ನವ ದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಸಂಯುಕ್ತ ಅರಬ್ ಗಣರಾಜ್ಯ)ನಲ್ಲಿ ಭಾರತೀಯ ವ್ಯಕ್ತಿಯೊಬ್ಬ ಅರೆಸ್ಟ್ ಆಗಿದ್ದಾನೆ. ಅವನಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ತನ್ನ ಬ್ಯಾಂಕ್ ಅಕೌಂಟ್ಗೆ ಆಕಸ್ಮಿಕವಾಗಿ ಬಂದ 570,000 ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್ಗಳನ್ನು (ಸುಮಾರು 1.28 ಕೋಟಿ ರೂಪಾಯಿ) ಆತ ವಾಪಸ್ ಮಾಡಲು ನಿರಾಕರಿಸಿದ ಕಾರಣ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
2021ರ ಅಕ್ಟೋಬರ್ ತಿಂಗಳಲ್ಲಿ ಯುಎಇ ದೇಶದ ಮೆಡಿಕಲ್ ಟ್ರೇಡಿಂಗ್ ಕಂಪನಿಯೊಂದು ತಮ್ಮ ಉದ್ಯಮಕ್ಕೆ ಸಂಬಂಧಪಟ್ಟ ಔಷಧ ಪೂರೈಕೆದಾರರೊಬ್ಬರ ಬ್ಯಾಂಕ್ ಅಕೌಂಟ್ಗೆ 570,000 ಯುಎಇ ದಿರ್ಹಾಮ್ಗಳನ್ನು ವರ್ಗಾವಣೆ ಮಾಡಿತ್ತು. ಆದರೆ ಅದೇನೋ ದೋಷವುಂಟಾಗಿ ಆ ಹಣ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಅಕೌಂಟ್ಗೆ ಹೋಗಿತ್ತು. ನಮ್ಮ ಪೂರೈಕೆದಾರರ ಬ್ಯಾಂಕ್ ಅಕೌಂಟ್ಗೆ ಹೋಲುವ ಅಕೌಂಟ್ವೊಂದಕ್ಕೆ ಹಣ ಹೋಗಿದೆ ಎಂಬುದನ್ನು ಅರಿತ ಮೆಡಿಕಲ್ ಟ್ರೇಡಿಂಗ್ ಕಂಪನಿ, ಆತನನ್ನು ಸಂಪರ್ಕಿಸಿ ಹಿಂದಿರುಗಿಸುವಂತೆ ಕೇಳಿಕೊಂಡರೆ, ಆತ ಒಪ್ಪಿರಲೇ ಇಲ್ಲ. ಹೀಗಾಗಿ ಕಂಪನಿ ಆತನ ವಿರುದ್ಧ ದುಬೈ ಕ್ರಿಮಿನಲ್ ಕೋರ್ಟ್ನಲ್ಲಿ ಕೇಸ್ ಹಾಕಿತ್ತು.
ಇನ್ನು ಕೋರ್ಟ್ ವಿಚಾರಣೆ ವೇಳೆ ಈ ಭಾರತೀಯ ಮೂಲದ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ‘ನನ್ನ ಅಕೌಂಟ್ಗೆ ಅಷ್ಟು ದೊಡ್ಡ ಮೊತ್ತದ ಹಣ ಬಂದಾಗ ಅಚ್ಚರಿಯಾಯಿತು. ಅದಾದ ಬಳಿಕ ಕಂಪನಿಯವರು ನನ್ನನ್ನು ಸಂಪರ್ಕಿಸಿ ಹಣ ವಾಪಸ್ ಮಾಡುವಂತೆ ಕೇಳಿದರು. ಆದರೆ ನಾನು ಒಪ್ಪಲಿಲ್ಲ. ಹಣವನ್ನು ಅದಾಗಲೇ ನನ್ನ ಬಾಡಿಗೆಗೆ ಮತ್ತು ಇತರ ಖರ್ಚಿಗಾಗಿ ಬಳಸಿಕೊಂಡಿದ್ದೆ. ಅಷ್ಟೇ ಅಲ್ಲ, ನನಗೆ ಫೋನ್ ಮಾಡಿದ ಕಂಪನಿಯೇ ನನಗೆ ಹಣ ವರ್ಗಾವಣೆ ಮಾಡಿದೆ ಎಂಬುದು ನನಗೆ ಖಚಿತ ಇರಲಿಲ್ಲ’ ಎಂದು ಹೇಳಿಕೊಂಡಿದ್ದಾನೆ.
ಈತನದ್ದು ಗಂಭೀರ ಅಪರಾಧ ಎಂದು ಕೋರ್ಟ್ ಪರಿಗಣಿಸಿದೆ. ಕಂಪನಿ ತಪ್ಪಾಗಿ ತನ್ನ ಅಕೌಂಟ್ಗೆ ಹಣ ಹಾಕಿದೆ ಎಂಬುದು ಗೊತ್ತಿದ್ದೂ ಅವನು ಅದನ್ನು ವಾಪಸ್ ಮಾಡಲು ನಿರಾಕರಿಸಿದ್ದು ಅಪರಾಧ ಎಂದು ಹೇಳಿರುವ ಕೋರ್ಟ್ ‘ಅಷ್ಟೂ ಹಣವನ್ನು ಮೆಡಿಕಲ್ ಟ್ರೇಡಿಂಗ್ ಕಂಪನಿ’ಗೆ ವರ್ಗಾಯಿಸಲು ಸೂಚಿಸಿದೆ. ಹಾಗೇ, ಒಂದು ತಿಂಗಳು ಜೈಲು ಶಿಕ್ಷೆ ಮುಗಿದ ಕೂಡಲೇ ಗಡೀಪಾರು ಮಾಡುವಂತೆ ಆದೇಶ ನೀಡಿದೆ.
ಇದನ್ನೂ ಓದಿ: Viral post | ರಾವಣನ ಜೊತೆ ಇಲ್ಲಿ ವ್ಯಾಯಾಮ ಮಾಡಿ: ಪೌರಾಣಿಕ ಪಾತ್ರಗಳ ಜಿಮ್ಮಿದು!