Site icon Vistara News

ಇಸ್ರೇಲ್‌ ದಾಳಿಗೆ ಗಾಜಾ ತತ್ತರ: ಐಸ್‌ಕ್ರೀಮ್‌ ಸಾಗಿಸುತ್ತಿದ್ದ ಟ್ರಕ್‌ಗಳು ಈಗ ಶವಾಗಾರಗಳು!

Gaza Ice Cream Trucks

Ice cream trucks turned into morgues In War Torn Gaza; Video Goes Viral

ಜೆರುಸಲೇಂ: ಯುದ್ಧದ ರೀತಿ ಯಾವುದೇ ಆಗಿರಲಿ, ಯಾವುದೇ ಕಾರಣಕ್ಕೆ ಯುದ್ಧ ಸಂಭವಿಸಲಿ, ಅದರ ಸ್ವರೂಪ, ಪರಿಣಾಮ ಮಾತ್ರ ಮನುಕುಲದ ಮೇಲೆ ಒಂದೇ ಪರಿಣಾಮ ಬೀರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಂಘರ್ಷದ (Israel Palestine War) ಪರಿಣಾಮವನ್ನು ಮುಗ್ಧ ನಾಗರಿಕರು, ಮಕ್ಕಳು, ಸ್ತ್ರೀಯರು ಎದುರಿಸುತ್ತಿದ್ದಾರೆ. ಮನೆ ಕಳೆದುಕೊಂಡು, ಸಂಬಂಧಿಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲೂ, ಇಸ್ರೇಲ್‌ ದಾಳಿಗೆ ಗಾಜಾ ನಗರವು ಅಕ್ಷರಶಃ ಮಸಣದಂತಾಗಿದೆ. ಐಸ್‌ಕ್ರೀಮ್‌ ಸಾಗಿಸುತ್ತಿದ್ದ ಟ್ರಕ್‌ಗಳಲ್ಲಿ (Ice Cream Trucks) ಶವಗಳನ್ನು ಇರಿಸುವ ಮೂಲಕ ಅವುಗಳನ್ನು ಶವಾಗಾರಗಳನ್ನಾಗಿ ಬಳಸಲಾಗುತ್ತಿದೆ. ಅಷ್ಟರಮಟ್ಟಿಗೆ ಇಸ್ರೇಲ್‌ ದಾಳಿಗೆ ಗಾಜಾ ನಗರದಲ್ಲಿ (Gaza City) ಅಮಾಯಕರ ಹೆಣಗಳು ಉರುಳಿವೆ.

ಹಮಾಸ್‌ ಉಗ್ರರು ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ ಬಳಿಕ ಇಸ್ರೇಲ್‌ ಸೇನೆಯು ಗಾಜಾ ನಗರದ ಮೇಲೆ ಮುಗಿಬಿದ್ದಿದೆ. ಇದರಿಂದಾಗಿ ಗಾಜಾದಲ್ಲಿ ಇದುವರೆಗೆ 2,600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಗಳ ಶವಾಗಾರಗಳಲ್ಲಿ ಜನರ ಶವಗಳನ್ನು ಇರಿಸಲು ಕೂಡ ಜಾಗ ಇಲ್ಲದಂತಾಗಿದೆ. ಹಾಗಾಗಿ, ಗಾಜಾ ನಗರದಲ್ಲಿ ಐಸ್‌ಕ್ರೀಮ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನೇ ಶವಾಗಾರಗಳನ್ನಾಗಿ ಬಳಸಲಾಗುತ್ತಿದೆ. ಟ್ರಕ್‌ಗಳಲ್ಲಿ ಶವಗಳನ್ನು ಇರಿಸುವ ಮೂಲಕ ಅವುಗಳನ್ನೇ ಶವಾಗಾರಗಳ ರೀತಿ ಬಳಸಲಾಗುತ್ತಿದೆ. ಈ ಕುರಿತು ಪತ್ರಕರ್ತರೊಬ್ಬರು ಮಾಡಿದ ವರದಿಯ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೊ ಇಲ್ಲಿದೆ

ಗಾಜಾ ನಗರದ ವಶಕ್ಕೆ ಇಸ್ರೇಲ್‌ ಸಜ್ಜು?

ಹಮಾಸ್‌ ಉಗ್ರರ ನೆಲೆವೀಡಾಗಿರುವ ಗಾಜಾ ನಗರದ ಮೇಲೆ ಸಂಪೂರ್ಣವಾಗಿ ದಾಳಿ ನಡೆಸಲು ಇಸ್ರೇಲ್‌ ಸೇನೆ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಗಾಜಾ ನಗರ ಬಿಟ್ಟು ಹೊರಡಿ ಎಂದು ನಾಗರಿಕರಿಗೆ ಇಸ್ರೇಲ್‌ ನೀಡಿದ ಗಡುವು ಮುಗಿದಿದ್ದು, ಪೂರ್ಣ ಪ್ರಮಾಣದ ದಾಳಿ ನಡೆಸಲು ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಡಿಯಲ್ಲಿ ಸಜ್ಜಾಗಿವೆ. ಯಾವ ಕ್ಷಣದಲ್ಲಿ ಬೇಕಾದರೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೈನಿಕರು ದಾಳಿ ಆರಂಭಿಸಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: ಹಮಾಸ್ ಉಗ್ರರ ಪರ ಪೋಸ್ಟ್;‌ ಉತ್ತರ ಪ್ರದೇಶದಲ್ಲಿ ಮೌಲ್ವಿಯ ಬಂಧನ

ಆದಾಗ್ಯೂ, ಗಾಜಾ ನಗರದ ಮೇಲೆ ಇಸ್ರೇಲ್‌ ಪೂರ್ಣ ಪ್ರಮಾಣದ ದಾಳಿ ಮಾಡುವುದು ಹಾಗೂ ಅದನ್ನು ವಶಪಡಿಸಿಕೊಳ್ಳುವುದರ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆತಂಕ ವ್ಯಕ್ತಪಡಿಸಿದ್ದಾರೆ. “ಇಡೀ ನಗರದ ಮೇಲೆ ದಾಳಿ ನಡೆಸಿದರೆ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಸಾವಿಗೀಡಾಗುತ್ತಾರೆ. ಹಮಾಸ್‌ ಉಗ್ರರನ್ನು ಮಟ್ಟಹಾಕುವುದಕ್ಕೂ, ಜನರನ್ನು ಹತ್ಯೆ ಮಾಡುವುದಕ್ಕೂ ವ್ಯತ್ಯಾಸವಿದೆ” ಎಂದು ಜೋ ಬೈಡೆನ್‌ ಹೇಳಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ಮಾಡಿದ ಬಳಿಕ ಅಮೆರಿಕವು ಇಸ್ರೇಲ್‌ಗೆ ಬೆಂಬಲ ನೀಡಿದೆ. ಶಸ್ತ್ರಾಸ್ತ್ರಗಳನ್ನು ಕೂಡ ಅಮೆರಿಕವು ಇಸ್ರೇಲ್‌ಗೆ ಕಳುಹಿಸಿದೆ. ಆದರೂ, ಗಾಜಾ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದು ನಮ್ಮ ಗುರಿ ಅಲ್ಲ ಎಂದು ಇಸ್ರೇಲ್‌ ಸ್ಪಷ್ಟಪಡಿಸಿದೆ.

Exit mobile version