ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ವರ್ಷದಿಂದ ವರ್ಷಕ್ಕೆ ಹಣದುಬ್ಬರ ಜಾಸ್ತಿಯಾಗುತ್ತ, ಇದೀಗ ಶೇ.35.37ಕ್ಕೆ ಏರಿಕೆಯಾಗಿದೆ. ಇದು ಕಳೆದ 50 ವರ್ಷಗಳಲ್ಲೇ ಗರಿಷ್ಠ ಮಟ್ಟದ ಹಣದುಬ್ಬರವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಯ ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿ ಕಡಿತಕ್ಕೆ ಸಂಬಂಧಪಟ್ಟ ಷರತ್ತುಗಳನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಐಎಂಎಫ್ನಿಂದ ಹಣಕಾಸು ನೆರವು ಪಾಕಿಸ್ತಾನಕ್ಕೆ ಸಿಗುತ್ತಿಲ್ಲ. ಹೀಗಾಗಿ ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಆ ದೇಶದಲ್ಲಿ ಒಂದೇ ಸಮನೆ ಏರುತ್ತಲೇ ಇದೆ. ಒಂದು ತಿಂಗಳಿಂದ, ಮತ್ತೊಂದು ತಿಂಗಳಿಗೆ ಹಣದುಬ್ಬರ ಶೇ.3.72ರಷ್ಟು ಹೆಚ್ಚಳವಾಗುತ್ತಿದೆ. ಕಳೆದ ವರ್ಷ ಸರಾಸರಿ ಹಣದುಬ್ಬರ ಶೇ.27.26ರಷ್ಟಿತ್ತು. ಸದ್ಯ ದೇಶವು ಅತ್ಯಧಿಕ ಹಣದುಬ್ಬರದ ಸ್ಥಿತಿ (hyperinflation)ಯ ಬಾಗಿಲಲ್ಲಿ ನಿಂತಿದೆ ಎಂದು ಶನಿವಾರ ಪಾಕ್ ಸರ್ಕಾರ ಬಿಡುಗಡೆ ಮಾಡಿರುವ ಡೇಟಾದಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ ರೇಷನ್ ಕೇಂದ್ರಗಳಲ್ಲಿ ಮತ್ತು ಶ್ರೀಮಂತ ವರ್ಗದವರು ಹಮ್ಮಿಕೊಳ್ಳುವ ಝಕಾತ್ ವೇಳೆ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತಕ್ಕೆ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಹಣದುಬ್ಬರ ಶೇ.50ಕ್ಕಿಂತಲೂ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪರಿಸ್ಥಿತಿ ಸುಸ್ಥಿರವಾಗಿಲ್ಲ ಮತ್ತು ಹಲವು ವರ್ಷಗಳಿಂದಲೂ ಆರ್ಥಿಕತೆ ನಿರ್ವಹಣೆ ಸಮರ್ಪಕವಾಗಿ ಮಾಡದ ಕಾರಣ ಇವತ್ತು ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. 2022ರಲ್ಲಿ ಪಾಕಿಸ್ತಾನದಲ್ಲಿ ಭೀಕರ ಪ್ರಮಾಣದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗೇ, ಜಾಗತಿಕ ಇಂಧನ ಬಿಕ್ಕಟ್ಟು ಕೂಡ ಪಾಕ್ ಮೇಲೆ ಪ್ರಭಾವ ಬೀರಿದೆ. ಪಾಕಿಸ್ತಾನಕ್ಕೆ ಸಾಲ ತೀರಿಸಲು ಶತಕೋಟಿ ಡಾಲರ್ಗಳಷ್ಟು ಅಗತ್ಯವಿದೆ. ಆದರೆ ವಿದೇಶಿ ವಿನಿಮಯ ಕುಸಿಯುತ್ತಿದ್ದು, ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ.
ಇದನ್ನೂ ಓದಿ: ಹಂದಿ ಮಾಂಸದ ಸಾಸೇಜ್ ಎಂದು ಪಾಕಿಸ್ತಾನ ಮೂಲದ ವೈದ್ಯೆಯನ್ನು ನಿಂದಿಸಿದ ಆರೋಪ; ಭಾರತ ಮೂಲದ ವೈದ್ಯೆ ಅಮಾನತು
ಸದ್ಯ ಪಾಕಿಸ್ತಾನ ಸರ್ಕಾರವೂ ಕೈಚೆಲ್ಲಿದೆ. ಹೀಗಿರುವಾಗ ಅತ್ಯಂತ ಸಂಕಷ್ಟಕ್ಕೀಡಾಗಿರುವವರು ಪಾಕಿಸ್ತಾನದ ಬಡವರ್ಗದವರು. ಈವರೆಗೆ ರೇಷನ್ಗಾಗಿ ಉಂಟಾದ ನೂಕು ನುಗ್ಗಲು, ಕಾಲ್ತುಳಿತಕ್ಕೆ 26ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಈಗ ರಂಜಾನ್ ತಿಂಗಳಾಗಿದ್ದು, ರೇಷನ್ಗಾಗಿ ಪರದಾಡುವವರ ಸಂಖ್ಯೆಯೂ ಮಿತಿಮೀರಿದೆ. ಶುಕ್ರವಾರ ಕರಾಚಿಯ ಕಾರ್ಖಾನೆಯೊಂದರಲ್ಲಿ ರಂಜಾನ್ ನಿಮಿತ್ತ ರೇಷನ್ ಹಂಚಲಾಗುತ್ತಿತ್ತು. ಈ ವೇಳೆ ಕಾಲ್ತುಳಿತವಾಗಿ 12 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Pakistan Stampede: ಪಾಕಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ; ರೇಷನ್ ವಿತರಣೆ ವೇಳೆ ಕಾಲ್ತುಳಿತವಾಗಿ 11 ಜನರ ಸಾವು