Site icon Vistara News

Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು?

Iran-israel War fear

ಇರಾನ್: ಇಸ್ರೇಲ್ (israel) ಮೇಲೆ ದಾಳಿ ನಡೆಸಲು ಇರಾನ್ (iran) ಸಜ್ಜಾಗಿದ್ದು, ಯಹೂದಿ ಬಹುಸಂಖ್ಯಾತರಿರುವ ರಾಷ್ಟ್ರವು ಇದಕ್ಕೆ ಪ್ರತಿ ದಾಳಿ ನಡೆಸಲು ಸಿದ್ಧವಾಗಿದೆ. ಇಸ್ರೇಲ್ ಈಗಾಗಲೇ ತನ್ನ ರಾಜಧಾನಿ ಟೆಲ್ ಅವಿವ್‌ನಲ್ಲಿ (tel aviv) ಮಿಲಿಟರಿ ನೆಲೆಗಳನ್ನು ಸ್ಥಾಪನೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಯುದ್ಧದ ಭೀತಿ (Iran-israel War Explainer) ವಿಶ್ವದಲ್ಲಿ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ.

ಇರಾನ್ ದಾಳಿ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕ (US) ತನ್ನ ರಾಷ್ಟ್ರದ ಪ್ರಜೆಗಳಿಗೆ ಪ್ರಯಾಣವನ್ನು ನಿರ್ಬಂಧಿಸಿದ್ದು, ಜೆರುಸಲೆಮ್‌ನಿಂದ (jerusalem) ಹೊರಗೆ ಹೋಗದಂತೆ ಸೂಚಿಸಿದೆ.

ಯಾಕೆ ಯುದ್ಧ ಪ್ರಾರಂಭ?

11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಇರಾನ್‌ ಪ್ರೇರಿತ ಹೆಜ್ಬೊಲ್ಲಾ ಉಗ್ರರು ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ಶುರು ಮಾಡಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ 13 ಮಂದಿ ಮೃತಪಟ್ಟಿದ್ದರು.
ಇಸ್ರೇಲ್ ನ ಕ್ರಮಕ್ಕೆ ಪ್ರತೀಕಾರವಾಗಿ ಶೀಘ್ರದಲ್ಲೇ ಇರಾನ್ ಇಸ್ರೇಲ್ ನ ಟೆಹ್ರಾನ್ ಮೇಲೆ ದಾಳಿ ಇರಾನ್‌ ಅಧಿಕೃತವಾಗಿ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

ಯುದ್ಧ ತಡೆಗೆ ಅಮೆರಿಕ ಪ್ರಯತ್ನ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾ, ಟರ್ಕಿ, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಇರಾನ್ ಗೆ ಇಸ್ರೇಲ್ ಮೇಲೆ ದಾಳಿ ನಡೆಸದಂತೆ ಪ್ರಯತ್ನಿಸಲು ಹೇಳಿದ್ದಾರೆ. ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾವ ದೇಶದ ಹಿತಾಸಕ್ತಿಗೂ ಇದು ಸರಿಯಲ್ಲ. ಹೀಗಾಗಿ ಇರಾನ್‌ನ ಮಿತ್ರ ರಾಷ್ಟ್ರಗಳು ಯುದ್ಧದ ಸನ್ನಿವೇಶವನ್ನು ತಡೆಯಲು ಒತ್ತಾಯಿಸಬೇಕು ಎಂದು ಹೇಳಿದರು.


ಅಮೆರಿಕವೇ ಹೊಣೆ ಎಂದ ಇರಾನ್

ಏಪ್ರಿಲ್ 1ರಂದು ಇರಾನ್ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಸಿರಿಯಾದ ಡಮಾಸ್ಕಸ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ನ ಕುಡ್ಸ್ ಫೋರ್ಸ್‌ನಲ್ಲಿ ಇಬ್ಬರು ಜನರಲ್‌ಗಳು ಮತ್ತು ಐದು ಇತರ ಅಧಿಕಾರಿಗಳನ್ನು ಕೊಲ್ಲಲಾಗಿತ್ತು.
ಈ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಬ್ದೊಲ್ಲಾಹಿಯಾನ್ ಅವರು, ಇಸ್ರೇಲ್ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇರಾನ್ ರಾಯಭಾರ ಕಚೇರಿಯ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕ ಹೊಣೆಯಾಗಿದೆ ಮತ್ತು ಜವಾಬ್ದಾರರಾಗಿರಬೇಕು ಎಂದು ಹೇಳಿದ್ದರು.

ಇರಾನ್‌ನ ರಾಯಭಾರ ಕಚೇರಿ ಮೇಲಿನ ಇಸ್ರೇಲ್ ದಾಳಿಯನ್ನು ಯುಎನ್ ಭದ್ರತಾ ಮಂಡಳಿಯು ಖಂಡಿಸಿದ್ದರೆ ಈ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದರು.

ದಾಳಿ ಎಲ್ಲಿ ನಡೆಯಬಹುದು?

ಇಸ್ರೇಲ್‌ನ ವೈಮಾನಿಕ ದಾಳಿಯ ಅನಂತರ ಇರಾನ್ ಇಸ್ರೇಲ್‌ನೊಳಗಿನ ಕೆಲವು ನಿರ್ದಿಷ್ಟ ಸ್ಥಳಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಡ್ರೋನ್‌ಗಳನ್ನು ಬಳಸಿಕೊಂಡು ದಾಳಿಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಯುಎಸ್ ಗುಪ್ತಚರ ವಿಭಾಗ ಬಹಿರಂಗಪಡಿಸಿದೆ.

ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಸೇನಾ ಪ್ರಧಾನ ಕಚೇರಿ ಕಿರಿಯಾವನ್ನು ಗುರಿಯಾಗಿಸಲು ಇರಾನ್ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಯುಎಸ್ ಗುಪ್ತಚರ ಮಾಹಿತಿ ತಿಳಿಸಿದೆ. ಇದಲ್ಲದೇ ಮಧ್ಯ ಇಸ್ರೇಲ್‌ನ ಪಾಲ್ಮಾಚಿಮ್ ಅಥವಾ ಉತ್ತರದ ಮೆರಾನ್‌ನಲ್ಲಿರುವ ವಾಯು ನೆಲೆಗಳು, ನೆಸೆಟ್ (ಸಂಸತ್ತು೦ ಮತ್ತು ಜೆರುಸಲೆಮ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿ ಮೇಲೆ ದಾಳಿಯಾಗುವ ಸಾಧ್ಯತೆ ಇದೆ.

ದಕ್ಷಿಣ ಅಥವಾ ಉತ್ತರ ಇಸ್ರೇಲ್ ಮೇಲೆ ಇರಾನ್‌ನಿಂದ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸಿರಿಯಾದಿಂದ ಇಸ್ರೇಲ್ ಸ್ವಾಧೀನಪಡಿಸಿಕೊಂಡ ವಿವಾದಿತ ಪ್ರದೇಶವಾದ ಗೋಲಾನ್‌ನಲ್ಲಿ ಅಥವಾ ಗಾಜಾದಲ್ಲಿ ಇರಾನ್ ದಾಳಿಯನ್ನು ಸಿದ್ಧಪಡಿಸುತ್ತಿದೆ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

ಇರಾನ್ ಯುದ್ಧ ತಯಾರಿ ನಡೆಸುತ್ತಿರುವ ಬಗ್ಗೆ ಇಸ್ರೇಲ್ ಪ್ರತಿಕ್ರಿಯೆಯನ್ನು ಆಧರಿಸಿ ದಾಳಿ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ ಇದೆ ಎಂದು ಗುಪ್ತಚರ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಹಮಾಸ್, ಹೆಜ್ಬುಲ್ಲಾ, ಕತೀಬ್ ಹೆಜ್ಬುಲ್ಲಾ, ಹೌತಿಗಳು ಅಥವಾ ಬದ್ರ್ ಸಂಘಟನೆಗಳು ಗಡಿಯಲ್ಲಿ ದಾಳಿ ನಡೆಸಬಹುದು. ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಇಸ್ರೇಲ್ ಅನ್ನು ಗುರಿಯಾಗಿಸಲು ಬಳಸಬಹುದಾದ ಕ್ಷಿಪಣಿಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಆದರೂ ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧವನ್ನು ಮಾಡಲು ಹಿಜ್ಬುಲ್ಲಾ ಹಿಂಜರಿಯುತ್ತಿದೆ ಎನ್ನಲಾಗಿದೆ.


ಇಸ್ರೇಲ್‌ಗೆ ಅಮೆರಿಕ ಬೆಂಬಲ

ಇಸ್ರೇಲ್ ವಿರುದ್ಧ ಇರಾನ್ ದಾಳಿಯ ಸಾಧ್ಯತೆಯು ಬಗ್ಗೆ ವಿಶ್ವವೇ ಎಚ್ಚೆತ್ತುಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಯುದ್ಧ ತಡೆಯಲು ಇತರ ದೇಶಗಳಿಂದ ಸಹಾಯವನ್ನು ಕೋರುತ್ತಿದೆ ಮತ್ತು ಇಸ್ರೇಲ್ ಗೆ ಬೆಂಬಲ ನೀಡುವ ಪ್ರತಿಜ್ಞೆಯನ್ನೂ ಮಾಡಿದೆ.

ಈ ಕುರಿತು ಮಾತನಾಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್, ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದೆ. ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೇಳಿದಂತೆ, ಇರಾನ್ ಮತ್ತು ಅದರ ಪ್ರಾಕ್ಸಿಗಳಿಂದ ಈ ಬೆದರಿಕೆಗಳ ವಿರುದ್ಧ ಇಸ್ರೇಲ್‌ನ ಭದ್ರತೆಗೆ ನಮ್ಮ ಬದ್ಧತೆ ಇದೆ. ಇಸ್ರೇಲ್‌ ಅನ್ನು ರಕ್ಷಿಸಲು ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಯುದ್ಧ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿ, ಇರಾನ್ ತನ್ನ ಪ್ರದೇಶದಿಂದ ದಾಳಿ ಮಾಡಿದರೆ, ಇಸ್ರೇಲ್ ಪ್ರತಿಕ್ರಿಯಿಸುತ್ತದೆ ಮತ್ತು ಇರಾನ್‌ ಮೇಲೆ ದಾಳಿ ನಡೆಸುತ್ತದೆ ಎಂದು ಹೇಳಿದ್ದಾರೆ.

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಚೀನಾದ ವಾಂಗ್ ಯಿ ಅವರೊಂದಿಗೆ ಮಾತನಾಡಿದ್ದು, ಇರಾನ್‌ ಗೆ ಯುದ್ಧ ಮಾಡದಂತೆ ಸೂಚಿಸಲು ಒತ್ತಾಯಿಸಿದ್ದಾರೆ. ರಷ್ಯಾ, ಜರ್ಮನಿ ಮತ್ತು ಬ್ರಿಟನ್ ಕೂಡ ಇರಾನ್ ಮತ್ತು ಇಸ್ರೇಲ್ ಸಂಯಮ ತೋರಿಸುವಂತೆ ಒತ್ತಾಯಿಸಿದೆ.

ಪ್ರಜೆಗಳಿಗೆ ನಾನಾ ದೇಶಗಳ ಎಚ್ಚರಿಕೆ

ಇಸ್ರೇಲ್‌ನಲ್ಲಿನ ತನ್ನ ಉದ್ಯೋಗಿಗಳಿಗೆ ಅಮೆರಿಕ ಪ್ರಯಾಣವನ್ನು ನಿರ್ಬಂಧಿಸಿದೆ. ಜೆರುಸಲೆಮ್, ಟೆಲ್ ಅವಿವ್ ಅಥವಾ ಬೀರ್ ಶೆವಾ ಪ್ರದೇಶಗಳ ಹೊರಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದೆ.
ಯುಕೆ ವಿದೇಶಾಂಗ ಕಚೇರಿಯು ಇಸ್ರೇಲ್‌ಗೆ ಪ್ರಯಾಣ ನಡೆಸದಂತೆ ನಾಗರಿಕರಿಗೆ ಸೂಚಿಸಿದೆ. ಇಸ್ರೇಲ್ ಮೇಲಿನ ದಾಳಿ ಸಾಧ್ಯತೆಯನ್ನು ಇರಾನ್‌ ಹೆಚ್ಚಿಸಿದೆ ಎಂದು ಹೇಳಿದೆ.

ಯುದ್ಧದ ತಯಾರಿಯಲ್ಲಿ ಇದ್ದರೂ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್‌ ಗೆ ಎಚ್ಚರಿಕೆ ನೀಡಲು ಯುದ್ಧದ ತಯಾರಿ ನಡೆಸುತ್ತಿದೆ. ಇಸ್ರೇಲ್‌ನ ಮಿಲಿಟರಿಯನ್ನು ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಅದರ ದೌರ್ಬಲ್ಯಗಳನ್ನು ಪರಿಶೀಲಿಸುತ್ತಿದೆ ಎಂಬ ವಿಶ್ಲೇಷಣೆಯೂ ಕೇಳಿ ಬಂದಿದೆ.

ಭಾರತದ ಪಾತ್ರ ಏನು?

ಭಾರತದ ಬೆಂಬಲ ಯಾವಾಗಲೂ ಇಸ್ರೇಲ್‌ ಕಡೆಗೇ ಇರುತ್ತದೆ. ಹಾಗಂತ ಇರಾನ್‌ ಕೂಡ ಭಾರತದ ವೈರಿ ದೇಶ ಏನಲ್ಲ. ಹಾಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಇಸ್ರೇಲ್‌-ಇರಾನ್‌ ಯುದ್ಧ ತಡೆಯಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದೆ. ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ತೈಲ ದರದ ಮೇಲ ಪರಿಣಾಮ ಏನು?

ಒಂದೊಮ್ಮೆ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ಸ್ಫೋಟಗೊಂಡರೆ ಇದರ ಮೊದಲ ಪರಿಣಾಮ ಬೀರುವುದು ತೈಲ ದರದ ಮೇಲೆ. ವಿಶ್ವದಲ್ಲಿ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ತೈಲ ಪೂರೈಕೆ ಜಾಲ ಏರುಪೇರಾಗುತ್ತದೆ. ಅದರಲ್ಲೂ ಇರಾನ್‌ ತೈಲ ಪೂರೈಸುವ ಪ್ರಮುಖ ರಾಷ್ಟ್ರ ಆಗಿರುವುದರಿಂದ, ಯುದ್ಧ ಸಂಭವಿಸಿದರೆ ತೈಲ ದರ ಏರಿಕೆ ಆಗುವ ಅಪಾಯವಿದೆ.

Exit mobile version