Site icon Vistara News

Iran Abolishes Morality Police | ಮಹ್ಸಾ ಅಮಿನಿ ಸಾವಿಗೆ ಸಿಕ್ಕಿತು ನ್ಯಾಯ, ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ರದ್ದು

Iran Abolishes Morality Police

ಟೆಹ್ರಾನ್‌: ಇರಾನ್‌ನಲ್ಲಿ ಮಹ್ಸಾ ಅಮಿನಿ ಸೇರಿ ನೂರಾರು ಜನರ ಸಾವಿಗೆ ಕೊನೆಗೂ ನ್ಯಾಯ ದೊರಕಿದೆ. ಹಿಜಾಬ್‌ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗೆ ಮಣಿದ ಇರಾನ್‌ ಸರ್ಕಾರವು ‘ನೈತಿಕ ಪೊಲೀಸ್‌ಗಿರಿ’ಯನ್ನು (Iran Abolishes Morality Police) ರದ್ದುಗೊಳಿಸಿದೆ. ಇನ್ನು ಮಹಿಳೆಯರು ಹಿಜಾಬ್‌ ಧರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರ ಪೊಲೀಸರಿಗೆ ಇಲ್ಲದಂತಾಗಿದೆ. ಇದು ಹೆಣ್ಣುಮಕ್ಕಳಿಗೆ ತುಸು ರಿಲೀಫ್‌ ನೀಡಿದಂತಾಗಿದೆ.

“ದೇಶದ ನ್ಯಾಯಾಂಗ ವ್ಯವಸ್ಥೆಗೂ ನೈತಿಕ ಪೊಲೀಸ್‌ಗಿರಿಗೂ ಇನ್ನು ಯಾವುದೇ ಸಂಬಂಧವಿಲ್ಲ. ಏಕೆಂದರೆ, ಇನ್ನುಮುಂದೆ ನೈತಿಕ ಪೊಲೀಸ್‌ಗಿರಿಯನ್ನೇ ನಾವು ರದ್ದುಗೊಳಿಸಿದ್ದೇವೆ” ಎಂದು ಇರಾನ್‌ ಅಟಾರ್ನಿ ಜನರಲ್‌ ಮೊಹಮ್ಮದ್‌ ಜಾಫರ್‌ ಮೊಂಟಾಜೆರಿ ತಿಳಿಸಿದ್ದಾರೆ. ಇದಾದ ಬಳಿಕ ಹೆಣ್ಣುಮಕ್ಕಳು ಸಂಭ್ರಮಾಚರಣೆ ಮಾಡಿದ್ದಾರೆ.

ಏನಿದು ಪ್ರಕರಣ?

ಇರಾನ್‌ನಲ್ಲಿ ಮಹ್ಸಾ ಅಮಿನಿ ಎಂಬ ೨೨ ವರ್ಷದ ಯುವತಿಯು ಸರಿಯಾಗಿ ಹಿಜಾಬ್‌ ಧರಿಸಿಲ್ಲ ಎಂಬ ಕಾರಣಕ್ಕಾಗಿ ನೈತಿಕ ಪೊಲೀಸರು ಕಳೆದ ಸೆಪ್ಟೆಂಬರ್‌ನಲ್ಲಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹ್ಸಾ ಅಮಿನಿ ಮೃತಪಟ್ಟಿದ್ದರು. ಇದರಿಂದಾಗಿ ಇರಾನ್‌ನಲ್ಲಿ ಆಕ್ರೋಶದ ಕಿಡಿ ಹೊತ್ತಿತ್ತು. ಸೆಪ್ಟೆಂಬರ್‌ ೧೬ರಿಂದ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಶುರುವಾದವು.

ಕೂದಲು ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದ್ದ ಮಹಿಳೆಯರು.

ಹೆಣ್ಣುಮಕ್ಕಳು ಹಿಜಾಬ್‌ ಸುಟ್ಟು, ಕೂದಲು ಕತ್ತರಿಸಿಕೊಂಡು ಆಕ್ರೋಶ ಪ್ರತಿಭಟನೆ ಆರಂಭಿಸಿದರು. ಬೀದಿ ಬೀದಿಯಲ್ಲಿ ನಡೆದ ಪ್ರತಿಭಟನೆಗಳು ಹಿಂಸಾರೂಪ ಪಡೆಯಿತು. ಪ್ರತಿಭಟನೆಯಲ್ಲಿಯೇ ೩೦೦ಕ್ಕೂ ಅಧಿಕ ಜನ ಮೃತಪಟ್ಟರು. ಇದು ಇರಾನ್‌ ಮೇಲೆ ಜಾಗತಿಕವಾಗಿ ಒತ್ತಡ ಹೇರಲು ಕಾರಣವಾಯಿತು. ಇಷ್ಟೆಲ್ಲ ಕಾರಣಗಳಿಂದಾಗಿ ಇರಾನ್‌ ಸರ್ಕಾರ ಈಗ ನೈತಿಕ ಪೊಲೀಸ್‌ಗಿರಿಯನ್ನು ರದ್ದುಗೊಳಿಸಿದೆ.

ಯಾರಿವರು ನೈತಿಕ ಪೊಲೀಸರು?

ಇರಾನ್‌ನಲ್ಲಿ ಏಳು ವರ್ಷ ದಾಟಿದ ಪ್ರತಿಯೊಬ್ಬ ಹೆಣ್ಣುಮಕ್ಕಳು ಹಿಜಾಬ್‌ ಧರಿಸಬೇಕು. ೧೯೭೯ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್‌ ಕ್ರಾಂತಿಯಾದ ಬಳಿಕ ಹೆಣ್ಣುಮಕ್ಕಳಿಗೆ ಇಂತಹ ನಿಯಮ ರೂಪಿಸಲಾಗಿದೆ. ಯಾವುದೇ ಮಹಿಳೆಯು ಹೊರಗೆ ಬರುವಾಗ ತಲೆ, ಕುತ್ತಿಗೆ, ಕೂದಲೂ ಕಾಣಿಸದ ಹಾಗೆ ಹಿಜಾಬ್‌ ಧರಿಸಿಯೇ ಹೊರಬರಬೇಕು ಎಂಬ ನಿಯಮವಿದೆ. ಈ ನಿಯಮಗಳನ್ನು ಅನುಷ್ಠಾನಗೊಳಿಸಲು ನೇಮಕಗೊಂಡವರೇ ನೈತಿಕ ಪೊಲೀಸರು. ಷರಿಯಾ ಕಾನೂನಿನ ಅನ್ವಯ ಹಿಜಾಬ್‌ ಧರಿಸದವರು, ಬುರ್ಖಾವನ್ನು ಸರಿಯಾಗಿ ಹಾಕಿಕೊಳ್ಳದವರು, ಮುಖ ಕಾಣಿಸುವಂತೆ ಬಟ್ಟೆ ಧರಿಸಿದವರಿಗೆ ಭಾರಿ ದಂಡ ವಿಧಿಸುವ, ಜೈಲಿಗೆ ಹಾಕುವ ಹಾಗೂ ದಿಗ್ಬಂಧನ ಕೇಂದ್ರಗಳಲ್ಲಿ ಕಿರುಕುಳ ನೀಡುವ ಅಧಿಕಾರಗಳು ಈ ನೈತಿಕ ಪೊಲೀಸರಿಗೆ ಇದ್ದವು.

ಇದನ್ನೂ ಓದಿ | Iran Protest | ಇರಾನ್​​ನಲ್ಲಿ 2 ತಿಂಗಳಿಂದ ಹಿಜಾಬ್​ ವಿರೋಧಿ ಪ್ರತಿಭಟನೆ; ಇಲ್ಲಿಯವರೆಗೆ ಮೃತಪಟ್ಟವರು 378 ಮಂದಿ

Exit mobile version