ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಮೂಲದ ಐಟಿ ದಿಗ್ಗಜ ಸಂಸ್ಥೆ ಇಂಟರ್‌ನ್ಯಾಷನಲ್ ಬಿಸಿನೆಸ್ ಮಷಿನ್ಸ್ (IBM) ಚೀನಾದ ಪ್ರಮುಖ ಸಂಶೋಧನಾ ವಿಭಾಗವನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ 1,000ಕ್ಕೂ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ (Layoffs). ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಐಬಿಎಂ ಚೀನಾದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಟೆಸ್ಟಿಂಗ್ ಶಾಖೆಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಆರ್ಥಿಕ ಕುಸಿತದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜತೆಗೆ ಚೀನಾ ಸ್ಥಳೀಯ ಕಂಪನಿಗಳ ಪರವಾಗಿದೆ ಎಂಬ ಆತಂಕದಿಂದಾಗಿ ವಿದೇಶಿ ಹೂಡಿಕೆ ಭಾಗಶಃ ನಿಧಾನಗೊಂಡಿರುವುದು ಕೂಡ ಕಚೇರಿ ಸ್ಥಳಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಸಾಧ್ಯತೆ ಇದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸೇವೆಗಳ ಕಂಪನಿಯಾದ ಐಬಿಎಂ ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉದ್ಯೋಗ ಕಡಿತ
ಐಬಿಎಂ ಕೆಲವು ತಿಂಗಳ ಹಿಂದೆಯೂ ಉದ್ಯೋಗ ಕಡಿತಗೊಳಿಸಿತ್ತು. ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತಗೊಂಡಿತ್ತು. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಇಲಾಖೆಯ ಉದ್ಯೋಗಿಗಳೊಂದಿಗೆ ನಡೆಸಿದ ಸಭೆಯಲ್ಲಿ ವಜಾಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.
2022ರಿಂದ ಈಚೆಗೆ ವಿವಿಧ ಟೆಕ್ ಕಂಪನಿಗಳ ಬಹಳಷ್ಟು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಈ ವರ್ಷ 204 ಟೆಕ್ ಕಂಪನಿಗಳು ಉದ್ಯೋಗ ಕಡಿತದ ನಿರ್ಧಾರ ಕೈಗೊಂಡಿವೆ. ಇದರಿಂದ 49,978 ಮಂದಿ ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Lays off: 200 ಉದ್ಯೋಗಿಗಳ ಹಬ್ಬದ ಖುಷಿ ಕಿತ್ತುಕೊಂಡ ಎಲ್&ಟಿ ಟೆಕ್ನಾಲಜಿ ಸರ್ವೀಸ್!