ಇಂಗ್ಲೆಂಡ್ನ ಹಿಯರ್ಫೋರ್ಡ್ಶೈರ್ನಲ್ಲಿರುವ ಭಾರತೀಯ ಮೂಲದ ವೈದ್ಯೆಯೊಬ್ಬರು, ಪಾಕಿಸ್ತಾನ ಮೂಲದ ವೈದ್ಯೆಯೊಬ್ಬಳನ್ನು ನಿಂದಿಸಿದ ಕಾರಣಕ್ಕೆ ಆರು ತಿಂಗಳ ಅವಧಿಗೆ ಅಮಾನತುಗೊಂಡದ್ದಾರೆ. ಡಾ. ಕೊಲಥೋರ್ ಈಶ್ವರಿ ಎಂಬುವರು ತಮ್ಮ ಮುಸ್ಲಿಂ ಸಹೋದ್ಯೋಗಿಗೆ ‘ಹಂದಿ ಮಾಂಸದ ಸಾಸೇಜ್ಗಳು (Porky Sausages-ಹಂದಿ ಮಾಂಸದಿಂದ ತಯಾರಾದ ಒಂದು ಬಗೆಯ ತಿನಿಸು)’ ಎಂದು ಬೈಯ್ಯುವ ಮೂಲಕ ಜನಾಂಗೀಯ ನಿಂದನೆ ಮಾಡಿರುವ ಮತ್ತು ಹಗೆತನ ತೋರಿಸುವ ಆರೋಪದಡಿ ಅಮಾನತುಗೊಂಡಿದ್ದಾರೆ. ಡಾ. ಈಶ್ವರಿ ಮತ್ತು ಪಾಕಿಸ್ತಾನ ಮೂಲದ ವೈದ್ಯೆ ಇಬ್ಬರೂ ಹಿಯರ್ಫೋರ್ಡ್ಶೈರ್ನಲ್ಲಿರುವ ಹಿಯರ್ಫೋರ್ಡ್ ಕೌಂಟಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು.
ನಿಂದನೆಗೆ ಗುರಿಯಾಗಿರುವ ಪಾಕ್ ಮೂಲದ ವೈದ್ಯೆಯ ಹೆಸರು ಬಹಿರಂಗಗೊಂಡಿಲ್ಲ. ಆಸ್ಪತ್ರೆ ಆಡಳಿತಕ್ಕೆ ದೂರು ನೀಡಿದ್ದರು. ‘2019ರಿಂದಲೂ ಡಾ. ಈಶ್ವರಿ ನನ್ನ ವಿರುದ್ಧ ಹಗೆತನ ತೋರಿಸುತ್ತಲೇ ಬಂದಿದ್ದಾರೆ. ನಾನು ಮೊದಲ ಬಾರಿಗೆ 2019ರಲ್ಲಿ ಈ ಆಸ್ಪತ್ರೆಗೆ ತರಬೇತಿ ಆಕಾಂಕ್ಷಿಯಾಗಿ ಬಂದೆ. ಆಸ್ಪತ್ರೆಯ ವಸತಿಗೃಹದಲ್ಲಿ ನಾವು ಇದ್ದೆವು. ಅಲ್ಲಿ ನನ್ನನ್ನು ನಾನು ಎಲ್ಲರಿಗೂ ಪರಿಚಯಿಸಿಕೊಂಡು, ಡಾ. ಈಶ್ವರಿ ಬಳಿಯೂ ಹೋಗಿ ನನ್ನ ಪರಿಚಯಿಸಿಕೊಂಡೆ. ಆದರೆ ಈಶ್ವರಿ ನನ್ನನ್ನು ನಿಂದಿಸಿದರು. ತಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ಬಿಟ್ಟು ನನ್ನನ್ನು ಹಂದಿ ಮಾಂಸದ ಸಾಸೇಜ್ಗಳು ಎಂದು ಬೈದರು. ಅದಾದ ಮೇಲೆ ಹಲವು ಬಾರಿ ಅವರು ನನ್ನನ್ನು ಇದೇ ಶಬ್ದದಿಂದ ನಿಂದಿಸಿದ್ದಾರೆ ಎಂದು ಮುಸ್ಲಿಂ ವೈದ್ಯೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Pakistan Stampede: ಪಾಕಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ; ರೇಷನ್ ವಿತರಣೆ ವೇಳೆ ಕಾಲ್ತುಳಿತವಾಗಿ 11 ಜನರ ಸಾವು
ಹಾಗೇ, ಇನ್ನೊಂದು ಸಂದರ್ಭದಲ್ಲಿ ನಾನು ಬಿಸಿಯಾದ ಕೆಟೆಲ್ (ನೀರು ಬಿಸಿ ಮಾಡುವ ಪುಟ್ಟ ಕಡಾಯಿ)ಗೆ ತಣ್ಣೀರು ಹಾಕಿದೆ. ಅಲ್ಲೇ ಇದ್ದ ಡಾ. ಈಶ್ವರಿ ನನ್ನ ಕೈಯಿಂದ ನೀರಿನ ಬಾಟಲಿಯನ್ನು ಕಿತ್ತುಕೊಂಡು, ನಿನ್ನ ಬಾಟಲಿಯಲ್ಲಿರುವ ಗಲೀಜು ನೀರಿನಿಂದ ಕೆಟೆಲ್ನ್ನು ಗಲೀಜು ಮಾಡಬೇಡ ಎಂದು ಹೇಳುತ್ತ, ನೀರನ್ನು ಸಿಂಕ್ನಲ್ಲಿ ಚೆಲ್ಲಿದರು ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಾ. ಈಶ್ವರಿ ಪ್ರತಿಕ್ರಿಯೆ ಏನು?
ಪಾಕಿಸ್ತಾನಿ ವೈದ್ಯೆಯಿಂದ ದೂರು ಪಡೆದ ಆಸ್ಪತ್ರೆಯ ಮಂಡಳಿ, ಈಶ್ವರಿಯವರಿಂದ ಸ್ಪಷ್ಟನೆ ಕೇಳಿತ್ತು. ಅದಕ್ಕೆ ಉತ್ತರಿಸಿದ್ದ ಡಾ. ಈಶ್ವರಿ, ‘ನಾನು ಆಕೆಯನ್ನು ನಿಂದಿಸಿಲ್ಲ. ಅವತ್ತು ಅವರು ಬಂದಾಗ ನಾನು ವಸತಿಗೃಹದಲ್ಲಿ ಅಡುಗೆ ಮನೆಯಲ್ಲಿ ಇದ್ದೆ. ತುಂಬ ಗಡಿಬಿಡಿಯಲ್ಲಿ ಇದ್ದೆ. ಅವಳು ಬಂದಾಗ ನಾನು ಫ್ರಿಜ್ನಲ್ಲಿ ಸಾಸೇಜ್ಗಾಗಿ ಹುಡುಕುತ್ತಿದ್ದೆ ಮತ್ತು ಸಾಸೇಜ್ಗಳು ಎಲ್ಲಿ ಎಂದು ನನ್ನಲ್ಲೇ ನಾನು ಗೊಣಗಿಕೊಂಡಿದ್ದೆ. ಅಷ್ಟೇ ಅಲ್ಲ, ನನ್ನ ಹೆಸರು ಏನೆಂದು ಅವಳಿಗೆ ಹೇಳಿದ್ದೇನೆ’ ಎಂದು ಹೇಳಿದ್ದರು.
ಕೆಟೆಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಾ. ಈಶ್ವರಿ, ‘ಅದಾಗಲೇ ಅರ್ಧ ನೀರಿದ್ದ ಕೆಟೆಲ್ಗೆ ಮತ್ತೆ ನೀರು ತುಂಬಿದರು. ಆರೋಗ್ಯದ ದೃಷ್ಟಿಯಿಂದ ಆ ಹಳೇ ನೀರನ್ನು ಚೆಲ್ಲಿ, ಪೂರ್ತಿಯಾಗಿ ಹೊಸ ನೀರನ್ನು ತುಂಬಿದೆ. ನಿಜಕ್ಕೂ ಹೇಳುತ್ತೇನೆ, ನನಗೆ ಆಕೆ ಪಾಕಿಸ್ತಾನದಿಂದ ಬಂದವಳು ಎಂಬ ವಿಷಯವೇ ಅನೇಕ ದಿನದವರೆಗೆ ಗೊತ್ತಿರಲಿಲ್ಲ ಎಂದೂ ಸಮರ್ಥನೆ ಮಾಡಿಕೊಂಡರು. ಆದರೆ ಆಸ್ಪತ್ರೆ ಆಡಳಿತ ಡಾ. ಈಶ್ವರಿ ಮಾತನ್ನು ನಂಬಲಿಲ್ಲ ಮತ್ತು ತಾವು ಕೇಳಿದ ಪ್ರಶ್ನೆಗೆ ಈಶ್ವರಿ ಸರಿಯಾದ ಉತ್ತರ ನೀಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿದ್ದಾಗಿ ಹೇಳಿಕೊಂಡಿದೆ.