Site icon Vistara News

ಹಿಜಾಬ್​ ಧರಿಸೋದಿಲ್ಲ ಎಂದ ಸುದ್ದಿ ನಿರೂಪಕಿ; ಸಂದರ್ಶನ ಕೊಡೋದಿಲ್ಲವೆಂದು ಹೋದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

Ebrahim Raisi

ಹಿಜಾಬ್​ ಬರೀ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ವಿಷಯ. ಇದೀಗ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಹಿಜಾಬ್​ಗಾಗಿ ತಮ್ಮ ಸಂದರ್ಶನವನ್ನೇ ರದ್ದುಗೊಳಿಸಿದ್ದಾರೆ !..ಇಬ್ರಾಹಿಂ ರೈಸಿ ಅವರನ್ನು ಸಿಎನ್​ಎನ್​ ವಾಹಿನಿಯ ಹಿರಿಯ ಸುದ್ದಿ ನಿರೂಪಕಿ ಕ್ರಿಸ್ಟಿಯಾನೆ ಅಮನ್‌ಪೋರ್ ಸಂದರ್ಶನ ಮಾಡಬೇಕಿತ್ತು. ನ್ಯೂಯಾರ್ಕ್​​ನಲ್ಲಿರುವ ವಿಶ್ವಸಂಸ್ಥೆ ಜನರಲ್​ ಅಸೆಂಬ್ಲಿಯಲ್ಲೇ ಸಂದರ್ಶನ ನಡೆಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಅಂದಹಾಗೇ, ಇರಾನಿಯನ್​ ಅಧ್ಯಕ್ಷ ಇಬ್ರಾಹಿಂ ರೈಸಿ, ಯುಎಸ್​ ನೆಲದಲ್ಲಿ ನೀಡುತ್ತಿರುವ ಮೊದಲ ಸಂದರ್ಶನವೂ ಇದಾಗಿತ್ತು. ಆದರೆ, ಅವರು ಕೊನೇ ಕ್ಷಣದಲ್ಲಿ ತಾವು ಯಾವ ಕಾರಣಕ್ಕೂ ಕ್ರಿಸ್ಟಿಯಾನೆ ಅಮನ್​ಪೋರ್​​ಗೆ ಸಂದರ್ಶನ ಕೊಡುವುದಿಲ್ಲ ಎಂದು ರೈಸಿ ಹೇಳಿದ್ದಾರೆ. ಕೊನೆಗೂ ಆ ಇಂಟರ್​ವ್ಯೂ ನಡೆಯಲಿಲ್ಲ.

ಅಮನ್​ಪೋರ್​ ಮೂಲತಃ ಇರಾನ್​ನವರು. ಸಿಎನ್​ಎನ್​​ನಲ್ಲಿ ಪತ್ರಕರ್ತೆಯಾಗಿ, ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಇರಾನ್​ ಅಧ್ಯಕ್ಷರನ್ನು ಇಂಟರ್​ವ್ಯೂ ಮಾಡುತ್ತಾರೆ ಎಂದು ಹೇಳಿದಾಗಲೇ, ಅವರಿಗೆ ಹಿಜಾಬ್​ ಧರಿಸಿಯೇ ಸಂದರ್ಶಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಹಿರಿಯ ನಿರೂಪಕಿ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ. ‘ನಾನು ಇಷ್ಟು ದಿನ, ಉಳಿದವರನ್ನೆಲ್ಲ ಹೇಗೆ ಸಂದರ್ಶನ ಮಾಡಿದ್ದೇನೋ, ಇದನ್ನೂ ಹಾಗೇ ಮಾಡುತ್ತೇನೆ. ನಾನು ಮೂಲತಃ ಇರಾನ್​ನವಳೇ ಆದರೂ, ನಾನಿರುವುದು ಯುಸ್​​ನಲ್ಲಿ. ಇಲ್ಲಿ ಹಿಜಾಬ್​ ಕಡ್ಡಾಯವಲ್ಲ, ಹಿಜಾಬ್​ ಧರಿಸಬೇಕು ಎಂಬ ಕಾನೂನೂ ಇಲ್ಲ. ಹಾಗಾಗಿ ನಾನೂ ಅದನ್ನು ಧರಿಸುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರು. ಹಾಗೇ, ಹಿಜಾಬ್​ ಧರಿಸದೆಯೇ ಸಂದರ್ಶನಕ್ಕೂ ಬಂದಿದ್ದರು. ಆದರೆ ಇರಾನ್ ಅಧ್ಯಕ್ಷ ಒಪ್ಪಲಿಲ್ಲ. ಹಿಜಾಬ್​ ಧರಿಸದ ನಿರೂಪಕಿ ಜತೆ ಮಾತಾಡುವುದಿಲ್ಲ ಎಂದು ಹೇಳಿ, ಹೊರಟುಹೋಗಿದ್ದಾರೆ.

ಸುದ್ದಿ ನಿರೂಪಕಿ ಅಮನ್​ಪೋರ್​ ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ, ತಾವು ಸಂದರ್ಶನಕ್ಕೆಂದು ಒಂದು ಕುರ್ಚಿಯಲ್ಲಿ ಕುಳಿತಿದ್ದು, ತಮ್ಮ ಎದುರಿನ ಕುರ್ಚಿ ಖಾಲಿ ಇರುವ ಫೋಟೋವೊಂದನ್ನೂ ಪೋಸ್ಟ್​ ಮಾಡಿದ್ದಾರೆ. ಕಳೆದ ವಾರ ಇರಾನ್​​ನಲ್ಲಿ ಮಾಹ್ಸಾ ಅಮಿನಿ ಎಂಬ ಯುವತಿ ಸರಿಯಾಗಿ ಹಿಜಾಬ್ ಧರಿಸದೆ ಇದ್ದಿದ್ದಕ್ಕೆ ಆಕೆಯನ್ನು ಪೊಲೀಸರು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆಕೆ ಮೃತಪಟ್ಟಿದ್ದಳು. ಈ ಘಟನೆ ಬೆನ್ನಲ್ಲೇ ಇರಾನ್​ನಲ್ಲಿ ಹಿಜಾಬ್​ ಮತ್ತು ನೈತಿಕ ಪೊಲೀಸ್​ಗಿರಿ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಮಹಿಳೆಯರಂದೂ ಹಿಜಾಬ್​ ವಿರೋಧಿಸಿ ತಮ್ಮ ಕೂದಲನ್ನೆಲ್ಲ ಕತ್ತರಿಸಿಕೊಂಡು ಹೋರಾಟ ಮಾಡುತ್ತಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಬಳಿ ಇದೇ ಹಿಜಾಬ್​ ವಿಚಾರವಾಗಿ ಮಾತುಕತೆ ನಡೆಸಲು ಸಿಎನ್​ಎನ್​ ನಿರೂಪಕಿ ಅಮನ್​ಪೋರ್ ನಿರ್ಧರಿಸಿದ್ದರು. ‘ಸಂದರ್ಶನಕ್ಕೆ ಇನ್ನೂ 40 ನಿಮಿಷ ಬಾಕಿ ಇತ್ತು. ಆಗ ಅಧ್ಯಕ್ಷರ ಸಹಾಯಕರೊಬ್ಬರು ಬಂದು, ಇದು ಪವಿತ್ರ ಮೊಹರಂ ಮಾಸವಾಗಿದ್ದರಿಂದ ನಾನು ಹಿಜಾಬ್​ ಧರಿಸಿಯೇ ಇಂಟರ್​ ವ್ಯೂ ಮಾಡಬೇಕು ಎಂದು ಇಬ್ರಾಹಿಂ ರೈಸಿ ಹೇಳುತ್ತಿದ್ದಾರೆ ಎಂದು ಹೇಳಿದರು. ಆದರೆ ನಾನು ಒಪ್ಪದೆ ಇದ್ದಾಗ, ಅಧ್ಯಕ್ಷರು ಸಂದರ್ಶನಕ್ಕೆ ಬರಲು ನಿರಾಕರಿಸಿದರು’ ಎಂದು ಅಮನ್​ಪೋರ್ ತಿಳಿಸಿದ್ದಾರೆ.

ಇದನ್ನೂ ಓದಿ: NIA Raid | ಹಿಜಾಬ್‌ ಗಲಾಟೆಯಿಂದ ಹಿಡಿದು ಆರ್‌ಎಸ್‌ಎಸ್‌ ಪ್ರಮುಖರ ಹತ್ಯೆವರೆಗೆ ಪಿಎಫ್‌ಐ ವಿರುದ್ಧ ಹಲವು ಆರೋಪ

Exit mobile version