Site icon Vistara News

Israel Strike: ಒಂದೇ ದಾಳಿಯಲ್ಲಿ 7 ಇರಾನ್‌ ಕಮಾಂಡರ್‌ಗಳನ್ನು ಮುಗಿಸಿದ ಇಸ್ರೇಲ್;‌ ಹಿಜ್ಬುಲ್ಲಾ ನಾಯಕ ಜಹೇದಿ ಹತ

mohammad reza zahedi israel strike

ಟೆಲ್‌ ಅವಿವ್:‌ ಸಿರಿಯನ್ ರಾಜಧಾನಿ ಡಮಾಸ್ಕಸ್‌ನಲ್ಲಿರುವ (Syrian capital Damascus) ಇರಾನ್ ಕಾನ್ಸುಲೇಟ್ ಕಟ್ಟಡದ (Iran Consulate) ಮೇಲೆ ಇಸ್ರೇಲ್‌ ವಾಯುದಾಳಿ (Israel Strike) ನಡೆಸಿದ್ದು, ಇರಾನಿನ 7 ಉಗ್ರಗಾಮಿ ಕಮಾಂಡರ್‌ಗಳು ಹತರಾಗಿದ್ದಾರೆ. ದಾಳಿಯಲ್ಲಿ ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC)ನ ಏಳು ಅಧಿಕಾರಿಗಳು ಸತ್ತಿದ್ದಾರೆ. ಅವರಲ್ಲಿ ಕುದ್ಸ್ ಫೋರ್ಸ್‌ನ (Quds Force) ಹಿರಿಯ ಕಮಾಂಡರ್ ಬ್ರಿಗ್-ಜನರಲ್ ಮೊಹಮ್ಮದ್ ರೆಜಾ ಜಹೇದಿ (Mohammad Reza Zahedi) ಮತ್ತು ಉಪನಾಯಕ ಬ್ರಿಗ್-ಜನರಲ್ ಮೊಹಮ್ಮದ್ ಹಾದಿ ಹಾಜಿ-ರಹೀಮಿ ಕೂಡ ಸೇರಿದ್ದಾರೆ.

ಮೊಹಮ್ಮದ್ ರೆಜಾ ಜಹೇದಿ, ಕುದ್ಸ್ ಪಡೆಯ ಹಿರಿಯ ಕಮಾಂಡರ್ ಆಗಿದ್ದಾತ. ಕುದ್ಸ್‌ ಕಮಾಂಡರ್-ಇನ್-ಚೀಫ್ ಖಾಸೆಮ್ ಸೊಲೈಮಾನಿ ಅವರ ನಿಕಟ ಸ್ನೇಹಿತ ಮತ್ತು ಹೆಜ್ಬುಲ್ಲಾಗೆ ಸಂಪರ್ಕಾಧಿಕಾರಿಯಾಗಿ ನೇಮಕಗೊಂಡಿದ್ದನು. 1998ರಲ್ಲಿ ಖಾಸೀಮ್ ಸೊಲೈಮಾನಿ ಜಹೇದಿಯನ್ನು ಕುದ್ಸ್‌ ಫೋರ್ಸ್‌ನ ಲೆಬನಾನ್ ಕಾರ್ಪ್ಸ್‌ನ ಮುಖ್ಯಸ್ಥರನ್ನಾಗಿ ನೇಮಿಸಿದ್ದ. ಹೊಸ ಪಾತ್ರದಲ್ಲಿ ಜಹೇದಿ, ಹೆಜ್ಬುಲ್ಲಾ ಉಗ್ರಗಾಮಿಗಳಿಗೆ ತಾಂತ್ರಿಕ ಮತ್ತು ಮಿಲಿಟರಿ ತರಬೇತಿಯನ್ನು ನೀಡಿದ್ದ.

ಕುದ್ಸ್‌ ಪಡೆಯು IRGCಯ ಒಂದು ಭಾಗವಾಗಿದೆ. IRGC ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ನಂತರ ಹೊಸ ಇಸ್ಲಾಮಿಕ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ಕ್ರೋಢೀಕರಿಸಲು ಸ್ಥಾಪಿಸಲಾಯಿತು. ಕುದ್ಸ್ ಪಡೆಗಳು ಐಆರ್‌ಜಿಸಿಯೊಳಗಿನ ವಿಶೇಷ ಘಟಕವಾಗಿದ್ದು, ಅಸಾಂಪ್ರದಾಯಿಕ ಯುದ್ಧ‌, ಗೆರಿಲ್ಲಾ ಯುದ್ಧಗಳನ್ನು ನಡೆಸುತ್ತಾರೆ. ವಿಶೇಷವಾಗಿ ಪ್ರಾಕ್ಸಿ ಗುಂಪುಗಳನ್ನು ಬೆಂಬಲಿಸುವಲ್ಲಿ ಮತ್ತು ವಿದೇಶದಲ್ಲಿ ಗುಪ್ತಚರ ಚಟುವಟಿಕೆಗಳನ್ನು ನಡೆಸುವುದರಲ್ಲಿ ಪರಿಣಿತರು.

ಜಹೇದಿ ಈ ಪ್ರಾಕ್ಸಿ ಗುಂಪುಗಳ ನೇತೃತ್ವ ವಹಿಸಿದ್ದು, IRGC ಕಮಾಂಡರ್ ಆಗಿದ್ದ. ಹೆಚ್ಚಾಗಿ ಲೆಬನಾನ್ ಮತ್ತು ಸಿರಿಯಾದಲ್ಲಿ ಕಾರ್ಯಾಚರಿಸಿದ್ದ. ಈತ ಇಸ್ರೇಲ್‌ ದಾಳಿಯಲ್ಲಿ, ಸಿರಿಯಾದ ನೆಲದಲ್ಲಿ ಕೊಲ್ಲಲ್ಪಟ್ಟ ಮೊದಲ ಇರಾನ್‌ ಹಿರಿಯ ನಾಯಕನಾಗಿದ್ದಾನೆ. 2000ರ ದಶಕದ ಅಂತ್ಯದಿಂದ 2010ರ ದಶಕದ ಅಂತ್ಯದವರೆಗೆ ಸಿರಿಯಾ ಮತ್ತು ಲೆಬನಾನ್‌ನಲ್ಲಿ ಜಹೇದಿ ಮುಖ್ಯ ಕುದ್ಸ್‌ ಫೋರ್ಸ್ ಅನ್ನು ಮುನ್ನಡೆಸಿದ್ದ.

ಈತ ಸಿರಿಯನ್ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಸಿರಿಯದ ಅಧ್ಯಕ್ಷರಾದ ಬಶರ್-ಅಲ್-ಅಸ್ಸಾದ್ ಅವರಿಗೆ ನಿಕಟನಾಗಿದ್ದ. ಭಿನ್ನಮತೀಯರ ಪ್ರತಿಭಟನೆಗಳನ್ನು ತಗ್ಗಿಸಲು ಸಹಾಯ ಮಾಡಿದ್ದ. ಅಸ್ಸಾದ್ ವಿರೋಧಿ ದಂಗೆಯನ್ನು ಹತ್ತಿಕ್ಕಲು ಸಿರಿಯಾಕ್ಕೆ ಕಳುಹಿಸಿದ ಮೊದಲ IRGC ಕಮಾಂಡರ್‌ಗಳಲ್ಲಿ ಈತನೂ ಒಬ್ಬ.

60ರ ದಶಕದಲ್ಲಿ ಇಸ್ಫಹಾನ್‌ನಲ್ಲಿ ಜನಿಸಿದ ಜಹೇದಿ, ಇಸ್ಲಾಮಿಕ್ ಕ್ರಾಂತಿಯ ಒಂದು ವರ್ಷದ ನಂತರ IRGCಗೆ ಸೇರಿದ. 2005ರಿಂದ 2006ರವರೆಗೆ IRGCಯ ವಾಯುಪಡೆಯನ್ನು ಮತ್ತು 2006ರಿಂದ 2008ರವರೆಗೆ ಭೂದಳವನ್ನು ಮುನ್ನಡೆಸಿದ. ಇರಾನ್- ಇರಾಕ್ ಯುದ್ಧದಲ್ಲಿ ಹೋರಾಡಿ ಮಿಲಿಟರಿ ಪರಿಣತಿಯನ್ನು ಪಡೆದು ಮೇಲಿನ ಸ್ಥಾನಗಳಿಗೆ ಏರಿದ್ದ.

ಆತನ ಹತ್ಯೆಯನ್ನು ಹಿಜ್ಬುಲ್ಲಾ ಖಂಡಿಸಿದ್ದು, ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ. “ನಮ್ಮ ನಾಯಕರನ್ನು ಕೊಲ್ಲುವ ಮೂಲಕ ಜನರ ಪ್ರತಿರೋಧದ ಘರ್ಜನೆಯ ಅಲೆಯನ್ನು ತಡೆಯಲು ಸಾಧ್ಯವಿಲ್ಲ” ಎಂದಿದೆ.

ಆತ IRGCಯಲ್ಲಿ ಸುಮಾರು 44 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ. IRGCಯಲ್ಲಿದ್ದ ಸಮಯದಲ್ಲಿ ಆತನನ್ನು ಅಮೆರಿಕ ನಿರ್ಬಂಧಿತ ಉಗ್ರರ ಪಟ್ಟಿಯಲ್ಲಿ ಸೇರಿಸಿತ್ತು. ವಿಶ್ವಸಂಸ್ಥೆ ಕೂಡ ನಿಷೇಧಿಸಿತ್ತು. ಆಸ್ಟ್ರೇಲಿಯಾ, ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್ ಕೂಡ ಇದನ್ನು ಅನುಮೋದಿಸಿದ್ದವು.

ಇದನ್ನೂ ಓದಿ: Indian Navy: ಇರಾನ್‌ ಹಡಗು, 23 ಪಾಕಿಸ್ತಾನಿಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ ಭಾರತೀಯ ನೌಕಾಪಡೆ

Exit mobile version