Site icon Vistara News

ಶಾಂಘೈ ಸಹಕಾರ ಸಂಘದ ಸಭೆ ವರ್ಚುಯಲ್ ರೂಪದಲ್ಲಿ ನಡೆಸಲು ಭಾರತ ಹಠಾತ್​​ ನಿರ್ಧಾರ

SCO Meeting

#image_title

ನವ ದೆಹಲಿ: ಜುಲೈ​ 4ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಲಿರುವ ಶಾಂಘೈ ಸಹಕಾರ ಸಂಘದ (ಎಸ್​ಸಿಒ) ಸಭೆಯನ್ನು ವರ್ಚುಯಲ್ ರೂಪದಲ್ಲಿ ನಡೆಸಲು ಭಾರತ ನಿರ್ಧರಿಸಿದೆ. ಈ ಬಾರಿ ಸಭೆಯ ಆತಿಥ್ಯವನ್ನು ಭಾರತ ಪಡೆದುಕೊಂಡಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೇತೃತ್ವದಲ್ಲಿ ನಡೆಯಲಿರುವ ಈ ಶೃಂಗ ಸಭೆಯನ್ನು ಆನ್​ಲೈನ್​ ಮೂಲಕ ನಡೆಸಲು ಸೋಮವಾರ ನಿರ್ಧರಿಸಲಾಗಿದೆ. ಆದರೆ ಅದಕ್ಕೆ ಸೂಕ್ತ ಕಾರಣವನ್ನು ಬಹಿರಂಗ ಮಾಡಿಲ್ಲ.

ಶೃಂಗಸಭೆಯನ್ನು ವರ್ಚುಯಲ್ ಸ್ವರೂಪದಲ್ಲಿ ನಡೆಸುವ ಆಯ್ಕೆಯ ವಿವಿಧ ಅಂಶಗಳನ್ನು ಪರಿಗಣಿಸಿ ಹಾಗೂ ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚಿಸಿದ ನಂತರ ಭಾರತ ಅಂತಿಮ ನಿರ್ಧಾರ ತೆಗೆದುಕೊಂಡಿದೆ ಎಂಬುದಾಗಿ ಈ ಸಹಕಾರ ಸಂಘದ ಸಭೆಯ ಕುರಿತು ಮಾಹಿತಿ ಇರುವವರು ಹೇಳಿದ್ದಾರೆ.

ಕಳೆದ ವರ್ಷ ಈ ಶೃಂಗಸಭೆಯು ಉಜ್ಬೇಕಿಸ್ತಾನದ ಸಮರ್​ಖಂಡ್​ನಲ್ಲಿ ಆಯೋಜನೆಗೊಂಡಿತ್ತು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಮತ್ತು ರಷ್ಯಾದ ಪ್ರಧಾನಿ ವ್ಲಾದಿಮಿರ್ ಪುಟಿನ್ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದರು. ಮುಂದಿನ ಸೆಪ್ಟೆಂಬರ್​ನಲ್ಲಿ ಭಾರತವು ಜಿ 20 ಶೃಂಗಸಭೆಗೆ ಆತಿಥ್ಯ ವಹಿಸಲಿದೆ. ಅದಕ್ಕಾಗಿ ಚೀನಾ ಅಧ್ಯಕ್ಷ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಇತರ ನಾಯಕರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಸಭೆಯು ವರ್ಚುಯಲ್​ ರೂಪದಲ್ಲಿ ನಡೆಯಲಿದೆ ಎನ್ನಲಾಗಿದೆ.

ಮೊದಲ ಬಾರಿಗೆ ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಎಸ್​ಸಿಒ ರಾಷ್ಟ್ರಗಳ ಮುಖ್ಯಸ್ಥರ 22ನೇ ಶೃಂಗಸಭೆ ಜುಲೈ 4ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ವರ್ಚುಯಲ್ ರೂಪದಲ್ಲಿ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ತಿಂಗಳ ಆರಂಭದಲ್ಲಿ ಗೋವಾದಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ಸಮಾವೇಶದಲ್ಲಿ ಭಾರತವು ಎಸ್​ಸಿಒ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರಿಗೆ ಆತಿಥ್ಯ ವಹಿಸಿತ್ತು.
ಮುಂದಿನ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಆಹ್ವಾನ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ : Vijayanagara News: ಜಿ-20 ಶೃಂಗಸಭೆಯ ಪೂರ್ವಸಿದ್ಧತಾ ಸಭೆ; ಸಂಸ್ಕೃತಿಯ ಅನಾವರಣಕ್ಕೆ ತೀರ್ಮಾನ

ಇದಲ್ಲದೆ, ಇರಾನ್, ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಷ್ಟ್ರಗಳಾಗಿ ಆಹ್ವಾನಿಸಲಾಗಿದೆ. ಸಂಪ್ರದಾಯದಂತೆ ತುರ್ಕಮೆನಿಸ್ತಾನ್​ ದೇಶಕ್ಕೂ ಆಹ್ವಾನ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಎಸ್​ಸಿಒ ಒಂದು ಪ್ರಭಾವಶಾಲಿ ಆರ್ಥಿಕ ಮತ್ತು ಭದ್ರತಾ ಸಹಕಾರ ಸಂಘವಾಗಿದೆ. ರಷ್ಯಾ, ಚೀನಾ, ಕಿರ್ಗಿಸ್ತಾನ, ಕಜಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷರು 2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ಈ ಸಹಕಾರ ಸಂಘವನ್ನು ಸ್ಥಾಪಿಸಿದ್ದರು. ಭಾರತ ಮತ್ತು ಪಾಕಿಸ್ತಾನ 2017 ರಲ್ಲಿ ಅದರ ಕಾಯಂ ಸದಸ್ಯ ರಾಷ್ಟ್ರಗಳಾದವು.

ಶೃಂಗಸಭೆಗೆ ಆರು ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳ ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿಶ್ವ ಸಂಸ್ಥೆ, ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ), ಸಿಐಎಸ್ (ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್), ಸಿಎಸ್​ಟಿಒ (ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ), ಇಎಇಯು (ಯುರೇಷಿಯನ್ ಎಕನಾಮಿಕ್ ಯೂನಿಯನ್) ಮತ್ತು ಸಿಐಸಿಎ ಈ ಸಭೆಯಲ್ಲಿ ಭಾಗವಹಿಸಲಿದೆ.

Exit mobile version