Site icon Vistara News

Iran Woman: ವಸ್ತ್ರ ಸಂಹಿತೆ ಉಲ್ಲಂಘನೆ, ಇರಾನ್‌ನಲ್ಲಿ ಹೋರಾಟಗಾರ್ತಿಗೆ 74 ಚಾಟಿ ಏಟು!

Iran Woman whipped 74 times for not following dress code

ಟೆಹ್ರಾನ್: ವಸ್ತ್ರ ಸಂಹಿತೆ ಉಲ್ಲಂಘನೆ (Dress Code) ಮತ್ತು ಸಾರ್ವಜನಿಕವಾಗಿ ನೈತಿಕತೆಯನ್ನು ಕಡೆಗಣಿಸಿದ್ದಕ್ಕಾಗಿ(Violating Public Morals) ಮಹಿಳೆಯೊಬ್ಬಳಿಗೆ ಇರಾನ್ ಅಧಿಕಾರಿಗಳು 74 ಚಾಟಿ ಏಟಿನ ಶಿಕ್ಷೆ (Irani Woman wihpped) ನೀಡಿದ್ದಾರೆ ಎಂದು ನ್ಯಾಯ ಇಲಾಖೆಯು ಹೇಳಿದೆ. ಶಿಕ್ಷೆಗೆ ಗುರಿಯಾದ ಮಹಿಳೆಯು ಸಾರ್ವಜನಿಕವಾಗಿ ತಮ್ಮ ಹಣೆಯನ್ನು ಪ್ರದರ್ಶನ ಮಾಡಿದ್ದು ಈ ಶಿಕ್ಷೆಗೆ ಕಾರಣವಾಗಿದೆ. ಆರೋಪಿ ರೋಯಾ ಹೆಶ್ಮತಿ ಅವರು ಟೆಹ್ರಾನ್‌ನ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಹಣೆಯನ್ನು ಪ್ರದರ್ಶನ ಮಾಡುವ ಮೂಲಕ ಅಪರಾಧಕ್ಕೆ ಪ್ರೋತ್ಸಾಹಿಸಿದ್ದಾರೆ ಎಂದು ನ್ಯಾಯ ಇಲಾಖೆಯ ಮಿಜಾನ್ ಸೈಟ್ ಶನಿವಾರ ವರದಿ ಮಾಡಿದೆ. ರೋಯಾ ಹೆಶ್ಮತಿ ಅವರು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ರಂಗಭೂಮಿ ಕಲಾವಿದೆ ಕೂಡ ಹೌದು. ಇವರು ಇರಾನ್‌ನಲ್ಲಿ ಹಿಜಾಬ್ ಕಡ್ಡಾಯ ಮಾಡಿದ್ದನ್ನು ವಿರೋಧಿಸುವ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಸಾರ್ವಜನಿಕವಾಗಿ ನೈತಿಕತೆಯ ಕಡೆಗಣನೆ ಮತ್ತು ಕಾನೂನು ಉಲ್ಲಂಘಿಸಿದ ಮಹಿಳೆಗೆ 74 ಚಾಟಿ ಹೊಡೆತಗಳನ್ನು ದಂಡವಾಗಿ ಕಾನೂನು ಮತ್ತು ಷರಿಯಾ ಪ್ರಕಾರವಾಗಿ ನೀಡಲಾಗಿದೆ ಮಿಜಾನ್ ಹೇಳಿದೆ. 1979 ಇಸ್ಲಾಮಿಕ್ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಎಲ್ಲ ಮಹಿಳೆಯರು ತಮ್ಮ ಕುತ್ತಿಗೆ ಮತ್ತು ಹಣೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವ ನಿಯಮವನ್ನು ಜಾರಿಗೆ ತರಲಾಗಿದೆ.

2022ರ ಕೊನೆಯಲ್ಲಿ ಪ್ರಾರಂಭವಾದ ಸರ್ಕಾರದ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ, ನಿಯಮ ಉಲ್ಲಂಘನೆಗಳು ಉಲ್ಬಣಗೊಂಡ ನಂತರ ಅಧಿಕಾರಿಗಳು ನಿಯಮಗಳನ್ನು ಧಿಕ್ಕರಿಸುವವರ ಮೇಲೆ ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವ ಘಟನೆಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿವೆ.

ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾಗಿದ್ದ 22 ವರ್ಷದ ಇರಾನಿನ ಕುರ್ದ್ ಮಹ್ಸಾ ಆಮಿನಿಯು ಪೊಲೀಸ್ ಕಸ್ಟಡಿಯಲ್ಲಿ 2022ರ ಸೆಪ್ಟೆಂಬರ್‌ನಲ್ಲಿ ಮೃತಳಾಗಿದ್ದಳು. ಈ ಘಟನೆಯು ಇರಾನ್‌ನಲ್ಲಿ ಮಹಿಳಾ ಪ್ರತಿಭಟನೆಗೆ ಕಾರಣವಾಯಿತು ಮತ್ತು ಅಂದಿನಿಂದಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆ.

ಪ್ರತಿಭಟನೆಯ ಸಮಯದಲ್ಲಿ ಮಹಿಳಾ ಪ್ರತಿಭಟನಾಕಾರರು ತಮ್ಮ ತಲೆಯ ಸ್ಕಾರ್ಫ್‌ಗಳನ್ನು ಕಿತ್ತೆಸೆದರು. ಅಲ್ಲದೇ ಅವುಗಳನ್ನು ಸುಟ್ಟು ಹಾಕಿದರು. ಮತ್ತೆ ಕೆಲವುರ ತಮ್ಮ ಕೂದಲುಗಳನ್ನು ಕತ್ತರಿಸಿದರು. ಮತ್ತಷ್ಟು ಮಹಿಳೆಯರು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಲು ಆರಂಭಿಸಿದರು. ಪರಿಣಾಮ ಅಂಥವರ ವಿರುದ್ಧ ಸಾಕಷ್ಟು ಕಠಿಣ ಕ್ರಮಗಳನ್ನು ಅಲ್ಲಿನ ಸರ್ಕಾರವು ಕೈಗೊಳ್ಳಲಾರಂಭಿಸಿತು.

ಈಗ 74 ಚಾಟಿ ಏಟು ಶಿಕ್ಷೆಗೆ ಗುರಿಯಾಗಿರುವ ಮಹಿಳೆಯು ಕುರ್ದ್ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ ಎಂದು ಕುರ್ದೀಶ್ ಕೇಂದ್ರೀತ ಹಕ್ಕುಗಳ ಹೋರಾಟ ಗ್ರೂಪ್ ಹೆಂಗ್ವಾ ಹೇಳಿದೆ. ತಲೆ ವಸ್ತ್ರ ಧರಿಸದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದಳು ಎಂಬ ಕಾರಣಕ್ಕೆ 33 ವರ್ಷದ ಮಹಿಳೆಯನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು ಎಂದು ವಕೀಲ ಮಾಜಿಯಾರ್ ತಾತೈ ಅವರು ಸುಧಾರಣವಾದಿ ಪತ್ರಿಕೆ ಶಾರ್ಗ್ ದಿನಪತ್ರಿಕೆಗೆ ತಿಳಿಸಿದ್ದಾರೆ.

“ಸಾರ್ವಜನಿಕವಾಗಿ ಮುಸ್ಲಿಮ್ ಮುಸುಕು ಧರಿಸದಿದ್ದಕ್ಕಾಗಿ 12 ಮಿಲಿಯನ್ ರಿಯಾಲ್‌ಗಳ (ಸುಮಾರು 25 ಡಾಲರ್) ದಂಡವನ್ನು ಪಾವತಿಸಲು ಕೂಡ ಸೂಚಿಸಲಾಗಿದೆ ಎಂದು ತಾತೈ ಅವರು ಹೇಳಿದ್ದಾರೆ. ವಸ್ತ್ರ ಸಂಹಿತೆ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Iran Abolishes Morality Police | ಮಹ್ಸಾ ಅಮಿನಿ ಸಾವಿಗೆ ಸಿಕ್ಕಿತು ನ್ಯಾಯ, ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ರದ್ದು

Exit mobile version