ಇರಾನ್ನಲ್ಲಿ ಮಹ್ಸಾ ಅಮಿನಿ ಹತ್ಯೆಯಾದ ಬಳಿಕ ಆ ದೇಶದಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ನಡೆಯುತ್ತಲೇ ಇದೆ. ಅಲ್ಲಿನ ಅನೇಕಾನೇಕ ಮಹಿಳೆಯರು ಹಿಜಾಬ್ ವಿರೋಧಿಸಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೂದಲು ಕತ್ತರಿಸಿಕೊಂಡು ಪ್ರತಿರೋಧ ಒಡ್ಡುತ್ತಿದ್ದಾರೆ. ಆದರೂ ಇರಾನ್ ಸರ್ಕಾರ ಹಿಜಾಬ್ ನಿಷೇಧಂತಹ ಕ್ರಮಕ್ಕೆ ಮುಂದಾಗಿಲ್ಲ. ಹಿಜಾಬ್ ಧರಿಸದೆ ಇದ್ದರೆ ಜೈಲು ಶಿಕ್ಷೆ ವಿಧಿಸುವ ಕಾನೂನು ಇನ್ನೂ ಅಲ್ಲಿ ಹಾಗೇ ಇದೆ.
ಹೀಗಿರುವಾಗ ಇರಾನಿಯನ್ ಅಥ್ಲೀಟ್, ಪರ್ವತಾರೋಹಿ ಎಲ್ನಾಜ್ ರೆಕಾಬಿ ಅವರು ಅಕ್ಟೋಬರ್ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಹಿಜಾಬ್ ಧರಿಸದೆ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮ ಮುಗಿಸಿ ವಾಪಸ್ ತೆಹ್ರಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಅವರಿಗೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಹಿಜಾಬ್ ಕಳಚಿಟ್ಟು ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಎಲ್ನಾಜ್ ರೆಕಾಬಿ ನಿಜಕ್ಕೂ ಹೀರೋ ಎಂದು ಇರಾನಿಯನ್ ಪ್ರತಿಭಟನಾಕಾರರು ಶ್ಲಾಘಿಸಿದ್ದರು. ಆದರೆ ಇರಾನ್ನ ನಿಯಮ ಮುರಿದಿದ್ದಕ್ಕೆ ಅವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗಿತ್ತು.
ಆದರೆ ಕ್ರೀಡಾಪಟು ಎಲ್ನಾಜ್ಗೆ ಜೈಲು ಶಿಕ್ಷೆಯಾಗಿಲ್ಲ. ಬದಲಾಗಿ ಇರಾನ್ ಸರ್ಕಾರ ಅವರ ಮನೆಯನ್ನು ಧ್ವಂಸ ಮಾಡಿದೆ. ಅದರ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಮನೆಯನ್ನು ಎಲ್ನಾಜ್ ರೇಕಾಬಿ ಅಣ್ಣ ದಾವೂದ್ ಕಟ್ಟಿಸಿದ್ದರು. ಅವರೂ ಕೂಡ ಅಥ್ಲೀಟ್. ಮನೆ ಧ್ವಂಸ ಆಗುತ್ತಿದ್ದಾಗ ದಾವೂದ್ ಅಳುತ್ತಿರುವುದೂ ವಿಡಿಯೊದಲ್ಲಿ ಕಾಣಿಸುತ್ತದೆ.
ಎಲ್ನಾಜ್ ಮನೆ ಧ್ವಂಸಗೊಂಡಿದ್ದನ್ನು ಇರಾನ್ನ ತಹ್ಸ್ನಿಮ್ ನ್ಯೂಸ್ ಏಜೆನ್ಸಿಯೂ ದೃಢಪಡಿಸಿದೆ. ಆದರೆ ಅದರ ವರದಿ ಸಾರಾಂಶ ಬೇರೆ ತರದಲ್ಲಿದೆ. ಎಲ್ನಾಜ್ ಮನೆ ಅಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು. ಅನುಮತಿ ಇರಲಿಲ್ಲ. ಹಾಗಾಗಿ ಮನೆ ತೆರವುಗೊಳಿಸಲಾಗಿದೆ ಎಂದು ವರದಿ ಮಾಡಿದೆ.
ಅಂದು ಸಿಯೋಲ್ನಿಂದ ವಾಪಸ್ ತೆಹ್ರಾನ್ಗೆ ಬಂದಿಳಿದ ಎಲ್ನಾಜ್, ‘ನಾನು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾಗ, ಅರ್ಧದಲ್ಲೇ ತಲೆಗೆ ಕಟ್ಟಿದ್ದ ಸ್ಕಾರ್ಫ್ ಬಿದ್ದು ಹೋಗಿತ್ತು. ಮತ್ತೆ ಅದನ್ನು ಕಟ್ಟಿಕೊಳ್ಳಲಿಲ್ಲ. ಹೀಗಾಗಿ ಕ್ಷಮೆ ಕೇಳುತ್ತೇನೆ. ಹೆಣ್ಣುಮಕ್ಕಳು ಹಿಜಾಬ್ ಧರಿಸಬೇಕು’ ಎಂದು ಹೇಳಿದ್ದರು. ಇನ್ನು ವಿಮಾನ ನಿಲ್ದಾಣಕ್ಕೆ ಬಂದಾಗಲೂ ಅವರು ಹಿಜಾಬ್ ಧರಿಸಿರಲಿಲ್ಲ. ತಲೆ ಮೇಲೆ ಒಂದು ಕ್ಯಾಪ್ ಹಾಕಿ, ಅದರ ಮೇಲೆ ಜರ್ಕಿನ್ ಕ್ಯಾಪ್ ಹಾಕಿಕೊಂಡು ಬಂದಿದ್ದರು.
ಇದನ್ನೂ ಓದಿ: Iran Protest | ಇರಾನ್ನಲ್ಲಿ 2 ತಿಂಗಳಿಂದ ಹಿಜಾಬ್ ವಿರೋಧಿ ಪ್ರತಿಭಟನೆ; ಇಲ್ಲಿಯವರೆಗೆ ಮೃತಪಟ್ಟವರು 378 ಮಂದಿ