ವಾಷಿಂಗ್ಟನ್: ಅಮೆರಿಕದ ರಾಜಕಾರಣದಲ್ಲಿ ಭಾರತೀಯರ ಪ್ರಾತಿನಿಧ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. ಈ ಸಾಲಿಗೆ ಇಂಡಿಯನ್-ಅಮೆರಿಕನ್ ಅರುಣಾ ಮಿಲ್ಲರ್ (Aruna miller) ಅವರು ಸೇರ್ಪಡೆಯಾಗಿದ್ದಾರೆ. ಅವರು ಮೇರಿಲ್ಯಾಂಡ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅಮೆರಿಕದಲ್ಲಿ ಈಗ ಮಿಡ್‌ಟರ್ಮ್ ಎಲೆಕ್ಷನ್ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ವೆಸ್ ಮೋರ್ ಜತೆಗೂಡಿ ಮಿಲ್ಲರ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮೇರಿಲ್ಯಾಂಡ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಇಂಡಿಯನ್ ಅಮೆರಿಕನ್ ಮತ್ತು ದಕ್ಷಿಣ ಏಷ್ಯಾ ಮಹಿಳೆಯೊಬ್ಬರು ಲೆಫ್ಟಿನೆಂಟ್ ಗವರ್ನರ್ ಎಂಬ ಕೀರ್ತಿಗೆ ಅರುಣಾ ಮಿಲ್ಲರ್ ಅವರು ಪಾತ್ರವಾಗಿದ್ದಾರೆ.
ಅರುಣಾ ಮಿಲ್ಲರ್ ಅವರು, ಇಂಡಿಯನ್ ಅಮೆರಿಕನ್ ಇಂಪಾಕ್ಟ್ ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಈ ಸಂಸ್ಥೆಯು ಅಮೆರಿಕದ ಸರ್ಕಾರದ ಪ್ರತಿ ಹಂತದಲ್ಲಿ ಭಾರತೀಯ ವ್ಯಕ್ತಿಗಳಿಗೆ ಬೆಂಬಲ ನೀಡುವ ಕೆಲಸವನ್ನು ಮಾಡುತ್ತದೆ. ಹಾಗೆಯೇ, ಹಲವು ಅಮೆರಿಕನ್-ಇಂಡಿಯನ್ ಸಂಸ್ಥೆಗಳಿಗೂ, ವ್ಯಕ್ತಿಗಳಿಗೂ ಈ ಸಂಸ್ಥೆ ಸಹಕಾರ ಒದಗಿಸುತ್ತದೆ.
ಅರುಣಾ ಮಿಲ್ಲರ್ ಅವರಿಗೆ ರಾಜಕಾರಣವೇನೂ ಹೊಸದಲ್ಲ. 2011 ಮತ್ತು 2019ರ ನಡುವೆ ಮಿಲ್ಲರ್ ಅವರು ಮೇರಿಲ್ಯಾಂಡ್ ಹೌಸ್ ಆಫ್ ಡೆಲಿಗೇಟ್ಸ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಿಸ್ಟ್ರಿಕ್ 15 ಅನ್ನು ಅವರು ಪ್ರತಿನಿಧಿಸುತ್ತಿದ್ದರು. ಹಾಗೆಯೇ, 2018ರಲ್ಲಿ ನಡೆದ ಎಲೆಕ್ಷನ್‌ನಲ್ಲಿ ಅವರು ಮೇರಿಲ್ಯಾಂಡ್‌ನ 6ನೇ ಕಾಂಗ್ರೆಸ್‌ನಲ್ ಡಿಸ್ಟ್ರಿಕ್ಟ್‌ಗೆ ಅಭ್ಯರ್ಥಿಯಾಗಿದ್ದರು. ಆದರೆ, ಡೇವಿಡ್ ಟ್ರೋನ್ ಎದುರು ಸೋಲು ಕಂಡಿದ್ದರು.
ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಜನಿಸಿದ ಅರುಣಾ ಮಿಲ್ಲರ್ ಅವರು ತಮ್ಮ ತಂದೆತಾಯಿ ಜತೆ ಅಮೆರಿಕಕ್ಕೆ ಸ್ಥಳಾಂತರಗೊಂಡರು. ಆಗ ಅವರಿಗೆ ಏಳು ವರ್ಷ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅವರು ಬಿಎಸ್ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾ, ವರ್ಜಿನಿಯಾ ಮತ್ತು ಹವಾಯಿಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಸಾರಿಗೆ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ | Pavithra Prabhakar | ಇಂಡಿಯನ್-ಅಮೆರಿಕನ್ ಪ್ರೊ. ಪವಿತ್ರಾ ಪ್ರಭಾಕರ್‌ಗೆ ಅಮೆಜಾನ್ ರಿಸರ್ಚ್ ಅವಾರ್ಡ್