ವಾಷಿಂಗ್ಟನ್: ಅಮೆರಿಕದಲ್ಲಿರುವ ಹಿಂದು ವಿಶ್ವವಿದ್ಯಾಲಯಕ್ಕೆ (Hindu University of America) ಭಾರತ ಮೂಲದ ಉದ್ಯಮಿಯೊಬ್ಬರು 8.2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಫ್ಲೊರಿಡಾ ಮೂಲದ ಹಿಂದು ಯುನಿವರ್ಸಿಟಿ ಆಫ್ ಅಮೆರಿಕಕ್ಕೆ ಅಮೆರಿಕದಲ್ಲಿರುವ ಭಾರತ ಮೂಲದ ಉದ್ಯಮಿ ರಮೇಶ್ ಭೂಟಾಡ ಅವರು ಬೃಹತ್ ಮೊತ್ತವನ್ನು ದೇಣಿಗೆ ನೀಡಿದ್ದಾರೆ.
ಭೂಟಾಡ ಅವರು ಹ್ಯೂಸ್ಟನ್ ಮೂಲದ ಸ್ಟಾರ್ ಪೈಪ್ ಪ್ರಾಡಕ್ಟ್ಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದಾರೆ. ಯುವಕರು ಹಿಂದುತ್ವದ ಕುರಿತು, ಹಿಂದುತ್ವದ ಮೌಲ್ಯಗಳ ಕುರಿತು ಅರಿಯಲಿ, ಜ್ಞಾನ ಸಂಪಾದಿಸಲಿ ಎಂಬ ದೃಷ್ಟಿಯಿಂದಾಗಿ ಅವರು ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದು ಯುನಿವರ್ಸಿಟಿ ಆಫ್ ಅಮೆರಿಕವನ್ನು (HUA) 1989ರಲ್ಲಿ ಸ್ಥಾಪಿಸಲಾಗಿದೆ. ಹಿಂದು ತತ್ವಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಲು ವಿವಿಯನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಫ್ಲೊರಿಡಾ ರಾಜ್ಯ ಸರ್ಕಾರವು 1993ರಲ್ಲಿ ಮಾನ್ಯತೆ ನೀಡಿದೆ.
ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಭೂಟಾಡ ಅವರನ್ನು ಸನ್ಮಾನಿಸಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ದೇಣಿಗೆ ಲಭಿಸಿದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ. ಅಮೆರಿಕದಲ್ಲಿರುವ ಹಿಂದು ವಿವಿಗೆ ಇಷ್ಟೊಂದು ಮೊತ್ತದ ದೇಣಿಗೆ ನೀಡಿದ ಭೂಟಾಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹಿಂದು ಧರ್ಮದ ಸಾರ ಅರಿಯುವುದು ಅತ್ಯಗತ್ಯ
ಹ್ಯೂಸ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಭೂಟಾಡ ಮಾತನಾಡಿದ್ದು, ಹಿಂದು ಧರ್ಮದ ಸಾರ ಅರಿಯುವುದು ಅತ್ಯವಶ್ಯ ಎಂದಿದ್ದಾರೆ. “ನಾನು ಹಿಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರೂ ಹಿಂದು ಧರ್ಮದ ಸಾರವನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಾಗಿಲ್ಲ. ಹಿಂದು ಸಂಘಟನೆಗಳ ಸದಸ್ಯನಾಗಿಯೂ, ಹಿಂದು ಧರ್ಮದ ಆಚರಣೆಗಳನ್ನು ಪಾಲಿಸುವವನಾಗಿಯೂ ಇದುವರೆಗೆ ನನಗೆ ಸಂಪೂರ್ಣವಾಗಿ ಹಿಂದು ಧರ್ಮವನ್ನು ಅರಿಯಲು ಆಗಿಲ್ಲ” ಎಂದು ಹೇಳಿದರು.
“ಜಗತ್ತಿನ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತವೆ. ಆದರೆ, ಅಮೆರಿಕದ ಹಿಂದು ವಿವಿಯಂತಹ ಶಿಕ್ಷಣ ಸಂಸ್ಥೆಗಳು ಮಾತ್ರ ಹೇಗೆ ಬದುಕಬೇಕು, ಜೀವನವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ತಿಳಿಸುತ್ತವೆ. ಹಿಂದುತ್ವವು ನಮ್ಮ ನಡುವೆ ಸಾಮರಸ್ಯ ಮೂಡಿಸುತ್ತದೆ. ಕುಟುಂಬ, ಗೆಳೆಯರು, ಸಹೋದ್ಯೋಗಿಗಳು ಸೇರಿ ಜಗತ್ತಿನಾದ್ಯಂತ ಎಲ್ಲರೊಳಗೊಂದಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ” ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಚೇರ್ಮನ್ ವೇದ್ ನಂದಾ ಅವರು ಕೂಡ ಪ್ರತಿಕ್ರಿಯಿಸಿದ್ದು, “ವಿಶ್ವವಿದ್ಯಾಲಯಕ್ಕೆ ನೀಡಿದ ಬೃಹತ್ ಮೊತ್ತದ ದೇಣಿಗೆ ಇದಾಗಿದೆ. ವಿವಿಯು ಹಿಂದು ಧರ್ಮದ ಮೌಲ್ಯಗಳನ್ನು ಕಲಿಸುತ್ತದೆ. ಅಮೆರಿಕಕ್ಕೆ ಮಾತ್ರವಲ್ಲ, ಜಗತ್ತಿಗೇ ಹಿಂದು ಧರ್ಮದ ಪ್ರಾಮುಖ್ಯತೆ, ಆಚಾರ-ವಿಚಾರಗಳನ್ನು ತಿಳಿಸಿಕೊಡಲಾಗುತ್ತಿದೆ. ಶಿಕ್ಷಣದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಕೂಡ ಮಾಹಿತಿ ನೀಡಲಾಗುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ: Anupam Kher: ಕಾಶ್ಮೀರಿ ಪಂಡಿತರಿಗೆ 5 ಲಕ್ಷ ರೂ. ದೇಣಿಗೆ ನೀಡಿದ ನಟ ಅನುಪಮ್ ಖೇರ್