ಇಸ್ಲಾಮಾಬಾದ್: ಜಗತ್ತಿನ ಯಾವುದೇ ನಾಯಕನು ಬಾಯ್ತಪ್ಪಿನಿಂದ ನೀಡುವ ಹೇಳಿಕೆಗಳು ಟೀಕೆಗೆ ಗುರಿಯಾಗುತ್ತವೆ. ಇನ್ನೂ ಕೆಲವೊಮ್ಮೆ ನಗೆಪಾಟಲಿಗೀಡಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಬೇಜವಾಬ್ದಾರಿ ನಾಯಕ ಎಂಬ ಹಣೆಪಟ್ಟಿ ಅಂಟುವಂತೆ ಮಾಡುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಲ್ಲಿ ತುಪ್ಪದ ಬೆಲೆಯೇರಿಕೆ ಕುರಿತು ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ನೀಡಿದ ಹೇಳಿಕೆಯು ನಗೆಪಾಟಲೀಗೀಡಾಗಿದೆ. ಅವರು ಮಾತನಾಡಿದ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Reham Khan Marriage | ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ 2ನೇ ಪತ್ನಿ ಆಗಿದ್ದ ರೆಹಮ್ ಖಾನ್‌ಗೆ 3ನೇ ಮದುವೆ
“ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನೇದಿನೆ ಗಗನಕ್ಕೇರುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ದೇಶದಲ್ಲಿ ಒಂದು ಕೆ.ಜಿ ತುಪ್ಪದ ಬೆಲೆ ಮೊದಲು ೩೮೦ ಶತಕೋಟಿ ರೂಪಾಯಿ ಇತ್ತು. ಆದರೆ, ಈಗ ಇದು ೬೦೦ ಶತಕೋಟಿ ರೂಪಾಯಿ ಆಗಿದೆ” ಎಂದು ಇಮ್ರಾನ್ ಖಾನ್ ಹೇಳಿಕೆ ನೀಡಿದ ವೈರಲ್ ಆಗಿದೆ.
ವೈರಲ್ ಆದ ವಿಡಿಯೊಗೆ ಜನ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ‘ಒಂದು ಕೆ.ಜಿ ತುಪ್ಪದ ಬೆಲೆ ೬೦೦ ಕೋಟಿ ರೂ. ಹೇಗೆ ಸಾಧ್ಯ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ಪಾಕಿಸ್ತಾನ ಈಗ ಜಗತ್ತಿನಲ್ಲೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ. ಹಾಗಾಗಿಯೇ, ತುಪ್ಪದ ಬೆಲೆ ಇಷ್ಟೊಂದು ಆಗಿದೆ’ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. ಇಂತಹ ಕಮೆಂಟ್‌ಗಳಿಂದಲೇ ಇಮ್ರಾನ್ ಖಾನ್ ಅವರು ಬಾಯ್ತಪ್ಪಿನಿಂದ ನೀಡಿದ ಹೇಳಿಕೆಯನ್ನು ಜನ ಗೇಲಿ ಮಾಡಿದ್ದಾರೆ.