ಟೆಹ್ರಾನ್: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಕರ್ನಾಟಕದ ಮುಸ್ಲಿಮರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಮುಸ್ಲಿಮ್ ರಾಷ್ಟ್ರವಾಗಿರುವ ಇರಾನ್‌ನಲ್ಲಿ ಮಹಿಳೆಯರು ತಮ್ಮ ಕೂದಲು ಕತ್ತರಿಸಿ ಮತ್ತು ಹಿಜಾಬ್ ಸುಡುವ ಮೂಲಕ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇರಾನ್ ಮಹಿಳೆಯರ ಈ ಆಕ್ರೋಶಕ್ಕೆ ಕಾರಣವಾಗಿದ್ದು, 22 ವರ್ಷದ ಯುವತಿ ಮಹ್ಸಾ ಅಮಿನಿ (Mahsa Amini) ಸಾವು. ಹಿಜಾಬ್ ನಿಯಮಗಳನ್ನು ಜಾರಿಗೊಳಿಸುವ ಮೊರಾಲಿಟಿ ಪೊಲೀಸ್(ನೈತಿಕ ಪೊಲೀಸರು) ಮಹ್ಸಾ ಅಮಿನಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಅವರ ವಶದಲ್ಲಿದ್ದಾಗಲೇ ಮಹ್ಸಾ ಸಾವಿಗೀಡಾಗಿದ್ದರು. ಈ ಸಾವು ಇರಾನ್‌ನಲ್ಲಿ ಮಹಿಳೆಯರ ಭಾರೀ ಪ್ರತಿಭಟನೆಗೆ ಕಾರಣವಾಗಿದೆ.
ಹಿಜಾಬ್ ನಿಯಮ ಉಲ್ಲಂಘಿಸಿದ್ಧಕ್ಕೆ ಯುವತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದೇ ವೇಳೆ, ಆಕೆ ಮೃತಳಾಗಿದ್ದಳು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಇರಾನ್ ಪೂರ್ತಿ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮಹ್ಸಾ ಅಮಿನಿ ಅಂತಿಮ ಕ್ರಿಯೆ ನಡೆಯುವ ದಿನ, ಅವರೆಲ್ಲರೂ ತಮ್ಮ ಕೂದಲು ಕತ್ತರಿಸಿದ ವಿಡಿಯೋ ಷೇರ್ ಮಾಡುತ್ತಿದ್ದಾರೆ. ಜತೆಗೆ, ಹಿಜಾಬ್ ಸುಟ್ಟು ಹಾಕುತ್ತಿದ್ದಾರೆ. ಕೆಲವು ಕಡೆ ಮಹಿಳೆಯರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಪೊಲೀಸರು ಟಿಯರ್ ಗ್ಯಾಸ್ ಬಳಸಿ ಅವರನ್ನು ಚದುರಿಸಿದ್ದಾರೆಂದು ತಿಳಿದು ಬಂದಿದೆ.
ಮಹ್ಸಾ ಅಮಿನಿ ಸಾವಿನ ಹಿನ್ನೆಲೆಯಲ್ಲಿ ಇರಾನ್‌ನ ಬಹಳಷ್ಟು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ದೇಶದ ನಿರಂಕುಶ ಆಡಳಿತದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಲಿಂಗ ಅಸಮಾನತೆಯ ಬಗ್ಗೆ ಅಸಮಾಧಾನವನ್ನು ತೋರ್ಪಡಿಸುತ್ತಿದ್ದಾರೆ. ಕೆಲವರು ಹಿಜಾಬ್‌ಗೆ ಸಂಬಂಧಿಸಿದ ಕಾನೂನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಅದರ ಅನುಷ್ಠಾನಕ್ಕಿರುವ ನೈತಿಕ ಪೊಲೀಸ್ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಸುತ್ತಿದ್ದಾರೆ.
ಆದರೆ, ಪೊಲೀಸರು ಬೇರೆಯದ್ದೇ ಕತೆ ಹೇಳುತ್ತಿದ್ದಾರೆ. ಮಹ್ಸಾಳನ್ನು ವಶಪಡಿಸಿಕೊಂಡಾಗ ಆಕೆ ಅನಾರೋಗ್ಯಪೀಡಿತಳಾಗಿದ್ದಳು. ಹಾಗಾಗಿ ಮೃತಪಟ್ಟಿದ್ದಾಳೆಂದು ವಾದಿಸುತ್ತಿದ್ದಾರೆ. ಆದರೆ, ಈ ಸರ್ಕಾರದ ಈ ವಾದವನ್ನು ಮಹಿಳೆಯರು ಒಪ್ಪುತ್ತಿಲ್ಲ. ಬದಲಿಗೆ ಹಿಜಾಬ್ ನಿಯಮಗಳ ವಿರುದ್ಧ ದಂಗೆ ಎದ್ದಿದ್ದಾರೆ. ಇರಾನ್‌ನಲ್ಲಿ 7 ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ | GOOD NEWS | ಕಚ್ಚಾತೈಲ ದರ 5% ಇಳಿಕೆ, ಇರಾನ್‌ನಿಂದಲೂ ತೈಲ ಪೂರೈಕೆಯ ನಿರೀಕ್ಷೆ