ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಕದನವನ್ನು ನಿಲ್ಲಿಸುವ ನಿಟ್ಟಿನಲ್ಲಿ ಮತ್ತೆ ಭಾರತ ಪ್ರಯತ್ನ ಆರಂಭಿಸಿದೆ. ಇದರ ಭಾಗವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ಗೆ (NSA Ajit Doval) ರಷ್ಯಾ ಪ್ರವಾಸ ಕೈಗೊಂಡಿದ್ದು, ಕದನ ವಿರಾಮ ಘೋಷಿಸುವಂತೆ ರಷ್ಯಾ ಸರ್ಕಾರದ ಮನವೊಲಿಕೆ ಆರಂಭಿಸಿದ್ದಾರೆ.
ಅಜಿತ್ ದೋವಲ್ ಹೆಚ್ಚು ಸುದ್ದಿ ಮಾಡದೇ ರಷ್ಯಾ ಪ್ರವಾಸ ಕೈಗೊಂಡಿದ್ದು, ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೊಲೈ ಪತ್ರುಶೇವ್ ಜತೆ ಮಾತುಕತೆ ನಡೆಸುತ್ತಿದ್ದಾರೆ. ಸದ್ಯ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಬೇರೆ ನಾಯಕರನ್ನು ಭೇಟಿಯಾಗುವ ಕಾರ್ಯಕ್ರಮವಿಲ್ಲದೇ ಇದ್ದರೂ, ತಮ್ಮ ಪ್ರಸ್ತಾಪಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದೊರೆಯುತ್ತದೆ ಎಂಬುದನ್ನು ನೋಡಿಕೊಂಡು ಅವರು ಮುಂದುವರಿಯಲಿದ್ದಾರೆ ಎನ್ನಲಾಗಿದೆ.
ರಷ್ಯಾದೊಂದಿಗೆ ಭಾರತವು ಅತ್ಯುತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಭಾರತದ ಮಾತನ್ನು ರಷ್ಯಾ ಕೇಳಬಹುದು ಎಂದು ಐರೋಪ್ಯ ರಾಷ್ಟ್ರಗಳು ಭಾರತದ ಈ ಪ್ರಯತ್ನವನ್ನು ಕುತೂಹಲದಿಂದ ಎದಿರು ನೋಡುತ್ತಿವೆ. ಅಮೆರಿಕ ಕೂಡ ಭಾರತದ ಈ ಪ್ರಯತ್ನದ ಬಗ್ಗೆ ಭರವಸೆ ಹೊಂದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ಕದನಕ್ಕೆ ಅಂತ್ಯ ಹಾಡಿಸಲು ಉತ್ಸುಕವಾಗಿರುವ ಹಿನ್ನೆಲೆಯಲ್ಲಿ ಭಾರತ ತಾನಾಗಿಯೇ ಈ ಮಧ್ಯಸ್ಥಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಈಗಾಗಲೇ ಪಾಶ್ಚಿಮಾತ್ಯ ರಾಷ್ಟ್ರಗಳು ಕದನ ವಿರಾಮಕ್ಕೆ ಮುಂದಾಗುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮನವೊಲಿಸುವಲ್ಲಿ ಭಾಗಶಃ ಯಶಸ್ವಿಯಾಗಿವೆ. ರಷ್ಯಾದೊಂದಿಗೆ ಮಾತುಕತೆ ನಡೆಸಿ ಈ ಕದನಕ್ಕೆ ಅಂತ್ಯ ಹಾಡಲು ಅವರ ಮೇಲೆ ಒತ್ತಡ ಹೇರುತ್ತಿವೆ. ಇತ್ತ ಭಾರತ ರಷ್ಯಾದ ಮನವೊಲಿಸುವಲ್ಲಿ ಯಶಸ್ವಿಯಾದರೆ ಕದನ ವಿರಾಮ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ | Russia Ukraine war | ಧಾನ್ಯ ಸಾಗಣೆಗೆ ಬಂದರು ಮುಕ್ತ: ರಷ್ಯಾ ಮತ್ತು ಉಕ್ರೇನ್ ಒಪ್ಪಂದ