Site icon Vistara News

Indian Student: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಯ ಹತ್ಯೆ; ಭಿಕಾರಿಗೆ ಅನ್ನ ಹಾಕಿದ್ದೇ ತಪ್ಪಾಯ್ತು!

Vivek Saini

Indian Student, 25, Killed By Homeless Man In US After Sheltering Him For Days

ವಾಷಿಂಗ್ಟನ್:‌ ಭಾರತೀಯರು (Indians) ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಬೇರೆಯವರಿಗೆ ಸಹಾಯ ಮಾಡುತ್ತಾರೆ. ಅದರಲ್ಲೂ, ಹಸಿದು ಬಂದವರಿಗೆ ಅನ್ನ-ನೀರು ಕೊಟ್ಟು ಸತ್ಕರಿಸುತ್ತಾರೆ. ಆದರೆ, ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಯು (Indian Saini) ಅನಾಥನೊಬ್ಬನಿಗೆ ಆಶ್ರಯದ ಜತೆಗೆ ಅನ್ನ-ನೀರು ಕೊಟ್ಟು ಸಹಾಯ ಮಾಡಿದ್ದೇ ಆತನ ಜೀವಕ್ಕೆ ಕುತ್ತು ತಂದಿದೆ. ಅಮೆರಿಕದಲ್ಲಿ ಎಂಬಿಎ ಅಧ್ಯಯನ ಮಾಡುತ್ತಿದ್ದ ಭಾರತದ ವಿವೇಕ್‌ ಸೈನಿಯನ್ನು (Vivek Saini) ಅನಾಥ ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಅಮೆರಿಕದ ಜಾರ್ಜಿಯಾದಲ್ಲಿ ಎಂಬಿಎ ಓದುತ್ತಿರುವ ವಿವೇಕ್‌ ಸೈನಿ ಅವರು ಫುಡ್‌ ಮಾರ್ಟ್‌ ಒಂದರಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಅವರಿಗೆ ಜೂಲಿಯನ್‌ ಫಾಲ್ಕ್‌ನರ್‌ ಎಂಬ ಅನಾಥನೊಬ್ಬ ಪರಿಚಯವಾಗಿದ್ದಾನೆ. ಮನೆ ಇಲ್ಲ, ಸಂಬಂಧಿಕರಿಲ್ಲ ಎಂದು ಜೂಲಿಯನ್‌ ಫಾಲ್ಕ್‌ನರ್‌ ಹೇಳಿದ್ದಕ್ಕೆ ಫುಡ್‌ ಮಾರ್ಟ್‌ನಲ್ಲಿಯೇ ವಿವೇಕ್‌ ಸೈನಿಯು ಆತನಿಗೆ ಆಶ್ರಯ ನೀಡಿದ್ದಾರೆ. ಆದರೆ, ವಿವೇಕ್‌ ಸೈನಿ ಅವರಿಂದ ಸಹಾಯ ಪಡೆದ ಜೂಲಿಯನ್‌ ಫಾಲ್ಕ್‌ನರ್‌, ಅವರನ್ನೇ ಹತ್ಯೆಗೈದಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ

ಫುಡ್‌ ಮಾರ್ಟ್‌ನಲ್ಲಿ ವಿವೇಕ್‌ ಸೈನಿ ಮೇಲೆ ಜೂಲಿಯನ್‌ ಫಾಲ್ಕ್‌ನರ್‌ ಹಲ್ಲೆ ನಡೆಸುತ್ತಿರುವ ಸಿಸಿಟಿವಿ ವಿಡಿಯೊ ಲಭ್ಯವಾಗಿದೆ. ವಿವೇಕ್‌ ಸೈನಿಗೆ ಹೊಡೆಯುವ, ಒದೆಯುವ ದೃಶ್ಯಗಳು ಭೀಕರವಾಗಿವೆ. ಜನವರಿ 16ರಂದೇ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಸುದ್ದಿಯಾಗಿದೆ. “ಮಾಲೀಕರಿಗೆ ಗೊತ್ತಾದರೆ ಕೆಲಸದಿಂದ ತೆಗೆಯುತ್ತಾರೆ, ನೀನು ಊಟ ಮಾಡಿದ್ದು, ಚಿಪ್ಸ್‌ ತಿಂದಿದ್ದು ಹಾಗೂ ಕೋಕ್‌ ಕುಡಿದಿದ್ದಕ್ಕಾದರೂ ದುಡ್ಡು ಕೊಡು” ಎಂದು ಭಿಕಾರಿಗೆ ವಿವೇಕ್‌ ಸೈನಿ ಹೇಳಿದ್ದಕ್ಕೇ ಆತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: Indian Student: ಅಮೆರಿಕದ ಜಿಮ್‌ನಲ್ಲಿ ಚಾಕು ಇರಿತಕ್ಕೀಡಾಗಿದ್ದ ಭಾರತದ ವಿದ್ಯಾರ್ಥಿ ಸಾವು!

ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲೆ ದಾಳಿ, ಹತ್ಯೆಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಕೆಲ ತಿಂಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತದ ವರುಣ್‌ ರಾಜ್ ಎಂಬ ವಿದ್ಯಾರ್ಥಿ ಹತ್ಯೆಗೀಡಾಗಿದ್ದ. ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ವರುಣ್‌ ರಾಜ್, ಅಕ್ಟೋಬರ್‌ 29ರಂದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್‌ ಅಂಡ್ರಾಡೆ (24) ಎಂಬ ಯುವಕನು ಜಿಮ್‌ ಪ್ರವೇಶಿಸಿದ್ದ. ಜಿಮ್‌ ಪ್ರವೇಶಿಸಿದವನೇ ವರುಣ್‌ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವರುಣ್‌ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್‌ ರಾಜ್ ಪುಚಾ ಮೃತಪಟ್ಟಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version