ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ಪಿಟಿಐ ರ‍್ಯಾಲಿ ನಡೆಸುವ ವೇಳೆ ಗುರುವಾರ ಗುಂಡೇಟು ತಿಂದು ಪವಾಡಸದೃಶ ಬದುಕುಳಿದುರವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ದಾಳಿ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ್ದಾರೆ. “ನನ್ನ ಮೇಲೆ ದಾಳಿ ನಡೆಸಲಾಗುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು” ಎಂದು ಪ್ರತಿಕ್ರಿಯಿಸಿದ್ದಾರೆ.
“ರ‍್ಯಾಲಿಗೂ ಮುನ್ನವೇ ನನ್ನ ಮೇಲೆ ದಾಳಿ ನಡೆಸುವ ಕುರಿತು ಸುಳಿವು ಇತ್ತು. ನನ್ನನ್ನು ಕೊಲ್ಲಲು ನಾಲ್ಕು ಗುಂಡುಗಳನ್ನು ಹಾರಿಸಲಾಯಿತು. ಅಷ್ಟಕ್ಕೂ ನಾನು ಜನರ ಮಧ್ಯೆಯೇ ಇದ್ದೇನೆ. ಕಳೆದ 22 ವರ್ಷಗಳಿಂದಲೂ ಹೋರಾಟದ ಜೀವನವನ್ನೇ ನಡೆಸುತ್ತಿದ್ದೇನೆ. ಇಂತಹ ಯಾವುದೇ ಬೆದರಿಕೆಗಳಿಗೆ ನಾನು ಹಿಂಜರಿಯುವುದಿಲ್ಲ. ಮುಂದೆಯೂ ಜನರ ಪರವಾಗಿ ಹೋರಾಡುತ್ತೇನೆ” ಎಂದು ತಿಳಿಸಿದರು.
ನನ್ನ ಬಳಿ ವಿಡಿಯೊ ಇದೆ
“ನನ್ನ ಮೇಲೆ ದಾಳಿ ನಡೆಸುವ ಕುರಿತು ನಾಲ್ವರು ರಹಸ್ಯವಾಗಿ ಸಂಚು ರೂಪಿಸಿದ್ದಾರೆ. ಅದರ ಕುರಿತು ನನ್ನ ಬಳಿ ವಿಡಿಯೊ ಇದೆ. ನನಗೇನಾದರೂ ಆದರೆ, ಆ ವಿಡಿಯೊವನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಕೂಡ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಇಮ್ರಾನ್ ಖಾನ್ ಅವರ ಬಳಿ ಇರುವ ವಿಡಿಯೊ ಯಾವುದು ಎಂಬ ಕುತೂಹಲ ಮೂಡಿದೆ.
ಕಾಪಾಡಿದವನಿಗೆ ಮಾಜಿ ಪತ್ನಿ ಧನ್ಯವಾದ
ಗುಂಡಿನ ದಾಳಿ ಮಾಡುತ್ತಿದ್ದವನ ಮೇಲೆ ಎರಗಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಾಣ ಉಳಿಸಿದ ವ್ಯಕ್ತಿಗೆ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್ ಧನ್ಯವಾದ ತಿಳಿಸಿದ್ದಾರೆ. “ಇಮ್ರಾನ್ ಖಾನ್ ಆರೋಗ್ಯ ಸ್ಥಿರವಾಗಿದೆ. ಅವರನ್ನು ರಕ್ಷಿಸಿದ ವ್ಯಕ್ತಿಗೆ ಧನ್ಯವಾದಗಳು” ಎಂದು ಗೋಲ್ಡ್‌ಸ್ಮಿತ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Imran Khan | ಗುಂಡಿನ ದಾಳಿಯಿಂದ ಇಮ್ರಾನ್ ಖಾನ್ ಜೀವ ಉಳಿಸಿದ್ದು ಯಾರು? ಆತನ ಸಾಹಸ ಹೇಗಿತ್ತು?