ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಏಪ್ರಿಲ್‌ನಲ್ಲಿ ಇಮ್ರಾನ್ ಖಾನ್ (Imran Khan) ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದು, ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್)ನ ಶೆಹಬಾಜ್ ಶರೀಫ್ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಆಗಿನಿಂದಲೂ ಇಮ್ರಾನ್ ಖಾನ್ ಚುನಾವಣೆಗೆ ಆಗ್ರಹಿಸುತ್ತಲೇ ಬಂದಿದ್ದಾರೆ. ಈಗಂತೂ ಕಳೆದ ಮೂರು ದಿನಗಳಿಂದ ಆಜಾದಿ ಮಾರ್ಚ್ ಹೆಸರಲ್ಲಿ, ಇಮ್ರಾನ್ ಖಾನ್ ನೇತೃತ್ವದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಮುಂಜಾನೆ ಪ್ರತಿಭಟನಾಕಾರರು ಇಸ್ಲಮಾಬಾದ್ ತಲುಪಿದ್ದಾರೆ. ಇಲ್ಲಿ ಭಾಷಣ ಮಾಡಿದ ಇಮ್ರಾನ್ ಖಾನ್, ಇನ್ನು ಆರು ದಿನಗಳಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ದಿನಾಂಕ ನಿಗದಿಪಡಿಸಬೇಕು. ಇಲ್ಲದೆ ಇದ್ದರೆ ನಾವು, ಇನ್ನೂ ಹೆಚ್ಚಿನ ಬೆಂಬಲಿಗರೊಂದಿಗೆ ಮತ್ತೆ ಇಸ್ಲಮಾಬಾದ್‌ಗೆ ಬರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಮ್ರಾನ್ ಖಾನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಿಟಿಐ (ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್) ಕಾರ್ಯಕರ್ತರು ಕಳೆದ ಎರಡು ದಿನಗಳಿಂದ ಪೊಲೀಸರು, ಪಾಕ್ ಆರ್ಮಿ ಸೈನಿಕರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಭದ್ರತಾ ಸಿಬ್ಬಂದಿಯೆಡೆಗೇ ಕಲ್ಲು ತೂರಾಟ ಮಾಡಿದ್ದಾರೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದಿದ್ದಾರೆ. ಮೆಟ್ರೋಸ್ಟೇಶನ್‌ನಲ್ಲಿ ಬೆಂಕಿ ಹಚ್ಚಿದ್ದಾರೆ. ರಸ್ತೆ ಪಕ್ಕದ ಗಿಡಮರಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಇವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್; ಪಾಕಿಸ್ತಾನದ ಮೂವರು ಉಗ್ರರ ಹತ್ಯೆ
ಪ್ರತಿಭಟನಾಕಾರರು ಇಸ್ಲಮಾಬಾದ್‌ಗೆ ತಲುಪುವುದಕ್ಕೂ ಮೊದಲು, ಇಲ್ಲಿನ ಸುಪ್ರೀಂಕೋರ್ಟ್, ಪ್ರಧಾನಿ ನಿವಾಸ ಸೇರಿ ಎಲ್ಲ ಪ್ರಮುಖ ಕಟ್ಟಡಗಳಿರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಇಸ್ಲಮಾಬಾದ್‌ನ್ನು ಸೀಲ್ ಕೂಡ ಮಾಡಲಾಗಿತ್ತು. ಪ್ರತಿಭಟನಾಕಾರರ ಕಡೆಗೆ ಅಶ್ರುವಾಯು ಪ್ರಯೋಗವನ್ನೂ ಪೊಲೀಸರು ಮಾಡಿದ್ದಾರೆ. ಇನ್ನೊಂದೆಡೆ ಆಡಳಿತ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್‌ನ ಕಾರ್ಯಕರ್ತರೂ ಕೂಡ ಪಿಟಿಐ ಕಾರ್ಯಕರ್ತರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಎರಡೂ ಬಣಗಳ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಿತ್ತು. ಹಾಗಿದ್ದಾಗ್ಯೂ ಇಮ್ರಾನ್ ಖಾನ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಕ್ ರಾಜಧಾನಿ ತಲುಪಿದ್ದಾರೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಇಂದು ಮಾತನಾಡಿದ ಇಮ್ರಾನ್ ಖಾನ್ ಪಾಕ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ನಮ್ಮ ಪಕ್ಷದ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆಯಲ್ಲಿ ಒಂದಷ್ಟು ಜನ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿ, ಚುನಾವಣೆ ದಿನಾಂಕ ನಿಗದಿ ಪಡಿಸುವವರೆಗೂ ನಾನಿಲ್ಲೇ ಕುಳಿತುಕೊಳ್ಳಲು ನಿರ್ಧರಿಸಿದ್ದೇನೆ. ಕಳೆದ 24ಗಂಟೆಯಿಂದಲೂ ನಾನು ಗಮನಿಸುತ್ತಿದ್ದೇನೆ. ಪಾಕ್ ಸರ್ಕಾರ ರಾಷ್ಟ್ರದಲ್ಲಿ ಅಸ್ಥಿರತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: China tactic: ಪಾಕಿಸ್ತಾನದಲ್ಲಿ ಸೇನಾ ಹೊರ ಠಾಣೆ ನಿರ್ಮಿಸಲು ಮುಂದಾದ ಚೀನಾ!