ಇಸ್ಲಾಮಾಬಾದ್: ಭಾರತದ ವಿದೇಶಾಂಗ ನೀತಿ ಕುರಿತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಭಾರತವು ಸ್ವತಂತ್ರ ವಿದೇಶಾಂಗ ನೀತಿ ಹೊಂದಿದೆ. ಇದರಿಂದಾಗಿಯೇ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಭಾರತಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಆದರೆ, ಪಾಕಿಸ್ತಾನದಲ್ಲಿ ಮಾತ್ರ ಇಂತಹ ನೀತಿಯ ಕೊರತೆ ಇದೆ” ಎಂದು ಹೇಳಿದ್ದಾರೆ.
ದೇಶದಲ್ಲಿ ಅವಧಿಪೂರ್ವ ಚುನಾವಣೆಗೆ ಆಗ್ರಹಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ದೀರ್ಘ ನಡಿಗೆ(Long March)ಗೆ ಚಾಲನೆ ನೀಡಿದ್ದಾರೆ. ಈ ದೀರ್ಘ ನಡಿಗೆಗೆ ಪಾಕಿಸ್ತಾನದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಜನರು ನಡಿಗೆಯನ್ನು ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ಸರ್ಕಾರದ ಮೇಲೆ ದೀರ್ಘ ನಡಿಗೆ ಮೂಲಕ ಇಮ್ರಾನ್ ಖಾನ್ ಮತ್ತಷ್ಟು ಒತ್ತಡ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದೇ ವೇಳೆ ಭಾರತದ ವಿದೇಶಾಂಗ ನೀತಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಭಾರತವು ವಿದೇಶಾಂಗ ನೀತಿಯ ಜಾರಿಯಲ್ಲಿ ಸ್ಪಷ್ಟ ನಿಲುವು ಹೊಂದಿದೆ. ಜಗತ್ತಿನ ಯಾರ ಒತ್ತಡಕ್ಕೂ ಸಿಲುಕದೆ ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟಿನ ಮಧ್ಯೆಯೂ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಆಮದು ಮಾಡಿಕೊಂಡಿದೆ. ತನ್ನ ರಾಷ್ಟ್ರದ ಜನರ ಹಿತಾಸಕ್ತಿಯ ಮುಂದೆ ಜಗತ್ತಿನ ಯಾರ ಒತ್ತಡವೂ ಲೆಕ್ಕಕ್ಕಿಲ್ಲ ಎಂಬುದನ್ನು ಭಾರತ ತೋರಿಸಿದೆ. ಆದರೆ, ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಮಾತ್ರ ರಷ್ಯಾದಿಂದ ತೈಲ ಸಿಕ್ಕಿಲ್ಲ. ಇದು ಪಾಕಿಸ್ತಾನ ವಿದೇಶಾಂಗ ನೀತಿಯ ದೌರ್ಬಲ್ಯಕ್ಕೆ ಹಿಡಿದ ಕನ್ನಡಿ” ಎಂದಿದ್ದಾರೆ. ಇದಕ್ಕೂ ಮೊದಲು ಕೂಡ ಇಮ್ರಾನ್ ಖಾನ್ ಅವರು ಭಾರತದ ವಿದೇಶಾಂಗ ನೀತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | Imran Khan | ಚುನಾವಣೆಗೆ ಆಗ್ರಹಿಸಿ ದೀರ್ಘ ನಡಿಗೆ ಆರಂಭಿಸಿದ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್