ಹೇಗ್: ಕಳೆದ ಅಕ್ಟೋಬರ್‌ನಿಂದಲೂ ಗಾಜಾ ನಗರದ ಮೇಲೆ ಇಸ್ರೇಲ್ ಪ್ರತಿದಾಳಿ ಮಾಡುತ್ತಿದೆ. ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ. ಇದರ ಬೆನ್ನಲ್ಲೇ, ಯುದ್ಧಾಪರಾಧದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಹಾಗೂ ಮೂವರು ಹಮಾಸ್ ಉಗ್ರರ ವಿರುದ್ಧ ಇಂಟರ್‌ನ್ಯಾಷನಲ್ ಕ್ರಿಮಿನಲ್ ಕೋರ್ಟ್ (International Criminal Court) ಅರೆಸ್ಟ್ ವಾರಂಟ್ ಹೊರಡಿಸಲು ಮುಂದಾಗಿದೆ. ಯುದ್ಧಾಪರಾಧದ ಹಿನ್ನೆಲೆಯಲ್ಲಿ ಅರೆಸ್ಟ್ ವಾರಂಟ್ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.
ಬೆಂಜಮಿನ್ ನೆತನ್ಯಾಹು, ಇಸ್ರೇಲ್ ರಕ್ಷಣಾ ಸಚಿವ ಯೊಯಾವ್ ಗ್ಯಾಲಂಟ್, ಹಮಾಸ್ ಉಗ್ರ ಸಂಘಟನೆಯ ಯೆಹಿಯಾ ಸಿನ್ವರ್, ಮೊಹಮ್ಮದ್ ಡೈಫ್ ಹಾಗೂ ಇಸ್ಮಾಯಿಲ್ ಹನಿಯೇಹ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಬೇಕು ಎಂಬುದು ಜಾಗತಿಕ ಕೋರ್ಟ್‌ನ ಆದೇಶವಾಗಿದೆ. ಕಳೆದ ಏಳು ತಿಂಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನಲ್ಲಿ ನಡೆದ ಹಿಂಸಾಚಾರ, ಮಾನವ ಹಕ್ಕುಗಳ ದಮನ, ಪ್ರಾದೇಶಿಕ ಅಸ್ಥಿರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇವರ ವಿರುದ್ಧ ಅರೆಸ್ಟ್ ವಾರೆಟ್ ಹೊರಡಿಸಬೇಕು ಎಂಬುದಾಗಿ ಐಸಿಸಿ ಆದೇಶಿಸಿದೆ ಎಂದು ಕೋರ್ಟ್‌ನ ಮುಖ್ಯ ಪ್ರಾಸಿಕ್ಯೂಟರ್ ಆಗಿರುವ ಕರೀಮ್ ಖಾನ್ ಮಾಹಿತಿ ನೀಡಿದ್ದಾರೆ.
🚨🇮🇱 BREAKING: The International Criminal Court's prosecutor asks for ARREST WARRANTS against Israel's PM NETANYAHU and Defense Minister GALLANT. pic.twitter.com/UZLoKSWsPg
— Jackson Hinkle 🇺🇸 (@jacksonhinklle) May 20, 2024
ಕರೀಮ್ ಖಾನ್ ಅವರು ಅರೆಸ್ಟ್ ವಾರಂಟ್ ಕುರಿತು ಸಲ್ಲಿಸುವ ದಾಖಲೆಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನ್ಯಾಯಮೂರ್ತಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅರೆಸ್ಟ್ ವಾರಂಟ್ ಹೊರಡಿಸಿದರೂ ಬೆಂಜಮಿನ್ ನೆತನ್ಯಾಹು ಹಾಗೂ ಅವರ ರಕ್ಷಣಾ ಸಚಿವರ ಬಂಧನ ಆಗುವುದಿಲ್ಲ ಎಂದು ತಿಳಿದುಬಂದಿದೆ. ಇಂಟರ್‌ನ್ಯಾಷನಲ್ ಕ್ರಿಮಿನಲ್ ಕೋರ್ಟ್‌ನ ಸದಸ್ಯತ್ವವನ್ನು ಇಸ್ರೇಲ್ ಪಡೆದಿಲ್ಲ. ಹಾಗಾಗಿ, ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದರೂ ಬಂಧನ ಸಾಧ್ಯವಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್ ಪ್ರತಿದಾಳಿ ನಿಲ್ಲಿಸುತ್ತಿಲ್ಲ.
ಇದನ್ನೂ ಓದಿ: Al Jazeera: ಹಮಾಸ್ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್ ಬಂದ್ ಮಾಡಿದ ನೆತನ್ಯಾಹು!