುತ್ತಿದೆ. ಇದು ಮೂರನೇ ಮಹಾಯುದ್ಧವಾಗಿ ಜಗತ್ತೇ ನಾಶವಾಗಬಹುದು. ಆಡಳಿತದಲ್ಲಿ ಇರುವವರು ಸರಿಯಾಗಿ ವರ್ತಿಸುತ್ತಿಲ್ಲ. ಒಳ್ಳೆಯರ ರೀತಿಯಿಂದ ಮಾತನಾಡಬೇಕಾದಲ್ಲಿ, ಕಠಿಣವಾದ ನಿಲುವು ತಳೆಯುತ್ತಿದ್ದಾರೆ. ಕಠಿಣತೆ ಪ್ರದರ್ಶಿಸಬೇಕಾದಲ್ಲಿ ತುಂಬ ವಿಧೇಯತೆ, ಒಳ್ಳೆಯತನ ತೋರಿಸುತ್ತಿದ್ದಾರೆ. ಅವರೇನು ಮಾಡುತ್ತಿದ್ದಾರೆ ಎಂಬುದು ನಿಜಕ್ಕೂ ಗೊತ್ತಾಗುತ್ತಿಲ್ಲ. ಖಂಡಿತ ಇದು ನಮ್ಮನ್ನು ವಿಶ್ವ ಯುದ್ಧದ ಅಂಚಿಗೇ ಕೊಂಡೊಯ್ಯುತ್ತದೆ. ಆದರೆ ನಾನು ಅದನ್ನು ತಡೆಯಬಲ್ಲೆ’ ಎಂದು ಟ್ರಂಪ್ ಹೇಳಿದ್ದಾರೆ. ಅಷ್ಟಲ್ಲದೆ, ರಷ್ಯಾ-ಉಕ್ರೇನ್ ಯುದ್ಧಕ್ಕೂ ಅಂತ್ಯ ಹಾಡಬಲ್ಲೆ ಎಂದಿದ್ದಾರೆ.
ಇದನ್ನೂ ಓದಿ: Joe Biden Visits Kyiv: ಸಮರಪೀಡಿತ ಉಕ್ರೇನ್‌ಗೆ ಜೋ ಬೈಡೆನ್ ಅಚ್ಚರಿಯ ಭೇಟಿ, ಹೆಚ್ಚಿನ ಶಸ್ತ್ರಾಸ್ತ್ರ ನೆರವಿನ ಭರವಸೆ
ಡೊನಾಲ್ಡ್ ಟ್ರಂಪ್ ಅವರು 2017ರಿಂದ 2021ರವರೆಗೆ, ಅಮೆರಿಕದ 45ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2021ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆದ್ದು, ಜೋ ಬೈಡೆನ್ ಅಧ್ಯಕ್ಷರಾದರು. ಅಧಿಕಾರ ಬಿಟ್ಟುಕೊಡುವ ಸಂದರ್ಭದಲ್ಲೂ ಕೂಡ ಡೊನಾಲ್ಡ್ ಟ್ರಂಪ್ ರಗಳೆ ಮಾಡಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸವಾಗಿದೆ ಎಂದು ಆರೋಪಿಸಿದ್ದರು. ಸದ್ಯ 2024ರ ಚುನಾವಣೆಗೆ ಕಾಯುತ್ತಿದ್ದಾರೆ.