ಹೇಗ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಒಂದು ವರ್ಷ ತುಂಬಿದೆ. ಸಾವಿರಾರು ಜನರ ಸಾವು, ಲಕ್ಷಾಂತರ ಜನ ದೇಶದಿಂದ ಪಲಾಯನ, ಲಕ್ಷಾಂತರ ಜನರಿಗೆ ಗಾಯ, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ರಷ್ಯಾ ಪಡೆಗಳ ಕ್ಷಿಪಣಿ, ರಾಕೆಟ್ ದಾಳಿಗೆ ಉಕ್ರೇನ್‌ನ ಬಹುತೇಕ ಭಾಗ ಮಸಣದಂತಾಗಿದೆ. ಹೀಗಿದ್ದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಯುದ್ಧ ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.
“ಉಕ್ರೇನ್‌ನಲ್ಲಿ ನಡೆದಿರುವ ಯುದ್ಧಾಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಉಕ್ರೇನ್‌ನಿಂದ ಕಾನೂನುಬಾಹಿರವಾಗಿ ಮಕ್ಕಳು ಹಾಗೂ ಜನರನ್ನು ಗಡಿಪಾರು ಮಾಡಿದ ಕಾರಣಕ್ಕಾಗಿ ವ್ಲಾಡಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ” ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತಿಳಿಸಿದೆ.
ವ್ಲಾಡಿಮಿರ್ ಪುಟಿನ್ ಬಂಧನವಾಗುತ್ತಾ?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಂಧನಕ್ಕೆ ಐಸಿಸಿ ಅರೆಸ್ಟ್ ವಾರಂಟ್ ಹೊರಡಿಸಿದ್ದು, ಅವರನ್ನು ಶೀಘ್ರದಲ್ಲೇ ಬಂಧನವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಐಸಿಸಿಯು ಯಾರ ವಿರುದ್ಧವೇ ಅರೆಸ್ಟ್ ವಾರಂಟ್ ಹೊರಡಿಸಿದರೆ, ಅವರನ್ನು ಬಂಧಿಸಲಾಗುತ್ತದೆ. ಈಗ ಪುಟಿನ್ ವಿರುದ್ಧ ವಾರಂಟ್ ಹೊರಡಿಸಿರುವ ಕಾರಣ ಈ ಕುರಿತು ರಷ್ಯಾದ ಹಿರಿಯ ಅಧಿಕಾರಿಗಳು, ಸೈನಿಕರು ಹಾಗೂ ನಾಗರಿಕರಿಗೆ ಮಾಹಿತಿ ರವಾನಿಸಲಾಗುತ್ತದೆ. ಹಾಗೊಂದು ವೇಳೆ ಪುಟಿನ್ ಅವರು ಶರಣಾಗದಿದ್ದರೆ ಪುಟಿನ್ ಅಂತಾರಾಷ್ಟ್ರೀಯ ಪ್ರವಾಸಕ್ಕೆ ತೊಂದರೆಯಾಗಲಿದೆ ಎಂದು ತಿಳಿದುಬಂದಿದೆ.
2022ರ ಫೆಬ್ರವರಿಯಿಂದಲೂ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುತ್ತಿದೆ. ಜಾಗತಿಕ ನಿರ್ಬಂಧ, ವ್ಯಾಪಾರ ಒಪ್ಪಂದಗಳ ರದ್ದು ಸೇರಿ ಹಲವು ಕ್ರಮಗಳ ಹೊರತಾಗಿಯೂ ವ್ಲಾಡಿಮಿರ್ ಪುಟಿನ್ ಯುದ್ಧ ನಿಲ್ಲಿಸಿಲ್ಲ. ಹಾಗಾಗಿ, ಪ್ರಕರಣವು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ: PM Modi: ಉಕ್ರೇನ್ ವಿರುದ್ಧದ ಯುದ್ಧ ಕೊನೆಗಾಣಿಸುವಂತೆ ಪುಟಿನ್ ಮನವೊಲಿಸಲು ಪ್ರಧಾನಿ ಮೋದಿಗೆ ಸಾಧ್ಯ ಎಂದ ಅಮೆರಿಕ