Site icon Vistara News

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸ ಕಚೇರಿಗೆ ಬೆಂಕಿ; 5 ತಿಂಗಳಲ್ಲಿ 2ನೇ ಬಾರಿ ಖಲಿಸ್ತಾನಿಗಳ ದಾಳಿ

Indian consulate in San Francisco

ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿರುವ (San Francisco) ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿ ಪರ ಹೋರಾಟಗಾರರು ಬೆಂಕಿ (Indian consulate in San Francisco) ಹಚ್ಚಿದ್ದಾರೆ. ಭಾನುವಾರ ತಡರಾತ್ರಿ 1.30ರಿಂದ 2.30ರ ಸಮಯದಲ್ಲಿ ಈ ಘಟನೆ ನಡೆದಿದ್ದಾಗಿ ಸ್ಯಾನ್​ ಫ್ರಾನ್ಸಿಸ್ಕೋ ಮಾಧ್ಯಮಗಳು ವರದಿ ಮಾಡಿವೆ. ಖಲಿಸ್ತಾನಿ ಪರ ಹೋರಾಟಗಾರರು ಕಳೆದ ಐದು ತಿಂಗಳಲ್ಲಿ ನಡೆಸಿದ ಎರಡನೇ ವಿಧ್ವಂಸಕ ಕೃತ್ಯ ಇದೆ. ಮಾರ್ಚ್​ ತಿಂಗಳಲ್ಲಿ ಈ ದೂತಾವಾಸ ಕಚೇರಿ ಮೇಲೆ ದಾಳಿ ಮಾಡಿ, ಹಾನಿಗೊಳಿಸಿದ್ದರು. ಭಾರತೀಯ ದೂತಾವಾಸ ಕಚೇರಿಗೆ ಬೆಂಕಿ ಹಾಕಲಾದ ವಿಡಿಯೊವನ್ನು ಅಲ್ಲಿನ ಸ್ಥಳೀಯ ಟಿವಿ ಚಾನೆಲ್​ ದಿಯಾ ಟಿವಿ ಶೇರ್ ಮಾಡಿಕೊಂಡಿದೆ.

ಇನ್ನು ಭಾರತೀಯ ದೂತವಾಸ ಕಚೇರಿಗೆ ಬೆಂಕಿ ಹಾಕಿದ್ದರ ಬಗ್ಗೆ ಖಲಿಸ್ತಾನಿಗಳೇ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದೂ ವರದಿಯಾಗಿದೆ. ಈ ಕಚೇರಿಗೆ ದೊಡ್ಡಮಟ್ಟದ ಹಾನಿಯಾಗಿಲ್ಲ. ಹಾಗೇ, ಯಾರಿಗೂ ಗಾಯವಾಗಿಲ್ಲ, ಯಾರ ಪ್ರಾಣವೂ ಹೋಗಿಲ್ಲ ಎಂದು ಹೇಳಲಾಗಿದೆ. ದುಷ್ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​ನ ವಕ್ತಾರ, ಮ್ಯಾಥ್ಯೂ ಮಿಲ್ಲರ್ ‘ಯುಸ್​​ನಲ್ಲಿರುವ ರಾಜತಾಂತ್ರಿಕ ವ್ಯವಸ್ಥೆಗಳು, ವಿದೇಶಿ ರಾಯಭಾರಿ ಕಚೇರಿಗಳ ಮೇಲಿನ ದಾಳಿ, ಧ್ವಂಸವನ್ನು ಸಹಿಸಲು ಸಾಧ್ಯವೇ ಇಲ್ಲ. ಇದು ಕ್ರಿಮಿನಲ್ ಅಪರಾಧ’ ಎಂದು ಹೇಳಿದ್ದಾರೆ.

ಮಾರ್ಚ್​ ತಿಂಗಳಲ್ಲಿ ಕೂಡ ಹೀಗೆ ಮಾಡಲಾಗಿತ್ತು. ಸ್ಯಾನ್​ ಫ್ರಾನ್ಸಿಸ್ಕೋದ ಇದೇ ಭಾರತೀಯ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿ, ಗೋಡೆಗಳಿಗೆ ಹಾನಿ ಮಾಡಿದ್ದರು. ಅರೆಸ್ಟ್ ಆಗಿರುವ ಖಲಿಸ್ತಾನಿ ನಾಯಕ ಅಮೃತ್​ ಪಾಲ್​ ಸಿಂಗ್​ನನ್ನು ಬಿಡುಗಡೆಗೊಳಿಸಿ ಎಂದು ಗೋಡೆಗಳ ಮೇಲೆ ಬರೆದಿದ್ದರು. ಅಷ್ಟೇ ಅಲ್ಲ ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿ ಮೇಲೆ ಕೂಡ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದರು. ಈ ಕಚೇರಿ ಮೇಲೆ ಹಾರಾಡುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ತಮ್ಮ ಹಾರಿಸಲು ಪ್ರಯತ್ನಿಸಿದ್ದರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದರು.

Exit mobile version