ಪ್ಯಾರಿಸ್ನ ಚಾರ್ಲ್ಸ್ ಡಿ ಗೌಲ್ ಏರ್ಪೋರ್ಟ್ನಲ್ಲೇ 18 ವರ್ಷಗಳ ಕಾಲ ವಾಸವಾಗಿದ್ದು, ‘ದಿ ಟರ್ಮಿನಲ್’ ಎಂಬ ಹಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಸ್ಪೂರ್ತಿಯಾಗಿದ್ದ ಇರಾನ್ ಮೂಲದ ಮೆಹ್ರಾನ್ ಕರಿಮಿ ನಾಸ್ಸೆರಿ (77) ನಿಧನರಾಗಿದ್ದಾರೆ. ಮೂಲತಃ ಇರಾನ್ನವಾದ ನಾಸ್ಸೆರಿ 1988ರಿಂದ 2006ರವರೆಗೆ ಚಾರ್ಲ್ಸ್ ಡಿ ಗೌಲ್ ಏರ್ಪೋರ್ಟ್ನ ಟರ್ಮಿನಲ್ 1ರಲ್ಲಿಯೇ ವಾಸವಾಗಿದ್ದರು. ಅಲ್ಲೇ ಕುರ್ಚಿಗಳ ಮೇಲೆ ಕುಳಿತು, ಬೆಂಚ್ ಮೇಲೆ ಮಲಗುತ್ತಿದ್ದರು. ಪುಸ್ತಕ ಓದುತ್ತಿದ್ದರು, ಅದರಲ್ಲೂ ಎಕನಾಮಿಕ್ಸ್ ಪುಸ್ತಕಗಳನ್ನೇ ಅಧ್ಯಯನ ಮಾಡುತ್ತಿದ್ದರು. ಇದೇ ಕಾರಣಕ್ಕೆ ಜಗತ್ತಿನ ಗಮನಸೆಳೆದಿದ್ದರು. ಅದೇ ಹೊತ್ತಲ್ಲಿ ಅಮೆರಿಕದ ಖ್ಯಾತ ಚಿತ್ರನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಾಸ್ಸೆರಿ ಕತೆಯನ್ನಾಧರಿಸಿ ‘ದಿ ಟರ್ಮಿನಲ್’ ಎಂಬ ಸಿನಿಮಾವನ್ನೇ ಮಾಡಿದ್ದರು. 2004ರಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕ ಮೆಹ್ರಾನ್ ಕರಿಮಿ ನಾಸ್ಸೆರಿ ಇನ್ನಷ್ಟು ಫೇಮಸ್ ಆಗಿದ್ದರು.
2006ರಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬಳಿಕ ಸ್ವಲ್ಪ ವರ್ಷ ಅವರು ನರ್ಸಿಂಗ್ ಹೋಮ್ನಲ್ಲಿ ಇದ್ದರು. ಆದರೂ ಈ ಏರ್ಪೋರ್ಟ್ ನಂಟು ಬಿಟ್ಟಿರಲಿಲ್ಲ. ಶನಿವಾರ (ನ.12) ಕೂಡ ಮೆಹ್ರಾನ್ ಕರಿಮಿ ಅವರು ಚಾರ್ಲ್ಸ್ ಡಿ ಗೌಲ್ ಏರ್ಪೋರ್ಟ್ನ ಟರ್ಮಿನಲ್ 2ಎಫ್ನಲ್ಲಿ ಇದ್ದರು. ಮಧ್ಯಾಹ್ನ ಹೊತ್ತಿಗೆ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಏರ್ಪೋರ್ಟ್ ವೈದ್ಯಕೀಯ ತಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿತು. ಪೊಲೀಸರು ಅಲ್ಲಿಗೆ ಧಾವಿಸಿದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮೆಹ್ರಾನ್ ಬದುಕುಳಿಯಲಿಲ್ಲ ಎಂದು ಹೇಳಲಾಗಿದೆ.
ಅಂದಹಾಗೇ, ಮೆಹ್ರಾನ್ ಏರ್ಪೋರ್ಟ್ಗೆ ಬಂದು ಉಳಿದಿದ್ದೇ ಒಂದು ರೋಚಕ ಕಥೆ. 1977ರ ದಶಕದಲ್ಲಿ ಇರಾನ್ ಆಡಳಿತದ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದರು. ಅದರಲ್ಲಿ ಮೆಹ್ರಾನ್ ಕೂಡ ಭಾಗವಹಿಸಿದ್ದರು. ಮುಂಚೂಣಿಯಲ್ಲಿದ್ದ ಇವರನ್ನು ಸರ್ಕಾರ ಗಡೀಪಾರು ಮಾಡಿತ್ತು. ಇವರ ತಾಯಿ ಮೂಲತಃ ಸ್ಕಾಟ್ಲ್ಯಾಂಡ್ನವರೇ ಆಗಿದ್ದರಿಂದ, ಇಂಗ್ಲೆಂಡ್ಗೆ ಹೋಗಿ ನೆಲೆಸಲು ಮೆಹ್ರಾನ್ ನಿರ್ಧರಿಸಿ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು, ಹೊರಟಿದ್ದರು.
ಆದರೆ ಇಂಗ್ಲೆಂಡ್ನಲ್ಲಿ ನೆಲೆಸಲು ಅವರು ಪಡೆದಿದ್ದ ದಾಖಲೆಗಳು ಇದ್ದ ಬ್ರೀಫ್ಕೇಸ್ ಮಾರ್ಗಮಧ್ಯೆ ಕಳವಾಗಿತ್ತು. ಹಾಗಾಗಿ ಇಂಗ್ಲೆಂಡ್ ಏರ್ಪೋರ್ಟ್ನಲ್ಲಿ ಇಳಿದರೂ, ಅವರಿಗೆ ಅಲ್ಲಿ ಉಳಿದುಕೊಳ್ಳುವ ಅವಕಾಶ ನಿರಾಕರಿಸಲಾಯಿತು. ಮತ್ತೆ ಅವರು ವಾಪಸ್ ಫ್ರಾನ್ಸ್ನ ಪ್ಯಾರಿಸ್ ಏರ್ಪೋರ್ಟ್ಗೆ ಬಂದರು. ಇಲ್ಲಿ ಕಾನೂನು ಬದ್ಧವಾಗಿ ಏರ್ಪೋರ್ಟ್ ಪ್ರವೇಶ ಮಾಡಿದ್ದರೂ, ಒಬ್ಬ ನಿರಾಶ್ರಿತನಾಗಿ ಫ್ರಾನ್ಸ್ನಲ್ಲಿ ವಾಸವಾಗಿರಲು ಅಗತ್ಯ ದಾಖಲೆ ಇರಲಿಲ್ಲ. ವಾಸಪತ್ರ ಪಡೆಯಲು ಅಗತ್ಯವಿರುವ ದಾಖಲೆಗಳೂ ಇರಲಿಲ್ಲ. ಹಾಗಾಗಿ ಏರ್ಪೋರ್ಟ್ನಲ್ಲಿಯೇ ನೆಲೆಸಿದ್ದರು. ಅಲ್ಲಿನವರಿಗೂ ಮೆಹ್ರಾನ್ ಕರಿಮಿ ನಾಸ್ಸೆರಿ ಆಪ್ತರಾಗಿದ್ದರು. ಏರ್ಪೋರ್ಟ್ ನಿವಾಸಿಯಾಗಿಯೇ ಖ್ಯಾತರಾಗಿದ್ದರು.
ಇದನ್ನೂ ಓದಿ: Modi in Bengaluru | ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ